
ಮಂಗಳೂರು, ಸೆ.11: ಮಂಗಳೂರು ವಿಶ್ವವಿದ್ಯಾನಿಲಯದ ಬಯೋ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ರೆಕಾರ್ಡಿಂಗ್ ಪ್ರಕರಣಕ್ಕೆ ಸಂಬಂಧಿಸಿ ಕೆಲವೊಂದು ಸುಳಿವುಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಯ ಬಂಧನವಾಗಲಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಶನಿವಾರ ತಮ್ಮ ಕಚೇರಿಯಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೆಕಾರ್ಡಿಂಗ್ ಮಾಡಲು ಬಳಸಲಾಗಿದ್ದ ಮೊಬೈಲ್ ಹಲವಾರು ಮಂದಿಯಿಂದ ಬಳಕೆ ಮಾಡಲ್ಪಟ್ಟಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ. ಹಾಗಾಗಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಲು ವಿಳಂಬವಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮೊಬೈಲ್ನಲ್ಲಿ ರೆಕಾರ್ಡಿಂಗ್ ಆಗಿದ್ದ ಕ್ಲಿಪ್ಪಿಂಗ್ಗಳು ಡಿಲೀಟ್ ಆಗಿರುವ ಸಾಧ್ಯತೆಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊಬೈಲನ್ನು ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ)ಗೆ ನೀಡಿರುವುದರಿಂದ ಸಂಪೂರ್ಣ ಮಾಹಿತಿ ಇಲಾಖೆಗೆ ಲಭ್ಯವಾಗಲಿದೆ. ಈ ಬಗ್ಗೆ ಸಾಕಷ್ಟು ಸುಳಿವುಗಳು ಈಗಾಗಲೇ ದೊರಕಿದೆ ಎಂದು ಕಮಿಷನರ್ ಹೇಳಿದ್ದಾರೆ.
Comments are closed.