ಉಡುಪಿ: ಆನಗಳ್ಳಿ ಭಾಗದಲ್ಲಿ ಇತ್ತೀಚೆಗೆ ಹಲವಷ್ಟು ಅಹಿತಕರ ಘಟನೆಗಳು ನಡೆಯುತ್ತಿದ್ದು ನನ್ನ ಸಹೋದರ ಮೇಲೆಯೂ ಮಾರಣಾಂತಿಕ ಹಲ್ಲೆಯನ್ನು ಇಲ್ಲಿನ ಕೆಲವು ವ್ಯಕ್ತಿಗಳು ಮಾಡಿದ್ದಾರೆ. ಇಲ್ಲಿನ ಓರ್ವ ವ್ಯಕ್ತಿಯೇ ಇದಕ್ಕೆ ಸೂತ್ರದಾರನಾಗಿದ್ದು ಈ ಸನ್ನಿವೇಶವನ್ನು ತಾನು ಪ್ರತಿಭಟಿಸಲಿದ್ದೇನೆ. ಮುಂದಿನ ತಿಂಗಳು 6 ನೇ ತಾರಿಖಿನಂದು ಆ ವ್ಯಕ್ತಿಯ ಮನೆಯ ಎದುರುಗಡೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ಖ್ಯಾತ ರಂಗಕರ್ಮಿ ಸುರೇಶ್ ಆನಗಳ್ಳಿ ಕುಂದಾಪುರದಲ್ಲಿ ಸುದ್ದಿಗೋಷ್ಟಿ ನಡೆಸಿ ಹೇಳಿದ್ದಾರೆ.
ತನ್ನ ಸಹೋದರ ಸುದೀಂದ್ರ ಆಚಾರ್ಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಸಂಘಸಂಸ್ಥೆಯಲ್ಲಿಯೂ ಸಕ್ರೀಯನಾಗಿದ್ದ. ಮಾರ್ಚ್ 27 ರಂದು ಸ್ಥಳೀಯ ಮಕ್ಕಳನ್ನು ಒಗ್ಗೂಡಿಸಿ ಅಲ್ಲಿ ಯಕ್ಷಗಾನ ತರಬೇತಿ ನೀದಿ ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಅದಕ್ಕಾಗಿ ಕಟ್ಟಿದ ಬ್ಯಾನರನ್ನು ಕೆಲವು ದುಷ್ಕರ್ಮಿಗಳು ತೆರವು ಮಾಡಿದ್ದರು. ಆದರೇ ಬ್ಯಾನರ್ ಪುನಃ ಕಟ್ಟಿ ಪೊಲಿಸರಿಗೆ ಸುದ್ದ್ದಿ ತಿಳಿಸಿದ ಕಾರಣಕ್ಕಾಗಿ ಇತ್ತೀಚೆಗೆ ರಾತ್ರಿ ವೇಳೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸದ್ಯ ಆತ ಹಾಸಿಗೆ ಹಿಡಿದಿದ್ದು ಆಸ್ಪತ್ರೆಯಲ್ಲಿರುವ ಆತನ ಕುಶಲೋಪರಿ ವಿಚಾರಿಸಲು ಬರುವವರಿಗೂ ಧಮ್ಕಿ ಹಾಕಲಾಗುತ್ತಿದೆ ಎಂದು ಸುರೇಶ್ ಆನಗಳ್ಳಿ ಆರೋಪಿಸಿದ್ದಾರೆ. ಈ ಬಗ್ಗೆ ಪೊಲಿಸರು ಕೂಡ ಆರೋಪಿಗಳ ಪರವಾಗಿದ್ದು ಈವರೆಗೂ ಯಾರ ಬಂಧನವೂ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.