ಮಂಗಳೂರು, ಅಗಸ್ಟ್. 12 : ಇಂದು ಶುಭ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಕರಾವಳಿಯಾದ್ಯಂತ ಮಹಿಳೆಯರು ಸಂಭ್ರಮ ಸಡಗರದಿಂದ ಆಚರಿಸಿದರು.ಕರಾವಳಿಯ ಹೆಚ್ಚಿನ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು “ಭಾಗ್ಯದ ಲಕ್ಷ್ಮೀ ಬಾರಮ್ಮ” ಎಂಬ ಭಜನೆ ಹಾಡಿನೊಂದಿಗೆ ಭಕ್ತಿ ಬಾವದಿಂದ ಪೂಜಿಸಲಾಯಿತು.
ಮಹಿಳೆಯರ ಹಬ್ಬವೆಂದೇ ಬಣ್ಣಿಸುವ ವರಮಹಾಲಕ್ಷ್ಮೀ ಪೂಜೆಗೆ ಕರಾವಳಿಯಲ್ಲಿ ಅಂತಹ ವಿಶೇಷ ಪ್ರಾಶಸ್ತ್ಯವಿಲ್ಲದಿದ್ದರೂ ಕೆಲವೊಂದು ದೇವಸ್ಥಾನಗಳಲ್ಲಿ ಮಾತ್ರ ವರ್ಷಾಂಪ್ರತಿ ವರಮಹಾಲಕ್ಷ್ಮೀ ಪೂಜೆಯ ದಿನ ಶ್ರೀ ದೇವಿಯ ಆರಾಧನೆ ಸಂಭ್ರಮ ಸಡಗರದಿಂದ ನಡೆಯುತ್ತದೆ.
ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನಗಳಾದ ಮಂಗಳಾದೇವಿ, ಮಾರಿಗುಡಿ, ಶ್ರೀ ಕ್ಷೇತ್ರ ಕಟೀಲು, ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಗಳಲ್ಲಿ ಇಂದು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಮಂಗಳೂರು ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶ್ರೀ ಗುರುಮಠದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ದಾಮೋದರ ಪುರೋಹಿತರ ಪ್ರಧಾನ ಅಚಾರ್ಯತ್ವದಲ್ಲಿ ಶ್ರೀ ಕ್ಷೇತ್ರದ ಪಟ್ಟೆಲಿಂಗಪ್ಪಾಚರ್ಯ ಕಲ್ಯಾಣ ಮಂಟಪದಲ್ಲಿ ಇಂದು ಜರಗಿತು. ಶ್ರೀ ಕ್ಷೇತ್ರದ ೨ನೇ ಮೊಕ್ತೇಸರರಾದ ಕಡೇಶ್ವಾಲ್ಯ ಉಮೇಶ್ ಆಚಾರ್ಯ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದರು. ಅನೇಕ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರಮಹಾಲಕ್ಷ್ಮೀ ವ್ರತದ ಮಹತ್ವ :
ರಾಜ್ಯದ ಎಲ್ಲ ಭಾಗಗಳಲ್ಲೂ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ. ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ವರಮಹಾಲಕ್ಷ್ಮೀ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. ವರಮಹಾಲಕ್ಷ್ಮೀ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ. ಇದೇ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತಿರುವ ಮಹಿಳೆಯರು ಇಂದು ವರಮಹಾಲಕ್ಷ್ಮೀ ದೇವತೆಯನ್ನು ಬಗೆಬಗೆಯ ಹೂವಿನಿಂದ ಅಲಂಕರಿಸಿ ವಿಶೇಷ ಪೂಜೆ ನಡೆಸಿದರು, ನೆರೆಹೊರೆಯ ಸುಮಂಗಲೆಯರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬಲಾಯಿತು. ಐಶ್ವರ್ಯ ನೆಲೆಯೂರಲಿ ಹಾಗೂ ನಿರಂತರ ಕುಂಕುಮ ಭಾಗ್ಯ ಕರುಣಿಸಲಿ ಎಂಬ ಉದ್ದೇಶದಿಂದ ಶ್ರಾವಣ ಮಾಸದಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀ ದೇವತೆಯನ್ನು ಪೂಜಿಸಿ ಆಕೆ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ.
ರಾಜ್ಯದ ವಿವಿಧೆಡೆಗಳಲ್ಲಿ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನವನ್ನು ಮುಗಿಸಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿದ ಮಹಿಳೆಯರು, ಮನೆಯ ಮಧ್ಯಭಾಗದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸಿ ಪೂಜೆಗೆ ಸಿದ್ದತೆ ಮಾಡಿಕೊಂಡು ಬೆಳ್ಳಿ ಅಥವಾ ಹಿತ್ತಾಳೆಯಿಂದ ಕಲಶವನ್ನು ತಯಾರಿಸಿ, ಅದರ ಸುತ್ತ ಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆದು ಕಣ್ಮನ ಸೆಳೆಯುವಂತೆ ಅಲಂಕರಿಸಿದರು.
ಈ ಕಲಶದಲ್ಲಿ ಅಕ್ಕಿ, ನೀರು, ನಾಣ್ಯ, ಪೂರ್ಣ ಲಿಂಬೆ, ಐದು ಪ್ರಕಾರದ ಎಲೆಗಳು, ಅಡಿಕೆಯನ್ನು ಕಲಶದಲ್ಲಿ ಇರಿಸುತ್ತಾರೆ. ಕೆಲವರು ಅರಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಳೆಗಳು ಕಪ್ಪು ಮಣಿಗಳನ್ನು ಇರಿಸುತ್ತಾರೆ. ನಂತರ ಅರಶಿನದ ಮಿಶ್ರಣವನ್ನು ತೆಂಗಿನ ಕಾಯಿಗೆ ಹಚ್ಚಿ ಕಲಶದ ಬಾಯಿಗೆ ಇರಿಸಿ, ಎಲೆಯಿಂದ ಆವೃತವಾದ ಕುಂಭದ ಬಾಯಿಗೆ ತೆಂಗಿನಕಾಯಿಯನ್ನು ಇರಿಸುವುದು ವಾಡಿಕೆ. ನಂತರ ಇದರ ಮೇಲೆ ಲಕ್ಷ್ಮೀ ದೇವರನ್ನಿಟ್ಟು ಮಹಿಳೆಯರು ಪೂಜೆ ನಡೆಸುವುದನ್ನು ರೂಡಿಸಿಕೊಂಡು ಬಂದಿದ್ದಾರೆ. ಅದರಂತೆ ಇಂದು ಕೂಡ ಮಹಿಳೆಯರು ಎಲ್ಲೆಡೆ ಸಂಭ್ರಮದಿಂದ ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು.
Comments are closed.