ಕರಾವಳಿ

ಎತ್ತಿನಹೊಳೆ : ಜಿಲ್ಲೆಯ ಪರ ತೀರ್ಪು ಬರುವಂತೆ ಕೋರಿ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ

Pinterest LinkedIn Tumblr

kadri_netrvathi_1

ಮಂಗಳೂರು, ಸೆ.14: ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಪರವಾಗಿ ದಿಲ್ಲಿಯ ರಾಷ್ಟ್ರೀಯ ಹಸಿರುಪೀಠದಿಂದ ತೀರ್ಪು ಬರುವಂತೆ ಕೋರಿ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಇಂದು ನಗರದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ರಕ್ಷಣೆಗಾಗಿ ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ರಾಷ್ಟ್ರೀಯ ಹಸಿರುಪೀಠ ಸೆ.21ರಂದು ತೀರ್ಪು ನೀಡುವ ಸಾಧ್ಯತೆ ಇರುವುದನ್ನು ಮನಗಂಡ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಬುಧವಾರ ಕದ್ರಿ ದೇವಸ್ಥಾನ, ಮಿಲಾಗ್ರಿಸ್ ಚರ್ಚ್, ಮಂಗಳಾದೇವಿ ದೇವಸ್ಥಾನ, ಉಳ್ಳಾಲ ಸೈಯದ್ ಮದನಿ ದರ್ಗಾ ಹಾಗೂ ಕುದ್ರೋಳಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

kadri_netrvathi_2 kadri_netrvathi_3

ಕದ್ರಿ ದೇವಸ್ಥಾನದಲ್ಲಿ ಪ್ರಾರ್ಥನೆಯ ಸಂದರ್ಭ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಕಳೆದ 3 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನೇತ್ರಾವದಿ ನದಿಯ ಸಂರಕ್ಷಣೆಗಾಗಿ ಕಾನೂನು ಸಮರವು ಮುಂದುವರಿದಿದೆ. ಪ್ರಸ್ತುತ ಈ ಯೋಜನೆಗೆ ಸಂಬಂಧಿಸಿ ದ.ಕ. ಹೋರಾಟಗಾರರ ಮೊಕದ್ದಮೆಗೆ ಹೊಸದಿಲ್ಲಿಯ ಹಸಿರು ಪೀಠದ ಎದುರು ಸೆ. 21ರಂದು ತೀರ್ಪು ನೀಡಲಿದೆ. ಈಗಾಗಲೇ ಹಸಿರು ಪೀಠದಲ್ಲಿ ಜಿಲ್ಲೆಯ ಪರವಾದ ಒಲವು ಕಂಡುಬಂದಿದೆ. ಪೀಠದ ತೀರ್ಪು ಜಿಲ್ಲೆಯ ಜನತೆಯ ಪರವಾಗಿ ಬರಲಿ ಎಂಬುದು ಈ ಸಾಮೂಹಿತ ಪ್ರಾರ್ಥನೆಯ ಉದ್ದೇಶ ಎಂದು ಹೇಳಿದರು.

ದಿಲ್ಲಿಯ ಹಸಿರು ಪೀಠದಿಂದ ಜಿಲ್ಲೆಯ ಜನತೆಗೆ ನ್ಯಾಯ ಸಿಗುವ ನಿರೀಕ್ಷೆ ಇದೆ. ಈ ಬಾರಿ ದ.ಕ. ಜಿಲ್ಲೆಯಲ್ಲೂ ಮಳೆ ತುಂಬಾ ಕಡಿಮೆಯಾಗಿದೆ. ಇದಕ್ಕೆ ಪಶ್ಚಿಮ ಘಟದಲ್ಲಿ ಮರಗಳನ್ನು ಕಡಿದಿರುವುದು ಕೂಡಾ ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹಿತದೃಷ್ಟಿಯಿಂದ ಎತ್ತಿನಹೊಳೆ ಯೋಜನೆಯ ವಿರುದ್ಧ ಸಮಾನ ಮನಸ್ಕ ಸಂಘಟನೆಗಳು, ರಾಜಕೀಯೇತರವಾಗಿ ಹೋರಾಟ ನಡೆಸುತ್ತಿವೆ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದರು.

ಎತ್ತಿನಹೊಳೆ ಯೋಜನೆಯನ್ನು ಕೈಬಿಡಬೇಕು ಎಂಬ ನಮ್ಮ ಹೋರಾಟಕ್ಕೆ ಮುಖ್ಯಮಂತ್ರಿ ಯಾವುದೇ ರೀತಿಯ ಬೆಲೆ ಕೊಟ್ಟಿಲ್ಲ. ಒಂದು ಕಡೆ ಮಾತುಕತೆ ನಡೆಸುವುದಾಗಿ ಹೇಳಿರುವ ಅವರು, ಮತ್ತೊಂದೆಡೆ ಯೋಜನೆ ಮಾಡಿಯೇ ಸಿದ್ಧ ಎಂಬ ಹೇಳಿಕೆ ನೀಡುವ ಮೂಲಕ ಕರಾವಳಿ ಜನರ ಭಾವನೆಗಳನ್ನು ನಿರ್ಲಕ್ಷಿಸಿದ್ದಾರೆ. ಇದರ ನಡುವೆ ದ.ಕ., ಉಡುಪಿ ಸೇರಿದಂತೆ 12 ಜಿಲ್ಲೆಗಳಿಗೆ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಒದಗಿಸುವ ಮಾತುಗಳೂ ಕೇಳಿ ಬರುತ್ತಿವೆ. ನಮ್ಮ ಪ್ರಕೃತಿದತ್ತ ನೀರನ್ನು ಬೇರೆಡೆಗೆ ಹಾಯಿಸಿ ನಮಗೆ ಉಪ್ಪು ನೀರನ್ನು ಸಂಸ್ಕರಿಸಿ ನೀಡುವುದು ಅರ್ಥವಿಲ್ಲದ ಮಾತು ಎಂದು ವಿಜಯಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಅರ್ಚಕರಾದ ಶ್ರೀರಾಮ ಭಟ್ ಮತ್ತು ಪ್ರಭಾಕರ ಅಡಿಗ ಪೂಜೆ ನೆರವೇರಿಸಿದರು. ಈ ಸಂದರ್ಭ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮನಪಾ ಸದಸ್ಯೆ ರೂಪಾ ಡಿ. ಬಂಗೇರ, ಪುರುಷೋತ್ತಮ ಚಿತ್ರಾಪುರ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕೆ.ಎನ್.ಸೋಮಶೇಖರ್, ದಿನಕರ ಶೆಟ್ಟಿ, ಎಂ.ಜಿ.ಹೆಗಡೆ, ಯೋಗೀಶ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಸತ್ಯಜಿತ್ ಸುರತ್ಕಲ್, ಶಶಿರಾಜ್ ಕಾವೂರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಗರದ ಮಿಲಾಗ್ರಿಸ್ ಚರ್ಚ್ ನಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ಫಾ. ವಲೇರಿಯನ್ ಡಿಸೋಜ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ ಪೂಜೆ ನೆರವೇರಿತು. ಪರಿಸರಕ್ಕೆ ಹಾನಿಯಾಗುವ ಎತ್ತಿನಹೊಳೆ ಯೋಜಯನೆಯನ್ನು ಸರಕಾರ ರದ್ದುಗೊಳಿಸಬೆಕು. ರಾಜ್ಯದಲ್ಲಿ ಶಾಶ್ವತ ಶಾಂತಿ, ಸಾಮರಸ್ಯೆ ನೆಲೆಗೊಳ್ಳಲಿ ಎಂದು ಧರ್ಮಗುರುಗಳು ಪ್ರಾರ್ಥಿಸಿದರು. ಸಹಾಯಕ ಧರ್ಮಗುರು ಫಾ.ಅನಿಲ್ ಲೋಬೊ, ಚರ್ಚ್ ನ ಹಿರಿಯ ಧರ್ಮಸೇವಕರಾದ ಫಾ.ವಿಲಿಯಂ ಗೊನ್ಸಾಲ್ವಿಸ್, ರೊಸಾರಿಯೊ ಚರ್ಚ್ ನ ಧರ್ಮಗುರು ಫಾಜೆ.ಬಿ. ಕ್ರಾಸ್ತಾ ಈ ವೇಳೆ ಉಪಸ್ಥಿತರಿದ್ದರು.

ಉಳ್ಳಾಲದ ಸೈಯದ್ ಮದನಿ ದರ್ಗಾದಲ್ಲಿ ಪ್ರಾರ್ಥನೆ

ಉಳ್ಳಾಲ: ಎತ್ತಿನಹೊಳೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ರಾಷ್ಟ್ರೀಯ ಹಸಿರುಪೀಠ ಸೆ.21ರಂದು ನೀಡುವ ತೀರ್ಪು ದ.ಕ. ಜಿಲ್ಲೆಯ ಪರವಾಗಿ ಬರಲಿ ಎಂದು ನೇತ್ರಾವತಿ ಸಂರಕ್ಷಣಾ ಸಮಿತಿ ವತಿಯಿಂದ ಉಳ್ಳಾಲದ ಸೈಯದ್ ಮದನಿ ದರ್ಗಾದಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ನೇತ್ರಾವತಿ ಸಂರಕ್ಷಣಾ ಸಮಿತಿಯು ಎತ್ತಿನಹೊಳೆ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದ ತೀರ್ಪು ಸೆ.21ರಂದು ಹೊರಬೀಳಲಿದೆ. ಜಿಲ್ಲೆಯ ಜನರಿಗೆ ವಂಚಿತವಾಗದ ರೀತಿಯಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜಯ ಸಂದಾಯವಾಗುವಂತೆ ನ್ಯಾಯಾಧೀಶರು ತೀರ್ಪು ಪ್ರಕಟಿಸಲು ಸರ್ವಧರ್ಮದವರ ಆರಾಧನಾಲಯಗಳಲ್ಲಿ ಪ್ರಾರ್ಥನೆ ಇಂದು ಸಲ್ಲಿಸಿದ್ದೇವೆ ಎಂದು ಹೇಳಿದರು.

ಎತ್ತಿನಹೊಳೆ ಯೊಜನೆ ಜಾರಿಯಾದಲ್ಲಿ ಜಿಲ್ಲೆಯ ಮುಂದಿನ ಜನಾಂಗ ತೊಂದರೆಗೀಡಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ರೀತಿಯ ಸೌಕರ್ಯಗಳಿರುವ ಮಂಗಳೂರಿಗೆ ನೀರಿನ ಅಭಾವ ಉಂಟಾಗುವ ಭೀತಿ ಇದೆ. ಚೆನ್ನೈನ ಹಸಿರು ಪೀಠ ನ್ಯಾಯಾಲಯದಲ್ಲಿರುವ ಪ್ರಕರಣ ದಿಲ್ಲಿಗೆ ವರ್ಗಾವಣೆಯಾಗಿದೆ. ಆ.21ರಂದು ತೀರ್ಪು ಹೊರಬೀಳಲಿದೆ. ಹಲವು ಜನಪ್ರತಿನಿಧಿಗಳು ಹೋರಾಟದಲ್ಲಿ ಕೈ ಜೋಡಿಸಿರುವುದರಿಂದ ಜಿಲ್ಲೆಗೆ ಪೂರಕವಾದ ತೀರ್ಪು ಹೊರಬೀಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕುದ್ರೋಳಿ ಗೋಕರ್ಣಾಥೇಶ್ವರ, ಕದ್ರಿ ಶ್ರೀ ಮಂಜುನಾಥೇಶ್ವರ, ಮಿಲಾಗ್ರಿಸ್ ಚರ್ಚ್, ಮಂಗಳಾದೇವಿ ದೇವಳ, ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಎಲ್ಲಾ ಜಾತಿ ಬಾಂಧವರು ಸೇರಿಕೊಂಡು ಪ್ರಾರ್ಥನೆ ನಡೆಸಿದ್ದೇವೆ ಎಂದರು.

ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುರ್ರಶೀದ್, ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಇಗರ್ಜಿಯ ಎಡ್ವಿನ್ ಮಸ್ಕರೇನಸ್ ಮಾತನಾಡಿದರು. ನೇತ್ರಾವತಿ ಸಂರಕ್ಷಣಾ ಸಮಿತಿ ಉಳ್ಳಾಲ ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಹೀಂ ಉಚ್ಚಿಲ್, ಎಂ.ಜಿ.ಹೆಗಡೆ, ಪುರುಷೋತ್ತಮ ಚಿತ್ರಾಪುರ, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.