ಕರಾವಳಿ

ಕ್ಲಾಸಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸುವುದಕ್ಕೆ ಹಿಂದೂ ವಿದ್ಯಾರ್ಥಿಗಳಿಂದ ಸಮವಸ್ತ್ರದ ಮೇಲೆ ಕೇಸರಿ ಶಾಲು ಧರಿಸಿ ಪ್ರತಿಭಟನೆ

Pinterest LinkedIn Tumblr

Bhurka_vivada_1

ಮಂಗಳೂರು / ಸುಳ್ಯ, ಆ.31: ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಸ್ಕಾರ್ಫ್ ಧರಿಸಿ ಬರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರು ಕಾಲೇಜ್‌ಗೆ ಬುರ್ಖಾ ತೊಟ್ಟು ಬರುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ನಿಯಮವನ್ನು ವಿಧಿಸದ ಇರುವುದರ ವಿರುದ್ಧ ಆಕ್ರೋಶಗೊಂಡಿರುವ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜ್‌ಗೆ ಬರುತ್ತಿರುವ ಅಪರೂಪದ ವಿದ್ಯಮಾನ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಸರಕಾರಿ ಕಾಲೇಜ್‌ನಲ್ಲಿ ಬೆಳಕಿಗೆ ಬಂದಿದೆ.

ಪೆರುವಾಜೆ ಸರಕಾರಿ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳ ಮಧ್ಯೆ ಭಿನ್ನಾಭಿಪ್ರಾಯ, ಗಲಾಟೆ ಇಂದು ನಿನ್ನೆಯಿಂದ ನಡೆಯುತ್ತಿರುವುದಲ್ಲ. ಈ ಹಿಂದೆಯೂ ಇದೇ ಕಾಲೇಜಿನಲ್ಲಿ ಇಂಥದ್ದೇ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆದಿತ್ತು. ಇದೀಗ ಮತ್ತೆ ಭಿನ್ನಕೋಮಿನ ವಿದ್ಯಾರ್ಥಿಗಳ ಮಧ್ಯೆ ಭಿನ್ನಾಭಿಪ್ರಾಯ ಉಲ್ಬಣಗೊಂಡಿದ್ದು ಕಾಲೇಜ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಬುರ್ಖಾ ಹಾಗೂ ಸ್ಕಾರ್ಫ್(ಶಿರವಸ್ತ್ರ) ನಿಷೇಧಿಸಬೇಕೆಂದು ಒಂದು ಸಮುದಾಯದ ವಿದ್ಯಾರ್ಥಿಗಳು ಕಾಲೇಜ್ ಪ್ರಾಂಶುಪಾಲರಿಗೆ ಮನವಿಯನ್ನು ಮಾಡಿದ್ದರು. ಆದರೆ ವಿದ್ಯಾರ್ಥಿನಿಯರು ಇದಕ್ಕೆ ಜಗ್ಗದೆ ಎಂದಿನಂತೆ ಬುರ್ಖಾ ಧರಿಸಿ ಕಾಲೇಜ್ ಪ್ರವೇಶಿಸುತ್ತಿದ್ದರು.

Bhurka_vivada_2

ಇದರಿಂದ ಕ್ರೋಧಗೊಂಡ ವಿದ್ಯಾರ್ಥಿಗಳು ಕಳೆದ ಕೆಲದಿನಗಳಿಂದ ಕಾಲೇಜ್‌ಗೆ ಕೇಸರಿ ಶಾಲು ಧರಿಸಿ ಪ್ರವೇಶಿಸುತ್ತಿದ್ದಾರೆ. ಕಾಲೇಜ್ ಸಮವಸ್ತ್ರದ ಮೇಲೆ ಕೇಸರಿ ಶಾಲು ಧರಿಸುತ್ತಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಯಾಗುತ್ತಿದೆ.

ಕಾಲೇಜ್‌ನಲ್ಲಿ ಬುರ್ಖಾ ನಿಷೇಧಿಸುವವರೆಗೆ ಕೇಸರಿ ಶಾಲು ತೆಗೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೋ ಕಾದು ನೋಡಬೇಕು. ಸದ್ಯ ಕಾಲೇಜ್‌ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯೊಳಗೆ ಧರ್ಮದ ವಿಚಾರದಲ್ಲಿ ನಡೆಸುತ್ತಿರುವ ಇಂಥ ಪ್ರಸಂಗ ಎಷ್ಟು ಸರಿ ಎಂದು ಶಾಂತಿಪ್ರಿಯ ನಾಗರಿಕರು ಪ್ರಶ್ನಿಸುವಂತಾಗಿದೆ.

ಈ ಬೆಳವಣಿಗೆಯ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದು, ಪೋಷಕರ ಸಭೆ ಕರೆದು ವಿವಾದ ಇತ್ಯರ್ಥಗೊಳ್ಳುವ ಭರವಸೆ ಇದೆ ಎಂದು ಪ್ರಾಂಶುಪಾಲ ಚಂದ್ರಶೇಖರ ಕಾಂತಮಂಗಲ ಹೇಳಿದ್ದಾರೆ.

Comments are closed.