ಮಂಗಳೂರು: ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಬೋರ್‍ವೆಲ್ (ಕೊಳವೆ ಬಾವಿ) ಕೊರೆಯುವುದಕ್ಕೆ ನಿಷೇಧ ವಿಧಿಸಲು ಸರಕಾರ ಆದೇಶ ಹೊರಡಿಸಿದೆ. ಪರಿಣಾಮ ದ.ಕ./ಉಡುಪಿ ಜಿಲ್ಲೆಗಳಲ್ಲಿ ಮುಂದೆ ಹೊಸ ಬೋರ್‍ವೆಲ್‍ಗಳಿಗೆ ಅನುಮತಿಯಿಲ್ಲ.
ಹೊಸ ಬೋರ್‍ವೆಲ್ ಕೊರೆಯುವುದನ್ನು ತಡೆ ಗಟ್ಟುವ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಈ ಸಂಬಂಧ ಆವಶ್ಯಕತೆಯಿದ್ದಲ್ಲಿ ಜಿಲ್ಲಾಧಿಕಾರಿ, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೆರವು ಪಡೆಯಬೇಕು.
ಸರಕಾರದ ಆದೇಶ ಉಲ್ಲಂಘನೆಯಾದಲ್ಲಿ ಇದಕ್ಕೆ ನೇರವಾಗಿ ಆಯಾ ಜಿಲ್ಲಾಧಿಕಾರಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರಕಾರದ ಅಧೀನ ಕಾರ್ಯದರ್ಶಿ (ಪ್ರಭಾರ) ಬಿ.ಎಸ್.ಶ್ರೀನಿವಾಸ್ ಅವರು ಆ.20ರಂದು ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 5 ವರ್ಷಗಳಿಂದ ಬರ ಪರಿಸ್ಥಿತಿ ಇದ್ದು, ಸತತ ಬರಗಾಲದಿಂದ ಅಣೆಕಟ್ಟು, ಕೆರೆಕಟ್ಟುಗಳಲ್ಲಿ ನೀರು ಕಡಿಮೆ ಇರುವುದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. 2016-17ನೇ ಸಾಲಿನಲ್ಲಿ ಸಹ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಾರದೆ ಇರುವುದರಿಂದ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ಯಾವುದೇ ಅಣೆಕಟ್ಟು ತುಂಬಿರುವುದಿಲ್ಲ. ಇದರಿಂದ ಅಂತರ್ಜಲ ಮಟ್ಟದ ಕುಸಿತ ತೀವ್ರವಾಗಿ ಹೆಚ್ಚಾಗಿದೆ. ಮುಂದಿನ ದಿನದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಹೊಸ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಳೆದ 1 ದಶಕದಲ್ಲಿ ಅಂತರ್ಜಲ ಮಟ್ಟ ಶೇ. 85ರಷ್ಟು ಕುಸಿದಿದೆ ಎಂದು ಕೇಂದ್ರ ಜಲ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖೀಸಿದೆ. 2016ರ ಜನವರಿ ವರೆಗೆ ಮಳೆ ಕೊರತೆ ಮತ್ತು ಎರಡು ವರ್ಷದ ಬರದ ಪರಿಣಾಮ ಅಂತರ್ಜಲ ಮಟ್ಟ 2012ರಲ್ಲಿ ಯಾವ ಪ್ರಮಾಣದಲ್ಲಿತ್ತೋ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಅಂತರ್ಜಲ ಮಟ್ಟ ಕುಸಿತವಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ನಿವಾರಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Comments are closed.