ಹೆಬ್ರಿ, ಅ.3: ಕಾರ್ಕಳ ತಾಲೂಕು ಶಿವಪುರ ಗ್ರಾಮದಲ್ಲಿ ನಿನ್ನೆ ಸಂಜೆ ಖಾಸಗಿ ಬಸ್ಸೊಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳನ್ನು ಶಿವಪುರ ನಿವಾಸಿ ಆಟೋರಿಕ್ಷಾ ಚಾಲಕ ಗುರುಪ್ರಸಾದ್ (26) ಮತ್ತು ಅವರ ಅಣ್ಣ ವಸಂತ (30) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಗುರುಪ್ರಸಾದ್ ತನ್ನ ಆಟೋರಿಕ್ಷಾದಲ್ಲಿ ಶಿವಪುರದಿಂದ ಹೆಬ್ರಿಗೆ ತೆರಳುತ್ತಿದ್ದು, ವಸಂತ ಕೂಡ ರಿಕ್ಷಾದಲ್ಲಿದ್ದರು. ನಾಲ್ಕು ಗಂಟೆಯ ಸುಮಾರಿಗೆ ಶಿವಪುರ ಗ್ರಾಮದ ಬಿಲ್ ಬೈಲು ಸೇತುವೆ ಬಳಿ ತಲುಪಿದಾಗ ಹೆಬ್ರಿ ಕಡೆಯಿಂದ ಉಡುಪಿಯತ್ತ ಚಲಿಸುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆಯ ಬಸ್ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಗುರುಪ್ರಸಾದ್ ಮತ್ತು ವಸಂತರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋದರರಿಬ್ಬರೂ ಕೊನೆಯುಸಿರೆಳೆದಿದ್ದಾರೆ.
ಬಸ್ ಚಾಲಕನ ಅತಿವೇಗ ಹಾಗೂ ಅಜಾಗ್ರತೆಯ ಚಾಲನೆ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.