ಕರಾವಳಿ

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ಕೊಲೆ ಪ್ರಕರಣ : 7 ಆರೋಪಿಗಳು ಆರೆಸ್ಟ್ : ಜಮೀನು ವಿವಾದದ,ದ್ವೇಷ ಕೊಲೆಗೆ ಕಾರಣವಾಯಿತೇ…

Pinterest LinkedIn Tumblr

ismail-murder_arest-1

ಮಂಗಳೂರು, ಅ.3: ಕಾಂಗ್ರೆಸ್ ಮುಖಂಡ ಸುಳ್ಯ ತಾಲೂಕಿನ ಬೆಳ್ಳಾರೆಯ ಇಸ್ಮಾಯಿಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದ.ಕ.ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ ಎಂದು ದ.ಕ.ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ ಪ್ರಕಟಿಸಿದ್ದಾರೆ.

ಸುಳ್ಯ ತಾಲೂಕಿನ ಐವರ್ನಾಡು ಮಸೀದಿ ಬಳಿ ಸೆ.23ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳದ ಕಳಾಯಿಮನೆ ನಿವಾಸಿ ಅಬ್ದುಲ್ ರಶೀದ್ ಯಾನೆ ಮುನ್ನ (32), ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಅಬ್ಬಾಸ್ ಯಾನೆ ಇಬ್ನು ಅಬ್ಬಾಸ್ (32)ರನ್ನು ಉಡುಪಿಯ ಮಟ್ಟು ಬಳಿ ಹಾಗೂ ಸುಪಾರಿ ಹಂತಕ ಕೆದಿಲ ಗ್ರಾಮದ ಉಮರ್ ಫಾರೂಕ್ ಎ.ಕೆ. (32) ಎಂಬವರನ್ನು ಪುತ್ತೂರಿನ ಕಡಬ ಬಳಿಯಿಂದ ರವಿವಾರ ಬಂಧಿಸಿರುವುದಾಗಿ ಎಸ್ಪಿ ತಿಳಿಸಿದರು.

ismail-murder_arest-2

ಸೋಮವಾರ ಸಂಜೆ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿಯವರು, ಕೊಲೆಗೆ ಯೋಜನೆ ಹಾಕಿ ತಂತ್ರಗಾರಿಕೆ ರೂಪಿಸಿದ ಇತರ ನಾಲ್ವರು ಆರೋಪಿಗಳಾದ ರಹ್ಮಾನ್ ಯಾನೆ ರಹೀಂ ಬೆಳ್ಳಾರೆ, ಯಾಕೂಬ್ ಬಿಜೈ, ಫಾರೂಕ್ ಬೆಳ್ಳಾರೆ ಮತ್ತು ಸುಹೈಲ್ ನಂದಾವರ ಅವರನ್ನು ಸೋಮವಾರ ಬಂಧಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ರಿಟ್ಝ್ ಕಾರು ಮತ್ತು ಸೊತ್ತನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದರು.

ರಹ್ಮಾನ್ ಬೆಳ್ಳಾರೆ ಕುಟುಂಬ ಮತ್ತು ಬೆಳ್ಳಾರೆಯ ಝಕರಿಯ್ಯಾ ಜುಮಾ ಮಸೀದಿ ಆಡಳಿತ ಮಂಡಳಿಗಳ ನಡುವೆ ಹಲವು ವರ್ಷಗಳಿಂದ ಜಮೀನಿಗೆ ಸಂಬಂಧಿಸಿದ ವಿವಾದ ಇತ್ತು. ಈ ವಿವಾದದಲ್ಲಿ ಇಸ್ಮಾಯೀಲ್ ಬೆಳ್ಳಾರೆ ಅವರು ಮಸೀದಿ ಆಡಳಿತ ಮಂಡಳಿಯನ್ನು ಬೆಂಬಲಿಸಿದ್ದರು. ಇದರಿಂದಾಗಿ ರಹ್ಮಾನ್ ಬೆಳ್ಳಾರೆ ಮತ್ತು ಮೃತ ಇಸ್ಮಾಯೀಲ್ ನಡುವೆ ದ್ವೇಷ ಉಂಟಾಗಿತ್ತು. ಅಲ್ಲದೆ, ಇದೇ ವಿಷಯದಲ್ಲಿ ಯಾಕೂಬ್ ಬಿಜೈ ಮತ್ತು ಇಸ್ಮಾಯೀಲ್ ಬೆಳ್ಳಾರೆ ಮಧ್ಯೆಯೂ ದ್ವೇಷ ಇತ್ತು.

ಈ ಇಬ್ಬರೂ ಆರೋಪಿಗಳು ಸೇರಿ ಇಸ್ಮಾಯೀಲ್ ಬೆಳ್ಳಾರೆ ಅವರ ಹತ್ಯೆಗೆ ಸಂಚು ರೂಪಿಸಿ, ಸುಪಾರಿ ಹಂತಕ ಉಮರ್ ಫಾರೂಕ್ನನ್ನು ಸಂಪರ್ಕಿಸಿದ್ದರು. ಉಮರ್ ಫಾರೂಕ್ಗೆ ಸುಪಾರಿ ಹಣ ಮತ್ತು ತಕರಾರು ಜಮೀನಿನಲ್ಲಿ ಪಾಲು ನೀಡುವುದಾಗಿ ತಿಳಿಸಿದ್ದರು. ಆರೋಪಿಗಳ ಮಧ್ಯೆ ನಡೆದ ಮಾತುಕತೆಯಂತೆ ರಹ್ಮಾನ್ ಬೆಳ್ಳಾರೆ ಮತ್ತು ಯಾಕೂಬ್ ಅವರು ಮಂಗಳೂರಿಗೆ ಬಂದು ಸುಪಾರಿಯ ಸ್ವಲ್ಪ ಹಣವನ್ನು ಉಮರ್ ಫಾರೂಕ್ಗೆ ನೀಡಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಭೂಷಣ್ ಗುಲಾಬ್ ರಾವ್ ಬೊರಸೆ ವಿವರಿಸಿದರು.

ismail-murder_arest-3

ಇಸ್ಮಾಯೀಲ್ ಅವರ ಹತ್ಯೆಗೆ ಹೊಂಚು ಹಾಕುತ್ತಿದ್ದ ಹಂತಕರ ತಂಡವು ಕಳೆದ ಮೂರು ವಾರಗಳಿಂದ ಅವರನ್ನು ಹಿಂಬಾಲಿಸುತ್ತಿತ್ತು. ಸೆ. 23ರಂದು ಶುಕ್ರವಾರ ಮಧ್ಯಾಹ್ನ ಇಸ್ಮಾಯೀಲ್ ಬೆಳ್ಳಾರೆ ಐವರ್ನಾಡು ಮಸೀದಿಗೆ ಪ್ರಾರ್ಥನೆಗೆಂದು ಆಗಮಿಸಿದ್ದರು. ಪ್ರಾರ್ಥನೆ ಮುಗಿಸಿ ಹೊರಗೆ ಬರುತ್ತಿದ್ದಂತೆ ರಿಟ್ಝ್ ಕಾರಿನಲ್ಲಿ ಕಾಯುತ್ತಿದ್ದ ಹಂತಕರು ಇಸ್ಮಾಯೀಲ್ರನ್ನು ಹಿಂಬಾಲಿಸಿ ಮಚ್ಚಿನಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾರೆ. ಇಸ್ಮಾಯೀಲ್ ಅವರು ತಮ್ಮ ಬಳಿಯಲ್ಲಿ ರಿವಾಲ್ವರ್ ಹೊಂದಿದ್ದರೂ ಅದನ್ನು ಬಳಸುವಷ್ಟರೊಳಗೆ ಹಂತಕರು ತಮ್ಮ ಕೃತ್ಯವನ್ನು ಎಸಗಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಪುತ್ತೂರು ಎಎಸ್ಪಿ ರಿಷ್ಯಂತ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್, ಡಿಸಿಐಬಿ ಪೊಲೀಸ್ ನಿರೀಕ್ಷಕ ಅಮಾನುಲ್ಲಾ, ಸುಳ್ಯ ವೃತ್ತ ನಿರೀಕ್ಷಕ ಕೃಷ್ಣಯ್ಯ, ಬೆಳ್ಳಾರೆ ಎಸ್ಸೈ ಚೆಲುವಯ್ಯ, ಸುಳ್ಯ ಎಸ್ಸೈ ಚಂದ್ರಶೇಖರ್, ಬೆಳ್ತಂಗಡಿ ಎಸ್ಸೈ ರವಿ ಹಾಗೂ ಜಿಲ್ಲಾ ಪೊಲೀಸ್ ಸಿಬ್ಬಂದಿ, ಡಿಸಿಐಬಿ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಭೂಷಣ್ ಗುಲಾಬ್ ರಾವ್ ಬೊರಸೆ ಅವರು ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ವೇದಮೂರ್ತಿ, ಪುತ್ತೂರು ಎಎಸ್ಪಿ ರಿಷ್ಯಂತ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ಡಿಸಿಐಬಿ ಪೊಲೀಸ್ ನಿರೀಕ್ಷಕ ಅಮಾನುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Comments are closed.