ಕರಾವಳಿ

ಶಿಕ್ಷಕರ ವರ್ಗಾವಣೆ ನೀತಿ ಖಂಡಿಸಿ ಸುರತ್ಕಲ್ ಶಾಲೆಗೆ ಬೀಗ ಜಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು

Pinterest LinkedIn Tumblr

Suratkal_School_Lock

ಸುರತ್ಕಲ್, ಜು.28 : ಸುರತ್ಕಲ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಸುರತ್ಕಲ್ ಶಾಲೆ ಅತಂತ್ರ ಸ್ಥಿತಿಯಲ್ಲಿದೆ.

ಶಿಕ್ಷಕರ ವರ್ಗಾವಣೆ ನೀತಿಯ ವಿರುದ್ಧ ಜಿಲ್ಲೆಯ ಹಲವು ಕಡೆ ಪ್ರತಿಭಟನೆ ನಡೆದಿವೆ. ಇದೀಗ ಸುರತ್ಕಲ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೂಡ ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

117 ಮಕ್ಕಳಿರುವ ಶಾಲೆಯಲ್ಲಿ ಸದ್ಯ ಆರು ಶಿಕ್ಷಕರಿದ್ದಾರೆ. ಹಾಗಾಗಿ ಶಾಲೆಯಲ್ಲಿ ಹೆಚ್ಚುವರಿ ಎಂದು ಪರಿಗಣಿಸಲಾದ ಒಂದು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಸರಕಾರದ ಈ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಘಟನಾ ಸ್ಥಳಕ್ಕೆ ಸುರತ್ಕಲ್ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಾಜಲಕ್ಷ್ಮೀಯವರು ಭೇಟಿ ನೀಡಿ ಎಸ್‌ಡಿಎಂಸಿ-ಶಿಕ್ಷಕರ ಜೊತೆ ಮಾತುಕತೆ ನಡೆಸಿದ್ದಾರೆ. ‘ಇದೊಂದು ಸರಕಾರದ ಸುತ್ತೋಲೆಯಾಗಿದ್ದು, ನನಗೇನು ಮಾಡಲು ಸಾಧ್ಯವಿಲ್ಲ’ ಎಂಬ ಅಸಹಾಯಕತೆಯನ್ನು ರಾಜಲಕ್ಷ್ಮೀ ಅವರು ಸಭೆಯಲ್ಲಿ ತೋಡಿಕೊಂಡಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಸದ್ಯ ಸ್ಥಳೀಯ ಶಾಸಕ ಮೊಯ್ದಿನ್ ಬಾವಾ ಅವರ ನೇತೃತ್ವದಲ್ಲಿ ಈ ವಿಚಾರದಲ್ಲಿ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಪೋಷಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ನಾಳೆ ಕೂಡ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ವರ್ಗಾವಣೆ ಖಂಡಿಸಿ ಸ್ಥಳೀಯರ ಆಕ್ರೋಶ :

ಒಂದು ಕಡೆ ಖಾಸಗಿ ಶಾಲೆಗಳ ಅಬ್ಬರಕ್ಕೆ ನಲುಗಿ ಸರ್ಕಾರಿ ಶಾಲೆಗಳು ಬೀಗ ಜಡಿಯಲ್ಪಡುತ್ತಿದ್ದರೆ ಮತ್ತೊಂದೆಡೆ ಅಳಿದುಳಿದ ಶಾಲೆಗಳು ಕೂಡ ಶಿಕ್ಷಕರ ವರ್ಗಾವಣೆಯಿಂದ ಬಸವಳಿಯುತ್ತಿರುವುದು ದುರದೃಷ್ಟಕರ ಸಂಗತಿ. ಕನ್ನಡ ಉಳಿಸಿ-ಕನ್ನಡ ಬೆಳೆಸಿ ಎಂಬ ಸರ್ಕಾರದ ಘೋಷಣೆ ಕೇವಲ ಮಾತಿಗಷ್ಟೇ ಸೀಮಿತವಾದಂತಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಹೊಸ ಶಿಕ್ಷಕರ ನೇಮಕ ಮಾಡುವುದನ್ನು ಬಿಟ್ಟು, ಇತರೆ ಶಾಲೆಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Comments are closed.