ಉಡುಪಿ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಎಲ್ಲ ನೀರಾವರಿಗೆ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಸಂಭವನೀಯ ವರದಿ ಸಿದ್ಧಪಡಿಸಿ ಪ್ರತ್ಯೇಕ ಸಭೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಕರೆಯುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಸಚಿವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಸಮಗ್ರ ಪರಿಶೀಲನೆ ನಡೆಸಿದರಲ್ಲದೆ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಯೋಜನೆ, ಕುಡ್ಸೆಂಪ್ ಯೋಜನೆ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಯೋಜನೆ ಹಾಗೂ ವಾರಾಹಿಯನ್ನೊಳಗೊಂಡಂತೆ ನೀರಾವರಿ ಸಂಬಂಧ ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಸಂಭವನೀಯ ವರದಿ ಸಿದ್ಧಪಡಿಸಿ ಪ್ರತ್ಯೇಕ ಸಭೆಯನ್ನು ನಡೆಸಲು ಸೂಚನೆ ನೀಡಿದರು.
ವಾರಾಹಿಯಿಂದ ಉಡುಪಿ ತನಕ ಕುಡಿಯುವ ನೀರು ಪೂರೈಸಲು ಯೋಜನೆಗೆ ಸಾಮರ್ಥ್ಯವಿದ್ದು ಇದನ್ನು ಬಳಸಿಕೊಳ್ಳಬಹುದು ಎಂದು ವಿಧಾನಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸಚಿವರ ಗಮನಸೆಳೆದಾಗ , ವಿಧಾನಪರಿಷತ್ ಶಾಸಕ ಪ್ರತಾಪ್ ಚಂದ್ರ ಶೆಟ್ಟಿ ಅವರು ದನಿಗೂಡಿಸಿದರು. ಯೋಜನೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನಿಗದಿಯಾದಷ್ಟು ಕೃಷಿ ಭೂಮಿ ಸದ್ಯ ಇಲ್ಲದಿರುವುದರಿಂದ ಉಳಿದಿರುವ ರೈತರಿಗೆಲ್ಲ ನೀರು ಹಂಚಿ ಕುಡಿಯಲು ನೀರು ಸಿಗಬಹುದು ಎಂದು ಪ್ರತಾಪ್‌ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.
ಕೃಷಿ ಹಾಗೂ ಕುಡಿಯುವ ನೀರು ಸಂಬಂಧ ರೂಪಿಸಿದ ಯೋಜನೆಗಳ ಅನುಮೋದನೆ ಸಂಬಂಧ ರೂಪಿಸಲಾದ ಯೋಜನೆಗಳ ಪ್ರತಿಯನ್ನು ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುವೆಚ್ಚ ಪಾವತಿಗಾಗಿ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸಿ ಎಂದು ಐಟಿಡಿಪಿ ಅಧಿಕಾರಿಗಳಿಗೆ ಮಹೇಶ್ವರ್ ರಾವ್ ಹೇಳಿದರಲ್ಲದೆ, ಭತ್ತಕ್ಕೆ ಬೆಂಬಲ ಬೆಲೆಯನ್ನು ಬೇಗ ನೀಡುವಂತೆಯೂ ಸಚಿವರು ಕಾರ್ಯದರ್ಶಿಗಳ ಗಮನಸೆಳೆದರು.
ಜಿಲ್ಲೆಯ ವಸತಿಯೋಜನೆಗಳ ಅಭಿವೃದ್ಧಿಯನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಗ್ರಾಮೀಣ ವಸತಿ ಯೋಜನೆಯಡಿ 3638 ಮನೆ ನಿರ್ಮಾಣ ವಾರ್ಷಿಕ ಗುರಿ ನಿಗದಿಯಾಗಿದ್ದು, 1947 ಮನೆಗಳು ಸಂಪೂರ್ಣಗೊಂಡಿವೆ, 1691 ಇನ್ನೂ ನಿರ್ಮಾಣ ಆರಂಭವಾಗಿಲ್ಲ. ಕಾರ್ಕಳ ತಾಲೂಕಿಗೆ 774, ಕುಂದಾಪುರ 1547, ಉಡುಪಿ 1317 ಮನೆಗಳು ಎಂದು ಯೋಜನಾ ನಿರ್ದೇಶಕರಾದ ನಯನಾ ಮಾಹಿತಿ ನೀಡಿದರು. ವಸತಿ ಯೋಜನೆಯ ಗುರಿಯನ್ನು ಸಮಯಮಿತಿಯೊಳಗೆ ಸಂಪೂರ್ಣಗೊಳಿಸಲು ಕಾರ್ಯದರ್ಶಿಗಳು ಸೂಚಿಸಿದರು.
ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಸುರಕ್ಷೆಗೆ ಒತ್ತು ನೀಡಿ. ಕುಂದಾಪುರ, ಬೈಂದೂರಿಗೆ ಗಮನಹರಿಸಿ ಎಂದು ಪೊಲೀಸ್ ಇಲಾಖೆಗೆ ಸಚಿವರು ಸೂಚಿಸಿದರು. ಪರ್ಮಿಟ್ ಪಡೆದ ಪ್ರದೇಶಗಳಿಗೆ ಖಾಸಗಿ ಬಸ್ಸುಗಳು ಓಡಾಟ ನಡೆಸದಿದ್ದರೆ ಪರ್ಮಿಟ್ ಕ್ಯಾನ್ಸಲ್ ಮಾಡಿ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳಿ ಎಂದು ಆರ್ ಟಿ ಒ ಮತ್ತು ಕೆ ಎಸ್ ಆರ್ ಟಿಸಿ ಯವರಿಗೆ ಇದೇ ಸಂದರ್ಭ ಸಚಿವರು ಸೂಚನೆ ನೀಡಿದರು. ಮೀನುಗಾರಿಕೆ ಮನೆ ಕಟ್ಟುವವರಿಗೆ ಸಮಗ್ರ ಮಾಹಿತಿಯನ್ನು ಪಂಚಾಯಿತಿ ಮೂಲಕ ನೀಡಿ ಎಲ್ಲರಿಗೂ ಜಾಬ್ ಕಾರ್ಡ್ ಹಾಗೂ ಮನೆ ವಿತರಿಸಲು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಸಚಿವರು ನೀಡಿದರು.
ನಿವೇಶನ ಹಕ್ಕುಪತ್ರ, 94 ಸಿ, 94ಸಿಸಿ, ಬಂದೂಕು ಪರವಾನಿಗೆ, ಮೆಸ್ಕಾಂನಿಂದ ಎನ್‌ಒಸಿ ನೀಡುವ ಬಗ್ಗೆ, ಆರ್ ಟಿ ಸಿ ಯಲ್ಲಿ ಹೆಸರು ಬದಲಾವಣೆ ಕುರಿತು, ಅರಣ್ಯ ಇಲಾಖೆ ಜನಪರವಾಗಿ ಕ್ರಮಕೈಗೊಳ್ಳುವ ಬಗ್ಗೆ, ಗಂಗಾ ಕಲ್ಯಾಣದ ವಿದ್ಯುದ್ದೀಕರಣದ ಬಗ್ಗೆ, ಕುಂದಾಪುರ ತಾಲೂಕಿನ ಕೊಡೇರಿ ಮೀನುಗಾರಿಕಾ ಬಂದರಿನ ಕಾಮಗಾರಿ ಬಗ್ಗೆ ನಾಮನಿರ್ದೇಶಿತ ಸದಸ್ಯರಾದ ರಾಜು ಪೂಜಾರಿ ಮತ್ತು ಉಮೇಶ್ ಎ ನಾಯ್ಕ್ ಸಭೆಯ ಗಮನಸೆಳೆದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಶೆಟ್ಟಿ, ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ವೆಂಕಟೇಶ್, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.