ಮಂಗಳೂರು, ಆ.6: ನಗರದ ಹೊರವಲಯದ ನೀರುಮಾರ್ಗ ಸಮೀಪದ ಪಡು, ಬೊಂಡಂತಿಲ ಎಂಬಲ್ಲಿರುವ ಸಂತ ಥೋಮಸರ ಅನುದಾನಿತ ಹಿ.ಪ್ರಾ. ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒತ್ತಾಯಪೂರ್ವಕವಾಗಿ ಉರ್ದು ಮತ್ತು ಅರೆಬಿಕ್ ಭಾಷಾ ಶಿಕ್ಷಣವನ್ನು ನೀಡಲಾಗುತ್ತಿದೆ ಎಂಬ ಆರೋಪದಲ್ಲಿ ಶ್ರೀರಾಮಸೇನೆಯ ಕಾರ್ಯಕರ್ತರಿಂದ ದಾಳಿಗೊಳಗಾಗಿದ್ದ ಸೈಂಟ್ ಥೋಮಸ್ ಶಾಲೆಯಲ್ಲಿ ಅರೆಬಿಕ್ ಸಹಿತ ಇತರ ಪಠ್ಯೇತರ ವಿಷಯಗಳ ಶಿಕ್ಷಣವನ್ನು ಸ್ಥಗಿತಗೊಳಿಸಲಾಗಿದೆ.
ಶಾಲೆಯಲ್ಲಿ ಪಠ್ಯಕ್ಕೆ ಸಂಬಂಧಪಟ್ಟ ವಿಷಯಗಳ ಜೊತೆಗೆ ಫ್ರೆಂಚ್, ಜರ್ಮನಿ, ಅರೆಬಿಕ್, ಕರಾಟೆ ಮತ್ತಿತರ ಪಠ್ಯೇತರ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ, ಶಾಲಾಡಳಿತ ಮಂಡಳಿಯ ತೀರ್ಮಾನದ ಹಿನ್ನೆಲೆಯಲ್ಲಿ ಶಿಕ್ಷಣ ಮಂಡಳಿಯು ನಿಗದಿಪಡಿಸಿದ ವಿಷಯಗಳನ್ನು ಹೊರತುಪಡಿಸಿ ಇತರ ಎಲ್ಲಾ ಬಗೆಯ ಶಿಕ್ಷಣವನ್ನು ಶಾಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಬ್ರಾಗ್ಸ್ ತಿಳಿಸಿದ್ದಾರೆ.
ಸೈಂಟ್ ಥೋಮಸರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತೀ ಶನಿವಾರ ಅರೆಬಿಕ್ ಭಾಷೆ ಮತ್ತು ಇತರ ಭಾಷಾ ಭಾಷಾ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮಸೇನೆಯ ಸುಮಾರು 50ರಿಂದ 60 ಕಾರ್ಯಕರ್ತರು ಜುಲೈ ೩೦ರಂದು ಶಾಲೆಗೆ ನುಗ್ಗಿ ಮಕ್ಕಳಿಗೆ ಅರೆಬಿಕ್ ಭಾಷೆಗಳನ್ನು ಕಲಿಸದಂತೆ ಆಗ್ರಹಿಸಿ, ಜೊತೆಗೆ ಮುಖ್ಯೋಪಾಧ್ಯಾಯರ ಬಳಿಯೂ ಅರೆಬಿಕ್ ಭಾಷಾ ಶಿಕ್ಷಣ ನೀಡದಂತೆ ಒತ್ತಾಯಿಸಿ, ಜೊತೆಗೆ ತರಗತಿ ನಡೆಯುತ್ತಿದ್ದ ವೇಳೆ ತರಗತಿಯ ಚಿತ್ರೀಕರಣ ಮಾಡಿ, ಪುಸ್ತಕಗಳನ್ನು ಕೊಂಡೊಯ್ದಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ರಾಮ ಸೇನೆಯ ೨೦ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಕಳೆದ 2 ವರ್ಷಗಳಿಂದ ಶಾಲೆಯಲ್ಲಿ 6 ಮತ್ತು 7 ತರಗತಿ ವಿದ್ಯಾರ್ಥಿಗಳಿಗೆ ಫ್ರೆಂಚ್, ಜರ್ಮನಿ, ಅರೆಬಿಕ್ ಮತ್ತು ಕರಾಟೆ ತರಗತಿಗಳನ್ನು ನಡೆಸುತ್ತಿದ್ದೇವೆ. ಇದಕ್ಕೆ ಆಸಕ್ತ ವಿದ್ಯಾರ್ಥಿಗಳು ಮಾತ್ರ ಸೇರಬಹುದಾಗಿದೆ. ಇದಕ್ಕಾಗಿ ನಾವು ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಸೂಲಿ ಮಾಡಿಲ್ಲ. ಯಾರನ್ನೂ ಒತ್ತಾಯಪೂರ್ವಕವಾಗಿ ಈ ತರಗತಿಗಳಿಗೆ ಸೇರಿಸಿಲ್ಲ, 59 ವಿದ್ಯಾರ್ಥಿಗಳ ಪೈಕಿ 40 ವಿದ್ಯಾರ್ಥಿಗಳು ಈ ತರಗತಿಗಳಿಗೆ ಸೇರಿದ್ದಾರೆ. ಈವರೆಗೆ ನಾವು ಉರ್ದು ಭಾಷಾ ತರಗತಿಗಳನ್ನು ನಡೆಸಿಲ್ಲ. ಆದರೆ ಶಾಲೆಗೆ ದಾಳಿ ಮಾಡಿರುವ ಕಾರ್ಯಕರ್ತರು ಉರ್ದು ಮತ್ತು ಅರೆಬಿಕ್ ಕಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮೆಲ್ವಿನ್ ಅವರು ತಿಳಿಸಿದ್ದರು.
ಇದೀಗ ಸೈಂಟ್ ಥೋಮಸ್ ಶಾಲೆಯಲ್ಲಿ ಅರೆಬಿಕ್ ಸಹಿತ ಇತರ ಪಠ್ಯೇತರ ವಿಷಯಗಳ ಶಿಕ್ಷಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Comments are closed.