ಮಂಗಳೂರು: ಸಂಘಟನೆಯ ಶಿಬಿರಕ್ಕೆ ಮಂಗಳೂರು ಮೂಲದ ಮಹಿಳೆಯೊಬ್ಬರು ಸೇರಿದ್ದಾರೆಂಬ ಮಾಹಿತಿ ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಉನ್ನತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ರಿಯಾದಲ್ಲಿರುವ ಐಸಿಸ್ ಉಗ್ರ ಸಂಘಟನೆಯ ಶಿಬಿರಕ್ಕೆ ಕೇರಳದಿಂದ ತೆರಳಿದವರ ಪೈಕಿ ಒಬ್ಬಾಕೆ ಮಂಗಳೂರು ಮೂಲದವಳು ಎಂಬುದು ದೃಢಪಟ್ಟಿದೆ.
ಈಕೆ ಉಳ್ಳಾಲದ ಮಾಜಿ ಶಾಸಕ, ಕನ್ನಡದ ಕಟ್ಟಾಳು ಎಂದೇ ಹೆಸರಾದ ಬಿ.ಎಂ. ಇದಿನಬ್ಬರ ಮರಿಮಗಳು ಎನ್ನಲಾಗಿದ್ದು, ಈಗಾಗಲೇ ಕೇರಳ-ಕರ್ನಾಟಕದ ಗುಪ್ತಚರ ಇಲಾಖೆ ಹಾಗೂ ಅಪರಾಧ ಪತ್ತೆ ವಿಭಾಗದ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ದಿ. ಇದಿನಬ್ಬರ ಪುತ್ರ ಬಿ.ಎಂ. ಬಾಷಾರ ಪುತ್ರಿಯ ಮಗಳು ನಾಪತ್ತೆಯಾಗಿದ್ದು, ಈಕೆಯ ಹೆಸರು ಅಜ್ಮಲ್ (24). ತಾಯಿಯ ಅನಾರೋಗ್ಯದ ಕಾರಣದಿಂದ ಈಕೆಯೂ ತಾಯಿಯೊಂದಿಗೆ ಅಜ್ಜ ಇದಿನಬ್ಬರ ಮನೆಯಲ್ಲಿ ಇರುತ್ತಿದ್ದಳು. ಉಳ್ಳಾಲದಿಂದಲೇ ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಡಿಪ್ಲೋಮಾ ಕೋರ್ಸ್ ಮಾಡಿದ್ದಳು.
2015ರಲ್ಲಿ ಕೇರಳ ಕೋಯಿಕ್ಕೋಡ್‍ನ ಪೀಸ್ ಅಂತಾರಾಷ್ಟ್ರೀಯ ಶಾಲೆಯ ಆಡಳಿತಾಧಿಕಾರಿ ಸಿಯಾಜ್ ಎಂಬಾತನೊಂದಿಗೆ ವಿವಾಹ ನಡೆದಿತ್ತು. ಸಿಯಾಜ್ ಎಂಬಿಎ ಪಾಸು ಮಾಡಿದ್ದ. ಬಳಿಕ ಆಕೆ ಪತಿಯೊಂದಿಗೆ ಶ್ರೀಲಂಕಾಕ್ಕೆ ತೆರಳಿದ್ದಳು. ಈ ದಂಪತಿಯ ಜೊತೆಗೆ ಪತಿ ಸಿಯಾಜ್‍ನ ಸಹೋದರ, ಆತನ ಪತ್ನಿ ಹಾಗೂ ಮಗು ಮತ್ತು ಸಂಬಂಧಿಕನೊಬ್ಬ ಸೇರಿದಂತೆ ಒಂದೇ ಕುಟುಂಬದ 6 ಮಂದಿ ತೆರಳಿದ್ದರು. ಈ ತಂಡ ಶ್ರೀಲಂಕಾದಿಂದ ಮಸ್ಕತ್ ಮತ್ತು ಕತಾರ್‌ಗೆ ಹೋಗಿದೆ. ಆ ಬಳಿಕ ಇವರು ಯಾರ ಸಂಪರ್ಕಕ್ಕೂ ಸಿಗಲಿಲ್ಲ.
ಆದರೆ ಕೇರಳದಿಂದ 16 ಮಂದಿ ನಾಪತ್ತೆಯಾಗಿ ಐಸಿಸ್ ಸೇರ್ಪಡೆಯಾದವರ ಬಗ್ಗೆ ಬಹಿರಂಗವಾದ ಮಾಹಿತಿಯಲ್ಲಿ ಆಕೆಯ ಕುಟುಂಬವಿತ್ತು ಎಂಬುದಾಗಿ ತಿಳಿದುಬಂದಿದೆ. ಇದಾದ ಕೆಲವೇ ದಿನಗಳ ಬಳಿಕ ಅಬ್ದುಲ್ ಸಲಾಂ ಎಂಬಾತ ಸಾಮಾಜಿಕ ಜಾಲತಾಣದಲ್ಲಿ “ಇಸ್ಲಾಂನ ಸ್ವರ್ಗದಲ್ಲಿ ಸುಖವಾಗಿದ್ದೇವೆ ಎಂದು ಆತನ ಮನೆಯವರಿಗೆ ಸಂದೇಶ ಕಳುಹಿಸಿದ್ದ. ಈ ಸಂದೇಶ ಅಫ್ಘಾನಿಸ್ಥಾನ ಮತ್ತು ಸಿರಿಯಾದ ಗಡಿ ಪ್ರದೇಶ ತಾರಾಬೋಧಾ ಎಂಬಲ್ಲಿಂದ ರವಾನೆಯಾಗಿರುವುದಾಗಿ ಗೊತ್ತಾಗಿದೆ. ಇದರ ಜಾಡು ಹಿಡಿದು ತನಿಖೆ ನಡೆಸಿದ ಗುಪ್ತಚರ ಇಲಾಖೆ ಈ ಮಹಿಳೆಯ ಕುಟುಂಬ ಕೂಡ ಸಿರಿಯಾದಲ್ಲಿ ಇರುವ ಶಂಕೆ ವ್ಯಕ್ತಪಡಿಸಿದೆ.
ಕೇರಳದಿಂದ ನಾಪತ್ತೆಯಾಗಿ ಐಸಿಸ್ ಪಾಳಯ ಸೇರಿದ 16 ಮಂದಿಯಲ್ಲಿ ಅಜ್ಮಲ್‍ನ ಕುಟುಂಬ ಇತ್ತು ಎಂಬ ಗುಪ್ತಚರ ವರದಿಯ ನಂತರವೇ ಉಳ್ಳಾಲದ ಮನೆ ಮಂದಿಗೆ ಇವರು ನಾಪತ್ತೆಯಾಗಿರುವ ವಿಚಾರ ಗೊತ್ತಾಗಿದೆ. ಆ ಬಳಿಕ ಅಜ್ಮಲ್ ಕುಟುಂಬವನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿವೆ.
ಉಳ್ಳಾಲ ಮೂಲದ ಅಜ್ಮಲ್ ಐಸಿಸ್ ಶಿಬಿರ ಸೇರಿದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೇರಳ ಹಾಗೂ ಕರ್ನಾಟಕದ ಗುಪ್ತಚರ ಅಧಿಕಾರಿಗಳು ಉಳ್ಳಾಲದಲ್ಲಿ ಇದಿನಬ್ಬರ ಮನೆಗೆ ಭೇಟಿ ನೀಡಿ ತನಿಖೆ ನಡೆಸಿವೆ. ಕೇರಳದ ಆಂತರಿಕ ಭದ್ರತಾ ಪೊಲೀಸರು ಬಂದು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.ಕರ್ನಾಟಕದ ಗುಪ್ತಚರ ಇಲಾಖೆ ಹಾಗೂ ಅಪರಾಧ ಪತ್ತೆ ವಿಭಾಗದ ಪೊಲೀಸರು ಕೂಡ ಇದಿನಬ್ಬ ಮನೆಗೆ ಭೇಟಿ ನೀಡಿದ್ದಾರೆ. ಆಕೆಯೊಂದಿಗೆ ಒಂದು ವರ್ಷದಿಂದ ಯಾವುದೇ ಸಂಪರ್ಕ ಇಲ್ಲದಿರುವುದರಿಂದ ಹೆಚ್ಚಿನ ಮಾಹಿತಿ ಏನೂ ಗೊತ್ತಿಲ್ಲ ಎಂದು ಉಳ್ಳಾಲದ ಮನೆಯವರು ಪೊಲೀಸರಲ್ಲಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.ಇದೇ ಸಂದರ್ಭದಲ್ಲಿ ಕೇರಳದ ಆಂತರಿಕ ಭದ್ರತೆಯ ಪೊಲೀಸರೂ ಮಂಗಳೂರಿಗೆ ಬಂದು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
Comments are closed.