ಮಂಗಳೂರು, ಜು. 26 : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣ , ಡಿ.ಕೆ .ರವಿ, ಸಬ್ ಇನ್ಸ್ಪೆಕ್ಟರ್ ರೂಪಾ ಪ್ರಕರಣ ಸೇರಿದಂತೆ ಹಲವು ಪ್ರರಕಣಗಳಲ್ಲಿ ನೀವು ಎಡವಿದ್ದೀರಿ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ,ನಿಮ್ಮ ಹಠಮಾರಿ ಧೋರಣೆ ಬದಲಾಯಿಸಿಕೊಳ್ಳಿ.ಇನ್ನೂ ಕಾಲ ಮಿಂಚಿಲ್ಲ. ಹೈಕಮಾಂಡ್ ಏನು ಹೇಳುತ್ತದೆ ಎನ್ನುವದನ್ನು ಅರಿಯಲು ಕೂಡಲೇ ದಿಲ್ಲಿಗೆ ತೆರಳಿ’ ಇಲ್ಲದಿದ್ದರೆ ಶಾಸಕರ ಸಭೆ ಕರೆದು ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಕೇಂದ್ರ ಸಚಿವ ,ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಮಂಗಳವಾರ ಮತ್ತೆ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೂಡಲೇ ಹೈಕಮಾಂಡ್ ಜೊತೆ ಚರ್ಚೆ ನಡೆಸದಿದ್ದರೆ, ಹೈಕಮಾಂಡ್ ಕೂಡಲೇ ಶಾಸಕರ ಸಭೆ ಕರೆಯಲಿದೆ. ಕಾರ್ಮಿಕರ ಸಮಸ್ಯೆಯನ್ನು ಅತ್ಯಂತ ಚೆನ್ನಾಗಿ ಬಲ್ಲ ಆಸ್ಕರ್ ಫೆರ್ನಾಂಡಿಸ್‌ರನ್ನು ಹೈಕಮಾಂಡ್ ಸಿಎಂ ಮಾಡಬಹುದು. ಅಥವಾ ಮಲ್ಲಿಕಾರ್ಜುನ ಖರ್ಗೆಯವರೂ ಸಿಎಂ ಆಗಬಹುದು. ಮಹಿಳೆಯರಿಗೆ ಸ್ಥಾನ ನೀಡಲು ನಿರ್ಧರಿಸಿದರೆ ‘ಸ್ತ್ರೀಶಕ್ತಿ’ ಹೊಸ ರೂಪ ಕೊಟ್ಟ ಮೋಟಮ್ಮ ಮುಖ್ಯಮಂತ್ರಿ ಆಗಬಹುದು. ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ ಜಿ. ಪರಮೇಶ್ವರ್ ಅವರು ಕೂಡಾ ಮುಖ್ಯಮಂತ್ರಿ ಸ್ಥಾನ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹೆಚ್ಚಿನ ಸಂದರ್ಭಗಳಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪೂಜಾರಿ ಅವರು ಈ ಬಾರಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದುದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಕ್ಕೆ ವಿರುದ್ಧವಾಗಿ ಮಾತನಾಡುವವರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಅವರಿಗೆ ಮುಜುಗರ ಆಗಬಾರದು ಎಂದು ಇಲ್ಲಿ ಗೋಷ್ಠಿ ನಡೆಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿ ನಡೆಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಅನುಮತಿ ಬೇಡವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೂಜಾರಿ, ಪತ್ರಿಕಾಗೋಷ್ಠಿ ನಡೆಸಲು ಜಿಲ್ಲಾಧ್ಯಕ್ಷ ಅನುಮತಿ ಬೇಕೇ ಬೇಕು ಎಂದೇನೂ ಇಲ್ಲ. ಅವರಿಗೆ ಹೆದರಿ ನಾನು ಇಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿಲ್ಲ. ಈಗಿನ ಅಧ್ಯಕ್ಷರಿಗೆ ಏನೂ ಜ್ಞಾನ ಇಲ್ಲ ಎಂದು ಲೇವಡಿ ಮಾಡಿದರು. ಜೊತೆಗೆ ನಾನು ನಾನು ಪಕ್ಷದ ಹಿತಕ್ಕಾಗಿ ಆ ರೀತಿ ಮಾತನಾಡುತ್ತಿದ್ದೇನೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಹೇಳಿದರು.
ಸಾರಿಗೆ ಮುಷ್ಕರ : ಸಿದ್ದರಾಮಯ್ಯರ ಮೌನದಿಂದಾ ಸರ್ಕಾರದ ಇಮೇಜ್ ಹಾಳು
ವೇತನ ಹೆಚ್ಚಿಸಬೇಕೆಂದು ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಪೂಜಾರಿ ಅವರು ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲು ಆಗ್ರಹಿಸಿದರು. ಮಷ್ಕರ ಕೈಗೊಂಡಿರುವ ಕೆಎಸ್ ಆರ್ ಟಿ ಸಿ ನೌಕರರ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸುವಂತೆ ಪೂಜಾರಿ ಸಲಹೆ ನೀಡಿದರು.
ಸಿಎಂ ಸಿದ್ದರಾಮಯ್ಯ ತಮ್ಮ ಅಹಂಕಾರವನ್ನು ಪಕ್ಕಕ್ಕಿಟ್ಟು, ಯಾವಾಗಲು ಹೇಳುವ ಹಳೇಯ ಡೈಲಾಗ್ ಗಳನ್ನು ಬಿಟ್ಟು ನೌಕರರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಬಗೆ ಹರಿಸುವ ಯತ್ನ ನಡೆಸಬೇಕು ಎಂದು ಪೂಜಾರಿ ಸೂಚಿಸಿದರು. ರಾಜ್ಯದ ಜನತೆ ಅತೀವ ನಂಬಿಕೆ, ವಿಶ್ವಾಸಗಳನ್ನಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಸಿಎಂ ಜನತೆಯ ನಂಬಿಕೆಗಳನ್ನು ಹುಸಿಗೊಳಿಸಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಕೆಎಸ್‍ಆರ್‍ಟಿಸಿ ಬಸ್ ನೌಕರರ ಮುಷ್ಕರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿಲ್ಲ. ಸಾರಿಗೆ ನೌಕರರ ಮುಷ್ಕರ ರಾಜ್ಯಾದ್ಯಂತ ಎಲ್ಲಾ ವರ್ಗದ ಜನರನ್ನು ತಟ್ಟಿದೆ. ಈ ವಿಚಾರದಲ್ಲಿ ಮಾಧ್ಯಮಗಳು ನಮ್ಮ ಪಕ್ಷ ಹಾಗೂ ಸರ್ಕಾರವನ್ನು ಸಾಕಷ್ಟು ಟೀಕಿಸಿವೆ. ಆದರೆ ಅನುಭವಿ ರಾಜಕಾರಣಿಯೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೌನದಿಂದಾಗಿ ಸರ್ಕಾರದ ಇಮೇಜ್ ಹಾಳಾಗುತ್ತಿದೆ. ಅವರು ತಾವೇ ಬುದ್ಧಿವಂತರೆಂದು ಭಾವಿಸಿಕೊಂಡಂತಿದೆ ಎಂದು ಸಿಎಂ ವಿರುದ್ಧ ಪೂಜಾರಿ ಗುಡುಗಿದ್ದಾರೆ. ಕಾರ್ಮಿಕರ ಮುಷ್ಕರದ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ತಮ್ಮಿಷ್ಟ ಬಂದಂತೆ ವರ್ತಿಸಿದ್ದಾರೆ. ಅವರ ಇಂತಹ ವರ್ತನೆಯಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವ್ಯೆಲ್ಲೋ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.
Comments are closed.