ಕರಾವಳಿ

ಯುವತಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್; ಕಿಡ್ನಾಪ್-ರೇಪ್ ಪ್ರಹಸನಕ್ಕೆ ಕೊಲ್ಲೂರಿನ ಅಮಾಯಕ ಬಲಿಪಶು

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಸೋಮವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾದ ಯುವತಿಯೋರ್ವಳು ಅಸ್ವಸ್ಥ ಸ್ಥಿತಿಯಲ್ಲಿ ಮಂಗಳವಾರ ಮನೆಗೆ ವಾಪಾಸಾದ ಘಟನೆ ನಿತ್ಯ ಒಂದೊಂದು ತಿರುವು ಪಡೆಯುತ್ತಿದ್ದು ಕೊಲ್ಲೂರಿನ ರಾಜೇಶ್ ಎಂಬ ಕಾರು ಚಾಲಕ ತನ್ನ ಕಿಡ್ನಾಪ್ ಮಾಡಿ ಅತ್ಯಾಚಾರ ನಡೆಸಿ ಜೀವಬೆದರಿಕೆ ಹಾಕಿದ್ದಾನೆಂದು ಯುವತಿ ಕುಂದಾಪುರ ಠಾಣೆಗೆ ನೀಡಿದ ದೂರು ಸಂಪೂರ್ಣ ಸುಳ್ಳು ಎಂದು ಪೊಲೀಸರಿಗೆ ತಿಳಿದುಬಂದಿದೆ.

Kundapura_Crime_News (2) Kundapura_Crime_News (1)

(ಕುಂದಾಪುರ ಪೊಲೀಸ್ ಠಾಣೆಯೆದುರು ಜಮಾಯಿಸಿದ ಜನರು)

ಕೊಲ್ಲೂರು ಯಳೂರು ಮೂಲದ ನಿವಾಸಿಯಾದ ಇಪ್ಪತ್ತು ವರ್ಷ ಪ್ರಾಯದ ಯುವತಿ ತನ್ನ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆರೋಪಿ ಜೀವಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಕುಂದಾಪುರ ಪೊಲೀಸರಿಗೆ ಹೇಳಿಕೆ ನೀಡಿದ ಅನ್ವಯ ಕುಂದಾಪುರ ಪೊಲೀಸರು ಕೊಲ್ಲೂರಿನ ನಿವಾಸಿಯಾದ ಕಾರು ಚಾಲಕ ರಾಜೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಆದರೇ ಯುವತಿ ಹೇಳಿದ ಹೇಳಿಕೆಗೂ ಮತ್ತು ಆಕೆ ಆರೋಪಿಸಿದ ರಾಜೇಶ್ ಎಂಬ ಯುವಕನ ಹೇಳಿಕೆಗೂ ಯಾವುದೇ ಸಾಮ್ಯತೆ ಕಂಡುಬಂದಿರಲಿಲ್ಲ. ಅಲ್ಲದೇ ರಾಜೇಶ್ ಮೊಬೈಲ್ ಫೋನು ಹಾಗೂ ಯುವತಿ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿ ಯುವತಿಗೂ ಹಾಗೂ ರಾಜೇಶನಿಗೂ ಯಾವುದೇ ಸಂಪರ್ಕವಿಲ್ಲದ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿತ್ತು.

ಕಿಡ್ನಾಪ್, ರೇಪ್ ಎಂಬ ನಾಟಕ..
ಈ ನಿಟ್ಟಿನಲ್ಲಿ ಯುವತಿಯನ್ನು ಪೊಲೀಸರು ಇನ್ನಷ್ಟು ತನಿಖೆಗೊಳಪಡಿಸಿದ್ದು ಈ ವೇಳೆ ಆಕೆ ಹೇಳಿದ ವಿಚಾರ ಎಲ್ಲರನ್ನೂ ದಂಗುಬಡಿಸಿತ್ತು. ತನ್ನ ಪ್ರಿಯಕರನಾದ ಗೋಳಿಯಂಗಡಿ ಮೂಲದ ಯುವಕನೊಬ್ಬನ ಜೊತೆ ಅಂದು ಮಣಿಪಾಲದಲ್ಲಿ ತಂಗಿದ್ದ ಬಗ್ಗೆ ಆಕೆ ಪೊಲಿಸರ ವಿಚಾರ ವೇಳೆ ಬಾಯ್ಬಿಟ್ಟಿದ್ದಳು. ಸೋಮವಾರ ಆತನ ಜೊತೆಯಿದ್ದ ಆಕೆ ಮಂಗಳವಾರ ಮನೆಗೆ ಬರುವಾಗ ಮನೆಯಲ್ಲಿ ಆಕೆ ಕಾಣೆಯಾದ ಬಗ್ಗೆ ಗೊಂದಲ ನಿರ್ಮಾಣವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವಸ್ಥಿತಿ ತಲುಪಿತ್ತು. ಇದರಿಂದ ಕಸಿವಿಸಿಗೊಂಡ ಆಕೆ ಮನೆಗೆ ಬಂದ ಬಳಿಕ ಅಸ್ವಸ್ಥಳಂತೆ ನಟಿಸಿ ತನ್ನ ಕಿಡ್ನಾಪ್ ನಡೆಸಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಿದ್ದಳು.

ಅಮಾಯಕ ರಾಜೇಶ ಬಲಿಪಶು…
ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ ಬಳಿಕ ಪೊಲೀಸರು ಆಕೆ ಹೇಳಿಕೆ ಪಡೆಯಲು ಬಂದಾಗಲೂ ಕೂಡ ಯುವತಿ ತನ್ನ ಮೇಲೆ ಅತ್ಯಾಚಾರ ನಡೆಸಿ ಕೊಲೆಬೆದರಿಕೆ ಹಾಕಿದ ಬಗ್ಗೆ ಹೇಳಿಕೆ ನೀಡಿದ್ದಳು. ಮಾತ್ರವಲ್ಲದೇ ರಾಜೇಶ್ ಎಂಬಾತನ ಮೇಲೆ ಆರೋಪ ಮಾಡಿದ್ದಳು. ಆಕೆ ಆರೋಪದಂತೆ ಕೊಲ್ಲೂರು, ಹಾಲ್ಕಲ್ ಭಾಗದ ರಾಜೇಶ್ ಎಂಬ ಹೆಸರಿನ ಒಂದಷ್ಟು ಮಂದಿಯನ್ನು ವಿಚಾರಣೆಗೊಳಪಡಿಸಿ ವರ ಫೋಟೋವನ್ನು ಯುವತಿಗೆ ತೋರಿಸಿದಾಗ ಆಕೆ ಅವರಲ್ಲಿ ಓರ್ವ ರಾಜೇಶ್ ಎಂಬಾತನನ್ನು ಗುರುತಿಸಿದ್ದಳು. ಆಕೆ ದೂರಿನಂತೆ ರಾಜೇಶನನ್ನು ಹಾಲ್ಕಲ್ ಪ್ರದೇಶದಿಂದ ಪೊಲೀಸರು ಕರೆತಂದು ತೀವ್ರ ವಿಚಾರಣೆಯನ್ನು ನಡೆಸಿದ್ದರು. ಆದರೇ ರಾಜೇಶ್ ಅಂದು ತಾನೂ ಊರಲ್ಲಿಲ್ಲದ ಬಗ್ಗೆ ಹಾಗೂ ತನ್ನ ಮೊಬೈಲ್ ದಾಖಲೆಗಳನ್ನು ಪರ್ಸಿಹೀಲಿಸುವ ಬಗ್ಗೆ ವಿಶ್ವಾಸದಿಂದ ಹೇಳಿದ್ದ. ಪೊಲಿಸರು ತನಿಖೆ ನಡೆಸುವಾಗ ಯುವತಿ ಹೇಳಿರುವುದು ಸುಳ್ಳು ಎಂಬುದು ಸ್ಪಷ್ಟವಾಗಿತ್ತು. ಅಲ್ಲದೇ ಆಕೆಗೊಬ್ಬ ಪ್ರಿಯಕರ ಇರುವುದು ಮತ್ತು ಇಷ್ಟಕ್ಕೆಲ್ಲಾ ಆತನೇ ಕಾರಣ ಎಂಬುದು ತಿಳಿದುಬಂದಿತ್ತು.

ರಾಜೇಶ್ ತಪ್ಪಿತಸ್ಥನಲ್ಲ….
ಇನ್ನು ಯುವತಿಯ ಸುಳ್ಳು ದೂರು ಹಾಗೂ ಹೇಳಿಕೆಗಳು ಬೆಳಕಿಗೆ ಬರುತ್ತಿದ್ದಂತೆಯೇ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಲಾಗುತ್ತದೆ. ಆತನು ಕೂಡ ಯುವತಿಯನ್ನು ಮದುವೆಯಾಗುವುದಾಗಿ ಹೇಳೀಕೆ ನೀಡಿದ ತರುವಾಯ ಇಬ್ಬರ ಕುಟುಂಬದವರು ಇದಕ್ಕೆ ಒಪ್ಪಿದ್ದಾರೆನ್ನಲಾಗಿದೆ. ಬ್ಗುರುವಾರ ಮಧ್ಯಾಹ್ನದ ಸುಮಾರಿಗೆ ಯುವತಿಯನ್ನು ಕುಂದಾಪುರದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆಕೆ ಅಲ್ಲಿ ರಾಜೇಶ್ ತಪ್ಪಿತಸ್ಥನಲ್ಲ, ತಾನು ಪ್ರಿಯಕರನೊಂದಿಗೆ ತೆರಳಿದ್ದಾಗಿ ತಿಳಿಸಿದ್ದಾಳೆನ್ನಲಾಗಿದೆ. ಇದರ ನಂತರದಲ್ಲಿ ರಾಜೇಶ್ ಅಮಾಯಕ ಎಂದಾಗಿದ್ದು ಪೊಲೀಸರು ರಾಜೇಶ್ ಹೇಳಿಕೆ ಪಡೆದು ಮಧ್ಯಾಹ್ನದ ಸುಮಾರಿಗೆ ಬಿಟ್ಟುಕಳಿಸಿದ್ದಾರೆ.

Kundapura_Crime_News (3)

(ಅಮಾಯಕ ಯುವಕ ರಾಜೇಶ್)

ನಾನೇನು ತಪ್ಪು ಮಾಡಿಲ್ಲ-ಕಾನೂನು ಹೋರಾಟ ಮಾಡುವೆ
ನಾನು ಬಾಡಿಗೆ ವಿಚಾರದಲ್ಲಿ ಸೋಮವಾರ ಮಂಗಳೂರಿಗೆ ಹೋಗಿ ವಾಪಾಸ್ ಬರುವಾಗ ತಡರಾತ್ರಿಯಾಗಿತ್ತು. ಅಂದು ಪೊಲೀಸರು ನನ್ನನ್ನು ಠಾಣೆಗೆ ಕರೆದೊಯ್ದರು. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಆ ಯುವತಿಯನ್ನು ನೋಡಿಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ ಬಳಿಕ ತನಿಖೆಯಲ್ಲಿ ನನ್ನ ಪಾತ್ರವಿಲ್ಲದಿರುವುದು ಪೊಲೀಸರಿಗೆ ತಿಳಿದುಬಂದಿದೆ. ಯುವತಿ ಯಾವುದೋ ಕಾರಣಕ್ಕೆ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು, ಇದರಿಂದ ಮಾನಸಿಕವಾಗಿ ನನ್ನ ಹಾಗೂ ಕುಟುಂಬ ಪರಿತಪಿಸಿದೆ. ಈ ಬಗ್ಗೆ ತೀವ್ರವಾಗಿ ನೊಂದಿದ್ದು ಆಕೆ ಹಾಗೂ ಸಂಬಂದಪಟ್ಟವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದೇನೆ. ಕೊಲ್ಲೂರು ತಾಯಿಯನ್ನು ನಂಬಿದ ನಾನು ಅನ್ಯಾಯ ಮಾಡಿಲ್ಲ, ಆದರೂ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡಿದ್ದು ಮಾನಸಿಕವಾಗಿ ಕುಗ್ಗಿದ್ದೇನೆ. ಇಂತಹ ಸಮಸ್ಯೆ ಇನ್ನ್ಯಾರಿಗೂ ಆಗದಿರಲಿ.
– ರಾಜೇಶ್(ಸುಳ್ಳು ದೂರಿಗೆ ಬಲಿಪಶುವಾದ ಅಮಾಯಕ)

Comments are closed.