ಉಡುಪಿ: ಸಮಾನತೆ, ಸಮಪಾಲು-ಸಮಬಾಳು ಎಂಬ ನಡೆಯಲ್ಲಿ ಬಾಬ ಸಾಹೇಬ್ ಅಂಬೇಡ್ಕರ್ ಸಾಗಿದ್ದು ಅವರ ಆದರ್ಶದಲ್ಲಿ ಬದುಕುವ ದಲಿತರ ಬಗೆಗೆ ಉಡುಪಿಯ ಪೇಜಾವರ ಶ್ರೀಗಳು ನೀಡಿದ ಹೇಳಿಕೆ ತಪ್ಪಾಗಿದೆ. ದಲಿತರ ಬಗ್ಗೆ ಕೀಳರಿಮೆ ಭಾವನೆ ತೊಡೆದುಹಾಕಿ ಈ ಕೂಡಲೇ ಅವರು ಚರ್ಚೆಗೆ ಬರಬೇಕು, ದಲಿತರ ಮನೆಯಲ್ಲಿಯೇ ಚರ್ಚೆ ನಡೆಸಲಿ ಬದಲಾಗಿ ಮಠದಲ್ಲಿ ಬೇಡ ಎಂದು ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಇದರ ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರು ತಿಳಿಸಿದ್ದಾರೆ.
(ಉದಯಕುಮಾರ್ ತಲ್ಲೂರು)
ಗುರುವಾರ ಶ್ರೀಗಳು ಪ್ರೆಸ್ ಮೀಟ್ ಕರೆದು ನೀಡಿದ್ದ ಹೇಳಿಕೆಗೆ ಉದಯ್ ಕುಮಾರ್ ಅವರು ಟಾಂಗ್ ನೀಡಿದ್ದಾರೆ.
(ಪೇಜಾವರ ಶ್ರೀ)
ದಲಿತರಿಗೊಂದು ಮಠ ನೀಡಲಿ…
ಪೇಜಾವರ ಶ್ರೀಗಳು ವೈದಿಕ ಧರ್ಮದ ಬೋಧಕರಾಗಿದ್ದು, ವೈದಿಕ ಪದ್ಧತಿಯ ಆರಾಧಕರಾಗಿದ್ದಾರೆಯೇ ಹೊರತು, ಹಿಂದೂ ಧರ್ಮದ ಅನಿಷ್ಠ ಪದ್ಧತಿಯ ವಿರುದ್ಧ ಎಲ್ಲೂ ಧ್ವನಿ ಎತ್ತಲಿಲ್ಲ. ಭಾರತ ದೇಶದ ಸಂವಿಧಾನವನ್ನು ಪೇಜಾವರ ಶ್ರೀಗಳು ಒಪ್ಪಲೇ ಬೇಕು. ಈ ದೇಶದ ಕಾನೂನನ್ನು ಗೌರವಿಸಲೇ ಬೇಕು. ಆದರೂ ಕೂಡ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪಂಕ್ತಿ ಭೇದ ಮಾಡಿ, ಬ್ರಾಹ್ಮಣರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಬ್ರಾಹ್ಮಣರಿಗೆ ನೀಡುವ ಮಂತ್ರ, ವಟು ದೀಕ್ಷೆ, ಪುರೋಹಿತ್ಯ, ಸಂಸ್ಕ್ರತ ಕಲಿಕೆ ಮೊದಲಾದವುಗಳನ್ನು ಹಿಂದೂ ಧರ್ಮದ ಎಲ್ಲಾ ವರ್ಗದವರಿಗೂ ನೀಡದಿರುವುದು ಯಾಕೆ ಎಂಬ ಬಗ್ಗೆ ಪ್ರಶ್ನೆ ಮಾಡಿದ ಉದಯಕುಮಾರ್ ಅವರು ಹಿಂದೂಗಳು ನಾವೆಲ್ಲ ಒಂದೇ ಎಂದ ಎಂಬ ಮಾತು ಹೇಳಿದ ಶ್ರೀಗಳು ಬ್ರಾಹ್ಮಣರು ಮತ್ತು ದಲಿತರ ಮಧ್ಯೆ ಯಾಕೆ ಕಂದಕ ಸ್ರಷ್ಟಿಮಾಡುತ್ತಿರುವುದು ಸರಿಯಲ್ಲ. ಇನ್ನು ಮುಂದೆಯಾದರೂ ದಲಿತರಿಗೆ ಪುರೋಹಿತ್ಯ ದೀಕ್ಷೆ ಕೊಟ್ಟು, ಅಷ್ಟಮಠ ಒಂದರಲ್ಲಿ ಒಂದು ಮಠವನ್ನು ದಲಿತರಿಗೆ ನೀಡಿ ಆ ಮಠಕ್ಕೆ ದಲಿತರನ್ನೇ ಪೀಠಾಧೀಪತ್ಯಕ್ಕೆ ನೇಮಕ ಮಾಡಲಿ ಎಂದರು.
ಶ್ರೀ ಕೃಷ್ಣ ಮಠ ಯಾರದ್ದು..?
ಉಡುಪಿಯ ಶ್ರೀ ಕೃಷ್ಣ ಮಠವು ಬ್ರಾಹ್ಮಣರ ಮಠವೇ?, ಅಥವಾ ಸಾರ್ವಜನಿಕ ಮಠವೇ? ಈ ಬಗ್ಗೆ ಪೇಜಾವರ ಶ್ರೀಗಳು ಸಾರ್ವಜನಿಕರಿಗೆ ಸ್ಪಷ್ಟನೇ ನೀಡಬೇಕು. ಗೋ ಮಾಂಸ ತಿಂದರೆ ಮಹಾಪಾಪವಾದರೇ ಆಕಳು ಹಾಲನ್ನು ಕದ್ದು ಕುಡಿಯುವುದು ಮಹಾ ಪಾಪವಲ್ಲವೇ? ಹಿಂದೂ ಧರ್ಮದ ಆಹಾರ ಪದ್ಧತಿ ಮಾಂಸಾಹಾರವೇ ಅಥವಾ ಸಸ್ಯಹಾರವೇ ಎಂಬ ಬಗ್ಗೆ ಪೇಜಾವರ ಶ್ರೀಗಳು ಸ್ಪಷ್ಟನೆ ನೀಡಲಿ. ದಲಿತರ ಕೇರಿಗೆ ಪಾದ ಯಾತ್ರೆ ಬಿಟ್ಟು, ದಲಿತರ ಮನೆಯಲ್ಲಿ ಉಳಿದು ದಲಿತರು ಮಾಡಿರುವ ಊಟ, ನೀರು ಸೇವನೆ ಮಾಡಿ, ಬ್ರಾಹ್ಮಣರು ಮತ್ತು ದಲಿತರ ನಡುವೆ ಇರುವ ಅನಿಷ್ಠ ಪದ್ಧತಿಯನ್ನು ದೂರ ಮಾಡಲಿ.
ದಲಿತರು ಸಮಾಜದಲ್ಲಿ ಮನುಷ್ಯರಂತೆ ಬದುಕಲು ಸಂವಿಧಾನದಲ್ಲಿ ಸಾತಂತ್ರ್ಯ ಸಮಾನತೆ ಸಹೋದರತ್ವಕ್ಕಾಗಿ ಹೋರಾಟ ಮಾಡಿ ಹಕ್ಕುಗಳನ್ನು ನೀಡಿದ ಮಾರ್ಗದಾತ ಮಹಾನ್ ಚೇತನ ಭಾರತರತ್ನ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಹೊರತು ಪೇಜಾವರ ಶ್ರೀಗಳಲ್ಲ. ಈ ಬಗ್ಗೆ ಚರ್ಚೆ ಮಾಡಲು ಪೇಜಾವರ ಶ್ರೀಗಳವರನ್ನು ದಲಿತರ ಮನೆಗೆ ಆಹ್ವಾನ ನೀಡಿದ್ದೇವೆ ಎಂದರು.