ಚಿಂತಾಮಣಿ, ಆ.19: ತಾಲೂಕಿನ ಕೈವಾರ ಹೋಬಳಿ ಅಟ್ಟೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿರುವ ಅನ್ನಪೂರ್ಣ ಅಕ್ಷರ ದಾಸೋಹ ಅಡುಗೆ ಕೋಣೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡು ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಭಾರೀ ಅನಾಹುತ ತಪ್ಪಿದೆ.
ಶಾಲಾ ಕಟ್ಟಡದ ಪಕ್ಕದಲ್ಲಿಯೇ ಇರುವ ಅಡುಗೆ ಕೋಣೆಯಲ್ಲಿ ಅಡುಗೆ ಸಿಬ್ಬಂದಿಯಾದ ಪಾರ್ವತಮ್ಮ ಮತ್ತು ಸಹಾಯಕಿ ಪ್ರಭಾವತಮ್ಮ ಎಂದಿನಂತೆ ಸ್ಟೌವ್ ಅಂಟಿಸಿ ಅಡುಗೆ ಮಾಡುತ್ತಿದ್ದರು.
ಅಡುಗೆ ಕೋಣೆಯಲ್ಲಿ ಪೈಪುನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು ಅದನ್ನು ಗಮನಹರಿಸದ ಅವರು ಎಂದಿನಂತೆ ಅಡುಗೆ ಮಾಡುತ್ತಿದ್ದರು. ಅಡುಗೆ ಮಾಡುವಾಗ ಕಿಟಕಿಯಿಂದ ಜೋರು ಗಾಳಿ ಬೀಸುತ್ತಿದ್ದರಿಂದ ಉರಿಯುತ್ತಿರುವ ಗ್ಯಾಸ್ ಸ್ಟೌವ್ಗಳು ಪದೇ ಪದೇ ಆಫ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಅಡುಗೆ ಸಿಬ್ಬಂದಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸ್ವಲ್ಪಕಾಲ ಅಡುಗೆ ಕೋಣೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಗ್ಯಾಸ್ ಸೋರಿಕೆಯಾಗಿ ಕಟ್ಟಡದಿಂದ ಹೊರ ಹೋಗಲಿಕ್ಕೆ ಆಗದೆ ಸ್ಪೋಟಗೊಂಡಿದೆ.

Comments are closed.