ಕರಾವಳಿ

ಲಂಡನ್ ಸ್ವಾತಂತ್ರ್ಯೋತ್ಸವದಲ್ಲಿ ಮನಸೂರೆಗೊಂಡ ಕುಂದಾಪುರದವರ ‘ಕಂಸವಧೆ’ ಯಕ್ಷಗಾನ

Pinterest LinkedIn Tumblr

ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಭಾರತೀಯ ದೂತಾವಾಸವು ಆ. 21ರಂದು ಲಂಡನ್‌ನ ವಿಶಾಲ ಜಿಮ್‌ಖಾನಾ ಬಯಲಿನಲ್ಲಿ ಆಯೋಜಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಕುಂದಾಪುರದ ಇಬ್ಬರು ಅನಿವಾಸಿ ಕನ್ನಡಿಗರು ಪ್ರದರ್ಶಿಸಿದ ಯಕ್ಷಗಾನದ ತುಣುಕು ನೆರೆದಿದ್ದ 10 ಸಾವಿರ ಭಾರತೀಯರ ಮೆಚ್ಚುಗೆ ಗಳಿಸಿತು.

London_Independence Day_Yakshagana (1) London_Independence Day_Yakshagana (2)

ಅವರಿಗೆ ನೀಡಲಾಗಿದ್ದ ಹದಿನೈದು ನಿಮಿಷಗಳ ಅವಕಾಶದಲ್ಲಿ ಕಂಸವಧೆಯ ನೃತ್ಯ ರೂಪಕವನ್ನು ಅವರು ಪ್ರಸ್ತುತಪಡಿಸಿದ್ದರು. ಇದರಲ್ಲಿ ಯು.ಕೆಯ ಡಂಕ್ಯಾಸ್ಟರ್‌ನಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಕುಂದಾಪುರದ ಡಾ. ಗುರುಪ್ರಸಾದ ಪಟ್ವಾಲ್ ಕಂಸನ ಪಾತ್ರ ನಿರ್ವಹಿಸಿದರೆ, ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ಕಂಪನಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ದುಡಿಯುತ್ತಿರುವ ಯೋಗೀಂದ್ರ ಮರವಂತೆ ಕೃಷ್ಣನ ಪಾತ್ರ ಮಾಡಿದ್ದರು.

ಎರಡೂ ಪಾತ್ರಗಳ ಪ್ರಸಾಧನದ ವರ್ಣವಿನ್ಯಾಸ, ಲಯಬದ್ಧ ನೃತ್ಯ, ಸನ್ನಿವೇಶವನ್ನು ಬಿಂಬಿಸುವಂತಿದ್ದ ಭಾವಾಭಿನಯ ವಿವಿಧೆಡೆಯ ಭಾರತೀಯ ಮೂಲದ ಪ್ರೇಕ್ಷಕರನ್ನು ಮುದಗೊಳಿಸಿದುವು. ಪ್ರದರ್ಶನ ಮುಗಿಯುತ್ತಿದ್ದಂತೆ ಉಭಯ ಹವ್ಯಾಸಿ ಕಲಾವಿದರು ಪ್ರೇಕ್ಷರ ಮತ್ತು ಮಾಧ್ಯಮದ ಆಕರ್ಷಣೆಯ ಕೇಂದ್ರವಾದರು. ಹಲವರು ಅವರ ಜತೆ ನಿಂತು ಸೆಲ್ಫೀ ತೆಗೆದುಕೊಂಡರೆ, ಮಾಧ್ಯಮದವರು ಅವರನ್ನು ಸಂದರ್ಶಿಸಿದರು. ಕ್ರಮವಾಗಿ ಕೋಟದ ಸದಾನಂದ ಐತಾಳ್ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಕೃಷ್ಣಮೂರ್ತಿ ತುಂಗರಿಂದ ಯಕ್ಷಗಾನ ನೃತ್ಯ ಅಭ್ಯಾಸ ಮಾಡಿರುವ ಇವರಿಬ್ಬರು ಜತೆಯಾಗಿ ಬಿಡುವಿನ ವೇಳೆಯಲ್ಲಿ ಯುಕೆಯ ವಿವಿಧೆಡೆ ಯಕ್ಷಗಾನದ ಕಿರುಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಲಂಡನ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾರತದ ಹೈಕಮಿಷನರ್ ನವತೇಜ್ ಸರಣ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್ ಪಾಸ್ವಾನ್, ಯುಕೆಯ ಸಂಸತ್ತಿನ ಕೆಳಮನೆಯ ಸದಸ್ಯರಾದ ವೀರೇಂದ್ರ ಶರ್ಮ ಮತ್ತು ಸೀಮಾ ಮಲೋತ್ರಾ ಮುಖ್ಯ ಅತಿಥಿಗಳಾಗಿದ್ದರು.

Comments are closed.