ಮಂಗಳೂರು,ಸೆಪ್ಟಂಬರ್.1 ; ಕಾವೇರಿ ನದಿ ನೀರು ಹಂಚಿಕೆಯ ಬಗ್ಗೆ ಇವತ್ತ್ತು ಕರ್ನಾಟಕ ರಾಜ್ಯದಲ್ಲಿ ನಡೆಯುವ ಈ ರೀತಿಯ ಗೊಂದಲಗಳಿಗೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ನೇರ ಕಾರಣ ಹೊರತು ಕೇಂದ್ರ ಸರಕಾರವಲ್ಲ ಎಂದು ಈ ರಾಜ್ಯದ ಜನರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಕಳೆದ ಕೆಲವು ಸಮಯಗಳಿಂದ ಈ ವಿವಾದದ ಬಗ್ಗೆ ಸರಿಯಾದ ರೀತಿಯಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ಕೆಲಸಗಳನ್ನು ಮಾಡದೆ, ಸುಪ್ರಿಂಕೋರ್ಟಿಗೆ ರಾಜ್ಯದ ನೀರಿನ ಕೊರತೆಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡಿ ಮನವರಿಕೆ ಮಾಡುವುದರಲ್ಲಿ ರಾಜ್ಯ ಸರಕಾರ ಎಡವಿರುವುದರಿಂದ ಸಮಸ್ಯೆಗಳು ಉದ್ಭವವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಎಸ್.ಕೊಟ್ಟಾರಿ ಆರೋಪಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನೀರು ಹಂಚುವುದಕ್ಕೆ ಸಾಧ್ಯವೇ ಇಲ್ಲ ಎಂಬ ನಿರ್ಧಾರ ಸರ್ವಪಕ್ಷ. ಸಭೆಗಲಲ್ಲಿ ತೀರ್ಮಾನವಾಗಿದ್ದರೂ ಕೂಡ ಸುಪ್ರೀಂಕೋರ್ಟಿನಲ್ಲಿ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಅಫಿದಾವಿತನ್ನು ಮುಖ್ಯಮಂತ್ರಿಗಳು ನೀಡಿ, ನಂತರ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ನಿರ್ಧಾರವನ್ನು ತೆಗೆದು, ಗೊಂದಲ ಸೃಷ್ಟಿಸಿ ಇಡೀ ಕಾವೇರಿ ಸಮಸ್ಯೆಗೆ ನೇರ ಹೊಣೆಯಾಗಿದ್ದಾರೆ.
ಕಾವೇರಿ ವಿವಾದದ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವ ನಮ್ಮ ರಾಜ್ಯದ ಕಾನೂನು ತಜ್ಞರುಗಳ, ವಕೀಲರುಗಳ ಮತ್ತು ಅಧಿಕಾರಿಗಳ ಮಧ್ಯೆಯೇ ಗೊಂದಲವಿರುವುದು ಕೂಡ ತಿಳಿದು ಬಂದಿದೆ.
ಪ್ರಮುಖರಾದ ಪಾಲಿ.ಎಸ್.ನಾರಿಮನ್ ಕೂಡ ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸುವುದಿಲ್ಲ ಎಂಬ ನಿರ್ಧಾರ ತ್ಗೆಗೆದುಕೊಂಡು, ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯನ್ನು ಕೋರ್ಟ್ ಗೆ ಓದಿ ಹೇಳುವ ಮುಖಾಂತರ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಇಂತಹ ವಕೀಲರುಗಳನ್ನು ನೇಮಕ ಮಾಡಿದ ಮೇಲೆ ಅವರನ್ನು ಸಮರ್ಪಕವಾಗಿ ಬಳಸಿಕೊಂಡು ಸರಿಯಾದ ರೀತಿಯಲ್ಲಿ ಕಾನೂನು ಹೋರಾಟ ಮಾಡಿ ರಾಜ್ಯದ ಜನರಿಗೆ ನ್ಯಾಯ ನೀಡುವ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ.
ಅದರ ಹೊರತಾಗಿ ಕಾನೂನು ಜ್ಞಾನವಿರದ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು, ಇಲ್ಲವಾದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿರುವ ಈ ರಾಜ್ಯಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ನಾಯಕರ ಹೇಳಿಕೆಗಳು ಅತ್ಯಂತ ಬಾಲಿಷವಾಗಿದೆ.
ಆದರೂ ಇಡೀ ದೇಶದ ಬಗ್ಗೆ ಹೆಚ್ಚಿನ ಕಳಕಳಿಯಿರುವ ಈ ದೇಶದ ಪ್ರಧಾನಮಂತ್ರಿಗಳು ಈಗಾಗಲೇ ಕಾವೇರಿ ವಿವಾದದ ಬಗ್ಗೆ ಗಮನಹರಿಸಿ, ರಾಜ್ಯದ ಕೇಂದ್ರ ಸಚಿವರುಗಳು, ಬಿಜೆಪಿ ಸಂಸದರುಗಳ ಮನವಿಯನ್ನು ಪರಿಗಣಿಸಿ, ಕೇಂದ್ರ ಜಲಸಂಪನ್ಮೂಲ ಸಚಿವರ ಮುಖಾಂತರ ಎರಡೂ ರಾಜ್ಯಗಳ ಪ್ರಮುಖರ ಸಭೆ ಕರೆದು ಸಮಸ್ಯೆ ಬಗೆಹರಿಸುವಲ್ಲಿ ಕಾಳಜಿವಹಿಸಿರುತ್ತಾರೆ ಮತ್ತು ಸ್ವತಃ ಪ್ರಧಾನಿಯವರೇ ಈ ವಿವಾದದ ಸಂಪೂರ್ಣ ಮಾಹಿತಿ ಕೇಳಿರುವುದು ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಒಲವು ತೋರಿಸುತ್ತಿದ್ದಾರೆಂಬುದನ್ನು ತಿಳಿಸುತ್ತದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಜಿಲ್ಲೆಯ ಕಾಂಗ್ರೆಸ್ ನಾಯಕರು ಅಂತರರಾಜ್ಯ ನದಿ ನೀರಿನ ಸಮಸ್ಯೆಗಳಲ್ಲಿ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂಬ ಮನಃಸ್ಥಿತಿಯಲ್ಲಿ ಇರುವುದಾದರೆ, ಈ ಜಿಲ್ಲೆಯ ಜನ ಎದುರಿಸುತ್ತಿರುವ ನೀರಿನ ಸಮಸ್ಯೆಯಾದ ನೇತ್ರಾವತಿ ನದಿ ತಿರುವು ಯೋಜನೆಯಾದ ಎತ್ತಿನ ಹೊಳೆ ಯೋಜನೆ ಎಂಬ ಅಂತರ್ ಜಿಲ್ಲಾ ನೀರಿನ ಸಮಸ್ಯೆಯಲ್ಲಿ ಮಧ್ಯಸ್ಥಿಕೆ ವಹಿಸುವ ಸಾಮಾನ್ಯ ಜ್ಞಾನವನ್ನು ತಿಳಿದು ದಕ್ಷಿಣ ಕನ್ನಡಗರಿಗೆ ನ್ಯಾಯ ಒದಗಿಸಲು ಮುತುವರ್ಜಿ ವಹಿಸಲಿ.
ಆದ್ದರಿಂದ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಕೀಳು ಮಟ್ಟದ ರಾಜಕೀಯ ಮಾಡದೆ ಪಕ್ಷಾತೀತವಾಗಿ ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸುಪ್ರೀಂ ಕೋರ್ಟಿನಲ್ಲಿ ನಡೆಯುವ ಕಾನೂನು ಹೋರಾಟಕ್ಕೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಈ ರಾಜ್ಯದ ಜನರಿಗೆ ನ್ಯಾಯ ಒದಗಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರರಾದ ಜಿತೇಂದ್ರ ಎಸ್.ಕೊಟ್ಟಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.