ಕರಾವಳಿ

ಬೀದಿಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿ ನವೀಕರಣ ಹಾಗೂ ಗುರುತು ಚೀಟಿ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

Bidi_Badi_Protest_1

ಮಂಗಳೂರು,ಜು.28: ಮಂಗಳೂರು ಮಹಾನಗರ ಪಾಲಿಕೆಯು 208 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿ ನವೀಕರಣ ಹಾಗೂ ಬಾಕಿ ಉಳಿದಿರುವ 350 ಮಂದಿಗೆ ಗುರುತು ಚೀಟಿಯನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿ ಹಾಗೂ ದಿಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಕೈಬಿಟ್ಟು, ಗೌರವಯುತ ಬದುಕಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಬೀದಿ ಬದಿ ವ್ಯಾಪಾರಸ್ಥರು ಸಿ‌ಐಟಿಯು ನೇತೃತ್ವದಲ್ಲಿ ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಧರಣಿ ನಿರತರ ಪರವಾಗಿ ಮಾತನಾಡಿದ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಹಾಗೂ ಸಿ‌ಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿವ್ಯಾಪಾಸ್ಥರ ಪರವಾಗಿ ದೇಶದ ಸಂಸತ್ತಿನಲ್ಲಿ ಮಸೂದೆ ಜಾರಿಗೊಂಡಿದ್ದರೂ ಅದನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದು ದೂರಿದರು.

Bidi_Badi_Protest_2 Bidi_Badi_Protest_3 Bidi_Badi_Protest_4 Bidi_Badi_Protest_5 Bidi_Badi_Protest_6

ಮಸೂದೆ ಆಧಾರದಲ್ಲಿ ರಾಜ್ಯ ಸರಕಾರಗಳು ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕೆಂದಿದ್ದರೂ ಈ ಬಗ್ಗೆ ಸರಕಾರ ಕ್ರಮ ಕೈಗೊಂಡಿಲ್ಲ. ಬದಲಾಗಿ ನಗರ ಮಾರಾಟಗಾರರ ಸಮಿತಿ (ಟೌನ್ ವೆಂಡಿಂಗ್ ಸಮಿತಿ) ಸಭೆ ಸೇರದೆ ಒಂಭತ್ತು ತಿಂಗಳಾಗಿವೆ. ಕಳೆದ ಬಾರಿ 208 ಮಂದಿಗೆ ಗುರುತು ಚೀಟಿ ನೀಡಲಾಗಿದ್ದು, 2015ರ ಅಕ್ಟೋಬರ್ಗೆ ಅದರ ಅವಧಿ ಮುಗಿದಿತ್ತು. ಬಳಿಕ ಗುರುತು ಚೀಟಿ ನವೀಕರಣಗೊಂಡಿಲ್ಲ. ಉಳಿದ 350 ಮಂದಿಗೆ ನೀಡಲು ಗುರುತುಚೀಟಿ ಮುದ್ರಣಗೊಂಡು 1 ವರ್ಷ ಕಳೆದರೂ ಅದನ್ನು ವಿತರಿಸಲಾಗಿಲ್ಲ. ಈ ಮೂಲಕ ಮಂಗಳೂರು ಮಹಾನಗರ ಪಾಲಿಕೆಯು ಬೀದಿಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದೆ. ಜು.29ರಂದು ಮನಪಾ ಸಾಮಾನ್ಯ ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕುರಿತಂತೆ ಚರ್ಚೆ ನಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸುನಿಲ್ ಕುಮಾರ್ ಬಜಾಲ್ ನುಡಿದರು.

ಮಂಗಳೂರು ಮಹಾನಗರ ಪಾಲಿಕೆಯಡಿಯಲ್ಲಿ ಟೌನ್‌ವೆಂಡಿಂಗ್ ಕಮಿಟಿ ರಚನೆಗೊಂಡು ನಾಮಕಾವಸ್ತೆಗೆ ಕೆಲವು ಬಾರಿ ಸಭೆ ಸೇರಿದ್ದರೂ ಯಾವುದೇ ಸರಿಯಾದ ತೀರ್ಮಾನವಾಗುತ್ತಿಲ್ಲ. ಆದ ತೀರ್ಮಾನಗಳು ಜಾರಿಗೊಳ್ಳುತ್ತಿಲ್ಲ. ಸದ್ಯಕ್ಕೆ ಖಿಗಿ‌ಅ ಸಭೆ ಸೇರದೆ 9 ತಿಂಗಳಾದರೂ ಮನಪಾ ಯಾವುದೇ ರೀತಿಯ ಸ್ಪಂಧನವಿಲ್ಲ. ಕಳೆದ ಬಾರಿ 208 ಮಂದಿಗೆ ಗುರುತುಚೀಟಿ ನೀಡಿದ್ದರೂ, ಅದರ ಅವಧಿ 2015ರ ಅಕ್ಟೋಬರ್ ಮುಗಿದಿದ್ದು, ಗುರುತುಚೀಟಿಯನ್ನು ನವೀಕರಣಗೊಳಿಸಬೇಕಾಗಿದೆ. ಉಳಿದ 350 ಮಂದಿಗೆ ನೀಡಬೇಕಾದ ಗುರುತುಚೀಟಿ ಮುದ್ರಣಗೊಂಡು 1 ವರ್ಷ ಕಳೆದರೂ ಇನ್ನೂ ನೀಡಿಲ್ಲ. ಪರ್ಯಾಯ ವ್ಯವಸ್ಥೆಗಾಗಿ ನಗರದ ಹಲವು ಕಡೆಗಳಲ್ಲಿ ಜಾಗ ನಿಗದಿಪಡಿಸಿದ್ದರೂ, ಅದನ್ನು ನೀಡುವಲ್ಲಿ ಮನಪಾಕ್ಕೆ ಯಾವುದೇ ಆಸಕ್ತಿ ಇಲ್ಲ. ಮಾತ್ರವಲ್ಲದೆ ಮಂಗಳೂರು ಮಹಾನಗರ ಪಾಲಿಕೆ ತಾನು ಮಾಡಬೇಕಾದ ಕೆಲಸವನ್ನು ಮಾಡದೆ ವಿನಾಃಕಾರಣ ಬೀದಿಬದಿ ವ್ಯಾಪಾರಸ್ಥರ ಮೇಲೆ ಧಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಬೀದಿಬದಿ ವ್ಯಾಪಾರಸ್ಥರ ನ್ಯಾಯಯುತ ಬೇಡಿಕೆಗಳಿಗೆ ಮನಪಾವು ಕೂಡಲೇ ಸ್ಪಂಧಿಸಬೇಕು, ಇಲ್ಲದಿದ್ದಲ್ಲಿ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಮನಪಾ ಕಚೇರಿಯೆದುರು ನಡೆದ ಧರಣಿ ಸತ್ಯಾಗ್ರಹವನ್ನು ಸಿ‌ಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಉದ್ಘಾಟಿಸುತ್ತಾ, ಬೀದಿಬಿದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ಮಸೂದೆಯೊಂದು ದೇಶದ ಸಂಸತ್ತಿನಲ್ಲಿ ಅಂಗೀಕಾರಗೊಂಡರೂ ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿದೆ. ಕಾರ್ಮಿಕ ವರ್ಗದ ಹಿತ ಕಾಯಬೇಕಾದ ಇವೆರಡೂ ಸರ್ಕಾರಗಳು ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುತ್ತಿದೆ. ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಸದಾ ಕೆಂಗಣ್ಣು ಬೀರುತ್ತಿರುವ ಸರ್ಕಾರಗಳು ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರ ಹೂಡಿಕೆ ಮಾಡುವ ಮೂಲಕ ಕೋಟ್ಯಾಂತರ ಜನತೆಯ ಬದುಕಿಗೆ ಮಾರಕ ಹೊಡೆತ ನೀಡಿದೆ. ಸರಕಾರಗಳ ಇಂತಹ ಜನವಿರೋಧಿ ನೀತಿಗಳ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಬೀದಿಗಿಳಿದು ಪ್ರಬಲ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

Bidi_Badi_Protest_7 Bidi_Badi_Protest_8 Bidi_Badi_Protest_9

ಸಿ‌ಐಟಿಯು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರು ಮಾತನಾಡಿ, ಅಂದು ಬಿಜೆಪಿ ಆಡಳಿತದ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಸಮರಧೀರ ಹೋರಾಟ ನಡೆಸಿದ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಬಹಿರಂಗ ಬೆಂಬಲ ನೀಡಿತ್ತು. ಇಂದು ಅದೇ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಬೀದಿಬದಿ ವ್ಯಾಪಾರಸ್ಥರಿಗೆ ಸರಿಯಾಗಿ ವ್ಯವಸ್ಥೆ ಮಾಡುವ ಬದಲು ಮತ್ತೆ ಟೈಗರ್ ಕಾರ್‍ಯಾಚರಣೆ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ. ಈ ರೀತಿಯ ಧಾಳಿ ಮುಂದುವರಿಸಿದ್ದೇ ಆದರೆ ಬಿಜೆಪಿಗೆ ಕಲಿಸಿದ ಪಾಠವನ್ನೇ ನಗರದ ಪ್ರಜ್ಞಾವಂತ ಜನತೆ ಕಾಂಗ್ರೆಸ್‌ಗೂ ಕೂಡ ಕಲಿಸಲಿದ್ದಾರೆ ಎಂದು ಹೇಳಿದರು.

ಧರಣಿ ಸತ್ಯಾಗ್ರಹವನ್ನು ಉದ್ಧೇಶಿ ಸಿ‌ಐಟಿಯು ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಮುದಾಯದ ಸಂಚಾಲಕರಾದ ವಾಸುದೇವ ಉಚ್ಚಿಲ್, ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪ ನಂತೂರು, ಸಿ‌ಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ್, ನಿವೇಶನ ರಹಿತರ ಹೋರಾಟ ಸಮಿತಿಯ ಕಾರ್ಯದರ್ಶಿ ಸಂತೋಷ್ ಶಕ್ತಿನಗರ ಮುಂತಾದವರು ಮಾತನಾಡುತ್ತಾ, ಬೀದಿಬದಿ ವ್ಯಾಪಾರಸ್ಥರಿಗೆ ಯಾವುದೇ ರೀತಿಯ ಅನ್ಯಾಯವನ್ನು ಮನಪಾ ಮಾಡಿದ್ದಾದರೆ ಎಲ್ಲಾ ವಿಭಾಗದ ಕಾರ್ಮಿಕರು ಬೀದಿಗಿಳಿದು ಹೋರಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Bidi_Badi_Protest_10 Bidi_Badi_Protest_11

ಪ್ರತಿಭಟನೆಗೂ ಮುನ್ನ…………….

ಪ್ರತಿಭಟನೆಗೂ ಮುನ್ನ ಪ್ರತಿಭಟನ ನಿರತ 600ಕ್ಕೂ ಮಿಕ್ಕಿದ ಬೀದಿಬದಿ ವ್ಯಾಪಾರಸ್ಥರು ನಗರದ ಪಿವಿ‌ಎಸ್ ಜಂಕ್ಷನ್‌ನಿಂದ ಮೆರವಣಿಗೆಯಲ್ಲಿ ಹೊರಟು, ಬಾಕಿ ಉಳಿದ ಗುರುತುಚೀಟಿಯನ್ನು ಕೂಡಲೇ ನೀಡಿರಿ. ಈ ಹಿಂದೆ ನೀಡಿದ ಗುರುತುಚೀಟಿಯ ನವೀಕರಣ ಆಗಲೇಬೇಕು, ಪರ್ಯಾಯ ವ್ಯವಸ್ಥೆ ಆಗಲೇಬೇಕು. ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ ಲಾಲ್‌ಬಾಗ್‌ನಲ್ಲಿರುವ ಮನಪಾ ಕಚೇರಿಯತ್ತ ಸಾಗಿದರು.

ಧರಣಿ ಸತ್ಯಾಗ್ರಹದ ನೇತೃತ್ವವನ್ನು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮುಹಮ್ಮದ್ ಮುಸ್ತಫಾ, ಸಂತೋಷ್ ಕುಮಾರ್ ಆರ್.ಎಸ್., ಅತ್ತಾವುಲ್ಲ, ಹಿತೇಶ್ ಪೂಜಾರಿ, ಸಿಕಂದರ್, ಮೇರಿ ಡಿ’ಸೋಜ, ಹಸನ್, ಆದಂ, ಹೆಲೆನ್, ಅಣ್ಣಯ್ಯ ಕುಲಾಲ್, ರವಿ ಪೂಜಾರಿ, ಜಾಕೀರ್ ಹುಸೇನ್, ಮುಜಾಫರ್, ಚೆರಿಯೋನು ಮುಂತಾದವರು ವಹಿಸಿದ್ದರು.

Comments are closed.