ಕರಾವಳಿ

ಮೂಡನಂಬಿಕೆಗಳೆ ಹೀಗೆ… ಕನಸನ್ನು ನಂಬಿ ಕಾಳಿ ಮಾತೆಗೆ ನಾಲಿಗೆ ಕತ್ತರಿಸಿಕೊಟ್ಟ ವಿದ್ಯಾರ್ಥಿನಿ

Pinterest LinkedIn Tumblr

Student_Cut_Tongue

ಭೋಪಾಲ್: ಮೂಢನಂಬಿಕೆಗಳಿಂದಾಗಿ ನರಬಲಿ ಕೊಡೋದು, ಕಣ್ಣು ಕಿತ್ತು ಕೊಡೋದು ಹೀಗೆ ಅನೇಕ ಭಯಾನಕ ಘಟನೆಗಳ ಬಗ್ಗೆ ಓದಿದ್ದೀರಿ. ಈಗ ಇವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಕಾಳಿ ಮಾತೆಗಾಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಲಿಗೆಯನ್ನೇ ಕತ್ತರಿಸಿ ಕೊಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮಧ್ಯಪ್ರದೇಶದ ಟಿಆರ್ ಎಸ್ ಕಾಲೇಜಿನ ಆರತಿ ದುಬೆ (19ವರ್ಷ) ಎಂಬ ವಿದ್ಯಾರ್ಥಿನಿಗೆ ಕನಸಿನಲ್ಲಿ ಕಾಳಿ ಮಾತೆ ಕಾಣಿಸಿಕೊಂಡು ನಾಲಿಗೆ ಬಲಿ ಕೊಡಲು ಕೇಳಿದ್ದಳಂತೆ. ಅದರಂತೆ ಮಧ್ಯಪ್ರದೇಶದ ರೀವಾ ನಗರದಲ್ಲಿರುವ ಕಾಳಿ ಮಾತೆ ದೇವಾಲಯಕ್ಕೆ ಬಂದ ಆರತಿ ಬ್ಲೇಡ್ ನಿಂದ ನಾಲಿಗೆಯನ್ನು ಕತ್ತರಿಸಿಕೊಂಡುಬಿಟ್ಟಿದ್ದಳು. ಪುರೋಹಿತರು ಹಾಗೂ ಇತರ ಭಕ್ತರು ನೋಡ, ನೋಡುತ್ತಿದ್ದಂತೆಯೇ ಆರತಿ ಕುಸಿದು ಬಿದ್ದಿದ್ದಳು. ಕೂಡಲೇ ಅಲ್ಲಿ ಸೇರಿದ್ದ ಭಕ್ತ ಸಮೂಹ, ಪುರೋಹಿತರು ಶಾಲೊಂದನ್ನು ಆಕೆಯ ಮೈಮೇಲೆ ಹಾಕಿದ್ದರು.

ಅಚ್ಚರಿ ಏನಪ್ಪಾ ಅಂದರೆ ಸುಮಾರು 5 ತಾಸುಗಳ ನಂತರ ಆರತಿಗೆ ಪ್ರಜ್ಞೆ ಬಂದಿತ್ತು. ನೆರೆದಿದ್ದ ಭಕ್ತರು ಆಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಪ್ರಜ್ಞೆ ಬಂದ ನಂತರ ಆರತಿ ಸಂಪ್ರದಾಯದಂತೆ ನಗುಮೊಗದಿಂದಲೇ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿರುವುದಾಗಿ ವರದಿ ತಿಳಿಸಿದೆ.
ಈ ಸುದ್ದಿ ಎಲ್ಲೆಡೆ ಹಬ್ಬಿದ ಪರಿಣಾಮ ಸ್ಥಳಕ್ಕೆ ಪೊಲೀಸರು, ವೈದ್ಯರು ಆಗಮಿಸಿದ್ದರು. ವೈದ್ಯರು ಆಕೆಯನ್ನು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರಂತೆ!

ಈ ಬಗ್ಗೆ ಆರತಿ ತನ್ನ ಅಣ್ಣನ ಬಳಿ ಹೇಳಿಕೊಂಡಿದ್ದಳು, ಆದರೆ ತಾನು ಆಕೆಯ ಮಾತನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಮಾಷೆ ಮಾಡುತ್ತಿದ್ದಾಳೆ ಅಂದುಕೊಂಡಿದ್ದೆ. ಅನಕ್ಷರಸ್ಥರು, ಮೂಢನಂಬಿಕೆ ನಂಬುವ ಜನರು ಈ ರೀತಿ ನಡೆದುಕೊಳ್ಳುತ್ತಾರೆ ಅಂತ ತಿಳಿದುಕೊಂಡಿದ್ದೆ. ಕಾಲೇಜಿಗೆ ಹೋಗುವ ನನ್ನ ತಂಗಿಯೇ ಈ ರೀತಿ ಮೂಢನಂಬಿಕೆಗೆ ಜೋತು ಬೀಳುತ್ತಾಳೆ ಅಂತ ಯಾವತ್ತೂ ನಂಬಿಲ್ಲ ಎಂದು ಆರತಿ ಸಹೋದರ ಸಚಿನ್ ಹೇಳಿರುವುದಾಗಿ ಡೈಲಿ ಮೇಲ್ ಆನ್ ಲೈನ್ ವರದಿ ಮಾಡಿದೆ.

ವರದಿ / ಚಿತ್ರ ಕೃಪೆ : ಉದಯವಾಣಿ

Comments are closed.