ಕರಾವಳಿ

ಅಕ್ರಮ ಮರಳು ಅಡ್ಡೆಗೆ ಪೊಲೀಸರ ದಾಳಿ : ತಪ್ಪಿಸಲು ನದಿಗೆ ಹಾರಿದ ವ್ಯಕ್ತಿ ಸಾವು – ಉದ್ರಿಕ್ತರಿಂದ ಪೊಲೀಸ್ ವಾಹನಗಳ ಜಖಂ

Pinterest LinkedIn Tumblr

sand_ride_died

ಮಂಗಳೂರು: ಅಕ್ರಮ ಮರಳು ದಕ್ಕೆಗೆ ಪೊಲೀಸರ ದಾಳಿ ಸಂದರ್ಭ ಪೊಲೀಸ್ ದಾಳಿಗೆ ಹೆದರಿ ಮರಳುಗಾರಿಕೆ ಕಾರ್ಮಿಕನೋರ್ವ ನದಿಗೆ ಹಾರಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಮೂಲರಪಟ್ಣ ಫುಲ್ಗುಣಿ ನದಿಯ ಆಳ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಮುತ್ತೂರು ಮಾರ್ಗದಂಗಡಿ ನಿವಾಸಿ ಪೊಡಿಯ ಬ್ಯಾರಿಯವರ ಪುತ್ರ ಮಹಮ್ಮದ್ ಶರೀಫ್( 30) ಮೃತಪಟ್ಟವರು.

ಬಂಟ್ವಾಳ ಪೊಲೀಸರು ಮತ್ತೂರು ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಫಲ್ಗುಣಿ ನದಿಯಲ್ಲಿ ಮರಳು ತೆಗೆಯುತ್ತಿದ್ದ ಕಾರ್ಮಿಕ ಶರೀಫ್ ಎಂಬಾತ ನದಿಗೆ ಹಾರಿ ನಾಪತ್ತೆಯಾಗಿದ್ದ. ಇದೇ ಸಂದರ್ಭ ದೋಣಿಯಲ್ಲಿ ಇದ್ದಂತಹ ಜೈನುದ್ದೀನ್ ಮತ್ತು ನಾಸಿರ್ ನೀರಿಗೆ ದುಮುಕಿ ಈಜಿ ಪಾರಾಗಿದ್ದರು. ಅವರಲ್ಲಿ ಜೈನುದ್ದೀನ್ಗೆ ಕಾಲಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಎಂದು ಪೊಲೀಸ್ ಮಾಹಿತಿ ತಿಳಿಸಿದೆ.

ಪೊಲೀಸರು ಮತ್ತು ಅಗ್ನಶಾಮಕ ದಳದಿಂದ ಶರೀಫ್‌ಗಾಗಿ ಹುಡುಕಾಟ ನಡೆಸಲಾಗಿತ್ತು.ನೀರುಪಾಲಾಗಿದ್ದ ಷರೀಫ್‌ ಮೃತ ದೇಹವನ್ನುಈಜುಗಾರರು ನೀರಿನಿಂದ ಮೇಲಕ್ಕೆ ತಂದಿದ್ದು, ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತ ದೇಹವನ್ನು ಕುಟುಂಬಕ್ಕೆ ಬಿಟ್ಟುಕೊಡಲಾಗಿದ್ದು, ಆಸ್ಪತ್ರೆ ಮತ್ತು ಘಟನೆ ಸಂಭವಿಸಿದ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಶರೀಫ್‌ ಸಾವಿನಿಂದ ಆಕ್ರೋಶ ವ್ಯಕ್ತಪಡಿಸಿರುವ ಉದ್ರಿಕ್ತರು ಪೊಲೀಸ್ ವಾಹನ ಜಖಂಗೊಳಿಸಿದ್ದಾರೆ. ಹೀಗಾಗಿ ಇಲ್ಲಿನ ಮುಲಾರಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಗುಂಪಿನಲ್ಲಿದ್ದ ಕೆಲವರು ಪೊಲೀಸರ ವಿರುದ್ಧ ತಿರುಗಿ ಬೀಳುವ ಮೂಲಕ ಮೂವರು ಪೊಲೀಸ್ ಸಿಬಂದಿಗೆ ಕಪಾಳಮೋಕ್ಷ ನಡೆಸಿ ಮೊಬೈಲ್ ಕಸಿದು ಎಸೆದಿದ್ದರು. ಕಡಿಮೆ ಸಂಖ್ಯೆಯ ಸಿಬಂದಿ ಹೊಂದಿದ್ದ ಪೊಲೀಸರು ಯಾವುದೇ ಕ್ರಮಕೈಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಮತ್ತು ಪೊಲೀಸರು ತಿಳಿಸಿದ್ದಾರೆ

ಘಟನೆಯಲ್ಲಿ ಪೊಲೀಸ್ ಜೀಪ್ ಗೆ ಹಾನಿ ಮಾಡಲಾಗಿದ್ದು ಅದರ ಹಿಂಬದಿ ಗಾಜಿಗೆ ಕಲ್ಲಿನಿಂದ ಜಜ್ಜಿ ಒಡೆಯಲಾಗಿದೆ. ಪೊಲೀಸರ ಇನ್ನೊಂದು ವಾಹನಕ್ಕೂ ಹಾನಿ ಮಾಡಿದ್ದು ಅದರ ಬಾಗಿಲನ್ನು ಜಗ್ಗಿ ಬೆಂಡ್ ಮಾಡಲಾಗಿದ್ದು ವಾಹನಕ್ಕೆ ಅಲ್ಲಲ್ಲಿ ಗುದ್ದಿ ಹಾನಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವೃತ್ತ ನಿರೀಕ್ಷರು, ಸಬ್ ಇನ್ಸ್ಪೆಕ್ಟರ್, ಮತ್ತು ಇಬ್ಬರು ಸಿಬಂದಿ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರ ಮಾಹಿತಿ ತಿಳಿಸಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಜಿ. ರಾವ್ ಬೋರಸೆ, ಅಡಿಷನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ಸಿ.ಆರ್. ರವೀಸ್ ಮುಂತಾದ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಹೆಚ್ಚಿನ ಪೊಲೀಸ್ ಸಿಬಂದಿಯನ್ನು ಕರೆಸಿಕೊಳ್ಳಲಾಗಿತ್ತು.ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ಅವರಿಗೆ ಅಕ್ರಮ ಮರಳು ಸಾಗಾಟದ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷ ಬಿ. ಕೆ.ಮಂಜಯ್ಯ, ಬಂಟ್ವಾಳ ನಗರ ಠಾಣೆ ಎಸ್‌ಐ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಮತ್ತು ಸುಮಾರು ಎಂಟು ಮಂದಿ ಸಿಬಂದಿ ಸ್ಥಳಕ್ಕೆ ಹೋಗಿದ್ದರು, ಮರಳು ಸಾಗಾಟಕ್ಕೆ ಬಂದಿದ್ದ ಎಂಟು ಟಿಪ್ಪರ್, ಒಂದು ಹಿಟಾಚಿ ಘಟನೆಯ ಸಂದರ್ಭ ಸ್ಥಳದಿಂದ ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ.

ಘಟನೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಡಿಷನಲ್ ಎಸ್ಪಿ ಅವರು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.