ಕುಂದಾಪುರ: ಕುಂದಾಪುರ ತಾಲೂಕಿನ ಕಾಳಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಅಸೋಡು ಎಂಬಲ್ಲಿರುವ ಸರಕಾರಿ ಭೂಮಿಯಲ್ಲಿ ಅಂದಾಜು ಮೂರು ಎಕ್ರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ತಾತ್ಕಾಲಿಕ ಗುಡಿಸಲು ನಿರ್ಮಿಸಿದ ಬಗ್ಗೆ ಕುಂದಾಪುರ ತಹಶಿಲ್ದಾರ್ ಅವರಿಗೆ ಬಂದ ಮಾಹಿತಿಯಂತೆ ಕಂದಾಯ ನಿರೀಕ್ಷಕರು, ಗ್ರಾಮಪಂಚಾಯತ್ ಅಭಿವ್ರದ್ಧಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಗುಡಿಸಲು ತೆರವಿಗೊಳಿಸಲು ಸೂಚಿಸಿದ್ದು ಗುಡಿಸಲಿನಲ್ಲಿ ಯಾರೊಬ್ಬ ವಾರೀಸುದಾರರು ಇಲ್ಲದ ಕಾರಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬರಿಕೈಯಲ್ಲಿ ವಾಪಾಸ್ಸಾಗಿದ್ದಾರೆ.

ಕಾಳಾವರ ಗ್ರಾಮಪಂಚಾಯತಿಯ ಅಸೋಡು ಎಂಬಲ್ಲಿ 40 ಎಕ್ರೆ ಸರ್ಕಾರಿ ಭೂಮಿಯ ಪೈಕಿ ಸರ್ವೇ ನಂಬರ್ 33ರಲ್ಲಿ 3 ಎಕ್ರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದು ರಾತ್ರಿ ಬೆಳಗಾಗುವುದರೊಳಗೆ ೨೫ಕ್ಕೂ ಅಧಿಕ ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಅತಿಕ್ರಮಣ ಮಾಡಿಕೊಂಡವರು ಕುಂದಾಪುರದವರಾಗಿದ್ದು ಯಾರೂ ಕೂಡ ಸ್ಥಳೀಯರಾಗಲಿ ಅಥವಾ ಕಾಳಾವರ ಪಂಚಾಯತಿ ವ್ಯಾಪ್ತಿಯವರಾಗಲಿ ಅಲ್ಲ ಎಂದು ಸ್ಥಳಿಯರು ಹೇಳುತ್ತಿದ್ದಾರೆ. ವಾರಾಹಿ ಕಾಲುವೆ ಈ ಭಾಗದಲ್ಲಿ ಹಾದುಹೋಗುವುದರಿಂದ ಹಲವಾರು ಮನೆಗಳು ಈಗಲೇ ತೆರಉ ಮಾಡುವ ಸ್ಥಿತಿಯಲ್ಲಿದ್ದು ನಮಗೆ ಮನೆ ಹಾಗೂ ಮನೆಕಟ್ಟಲು ಬೇಕಾದ ನಿವೇಶನದ ಅಗತ್ಯವಿದೆ. ಇಂತಹ ಸಂದರ್ಭ ಯಾವುದೋ ಊರಿನಿಂದ ಬಂದ ಜನರಿಗೆ ಗುಡಿಸಲು ನಿರ್ಮಿಸಲು ಅವಕಾಶ ನೀಡಬಾರದು. ನಮಗೆ ಮೊದಲು ಜಾಗ ನೀಡಿ ಬಳಿಕ ಬೇರೆಯವರಿಗೆ ನೀಡಲಿ ಎಂದು ಸ್ಥಳಿಯ ನಿವಾಸಿ ನವೀನ್ ಆಗ್ರಹಿಸಿದ್ದಾರೆ.
ಇನ್ನು ತಹಶಿಲ್ದಾರ್ ಆದೇಶದ ಮೇರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಕಂದಾಯ ನಿರೀಕ್ಷಕರು ಸ್ಥಳದಲ್ಲಿ ಗುಡಿಸಲು ನಿರ್ಮಿಸಿದ ಯಾವುದೇ ವಾರೀಸುದಾರರು ಇಲ್ಲದ ಕಾರಣ ಕೇವಲ ಸ್ಥಳ ಮಹಜರು ಮಾತ್ರವೇ ನಡೆಸಿದ್ದಾರೆ. ಸರ್ವೇ ನಂಬರ್ 33ರಲ್ಲಿರುವ ಮೂರು ಎಕರೆ ಭೂಮಿಯಲ್ಲಿ ಎರಡು ಎಕ್ರೆ ಪ್ರದೇಶವನ್ನು ಪಾನೀಯ ನಿಗಮಕ್ಕೆ ಹಾಗೂ ಒಂದು ಎಕ್ರೆ ಪ್ರದೇಶವನ್ನು ಸ್ಥಳೀಯ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಲು ಕಾಯ್ದಿರಿಸಲಾಗಿದ್ದು ಮೂರು ಎಕ್ರೆ ಪ್ರದೇಶ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಮಹಜರು ನಡೆಸಿ ತಹಶಿಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಕಂದಾಯ ನಿರೀಕ್ಷಕ ನರಸಿಂಹ ಕಾಮತ್ ಹೇಳಿದ್ದಾರೆ.
ಮಹಜರು ಪ್ರಕ್ರಿಯೆ ವೇಳೆ ಕಾಳಾವರ ಗ್ರಾಮಪಂಚಾಯತ್ ಪಿಡಿಓ ಗಣೇಶ್, ಅಸೋಡು ಗ್ರಾಮಲೆಕ್ಕಿಗ ದಿನೇಶ್ ಹುದ್ದಾರ್ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.