ಮಂಗಳೂರು, ಜು.24; ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘ ನಿಗಮದ ನೌಕರರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ಕರೆಕೊಟ್ಟಿರುವ ಮುಷ್ಕರಕ್ಕೆ ಖಾಸಗಿ ಬಸ್‌ಗಳ ಪ್ರಾಬಲ್ಯವಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಎಸ್ಸಾರ್ಟಿಸಿ ನೌಕರರು ಇಂದು ಮಧ್ಯರಾತ್ರಿಯಿಂದಲೇ ಮುಷ್ಕರವನ್ನು ಆರಂಭಿಸಲು ನಿರ್ಧಸಿದ್ದಾರೆ.
ರವಿರಾತ್ರಿ 12 ಗಂಟೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಬಸ್‌ಗಳು ಸಂಚರಿಸುವುದಿಲ್ಲ. ಎಲ್ಲಾ ಕಾರ್ಮಿಕರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಮುಷ್ಕರದಿಂದ ಸಾರ್ವಜನಿಕರಿಗೆ ಆಗುವ ಸಮಸ್ಯೆಯಾಗುವ ಸಂಭವವಿದೆ.
ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್(ಎಐಟಿಯುಸಿ), ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ(ಐಎನ್‌ಟಿಯುಸಿ), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಮತ್ತು ಕರಾರಸಾಸಂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದು ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದೆ.
ದ.ಕ ಜಿಲ್ಲೆಯಲ್ಲಿ ಮಂಗಳೂರು ವಿಭಾಗದಲ್ಲಿ 500 ಬಸ್‌ಗಳಿದ್ದು 2,500 ಕಾರ್ಮಿಕರಿದ್ದಾರೆ. ಪುತ್ತೂರು ವಿಭಾಗದಲ್ಲಿ 550 ಬಸ್‌ಗಳಿದ್ದು 5,500 ಕಾರ್ಮಿಕರಿದ್ದಾರೆ. ಇವರೆಲ್ಲರೂ ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸೋಮವಾರದಿಂದ ಕೆಎಸ್ಸಾರ್ಟಿಸಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ನಿಗಮಗಳ ನೌಕರರ ಸಂಘದ ಬೇಡಿಕೆಗಳು :
ಮೂಲವೇತನದಲ್ಲಿ ಶೇ.35ರಷ್ಟು ಹೆಚ್ಚಿಸಬೇಕು, ವೈಟೇಜ್ ಫಾರ್ ಸರ್ವೀಸ್ ಬೇಡಿಕೆಯಲ್ಲಿದ್ದಂತೆ ಕೊಡಬೇಕು. ಎಲ್ಲಾ ಬಾಟ ಹಾಗೂ ಭತ್ಯೆಯನ್ನು ಬೇಡಿಕೆಯಲ್ಲಿದ್ದಂತೆ ಹೆಚ್ಚಿಸಬೇಕು, ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು, ಎನ್‌ಐಎನ್‌ಸಿ ಪ್ರಕರಣಗಳಲ್ಲಿ ನಿರ್ವಾಹಕರ ಮೇಲೆ ಯಾವುದೆ ಕ್ರಮ ತೆಗೆದುಕೊಳ್ಳಬಾರದು, ನಿರ್ವಾಹಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಬೇಕು, ಚಾಲಕರನ್ನು ಅಪಘಾತ ಪ್ರಕರಣಗಳಲ್ಲಿ ಹೊಣೆಯನ್ನಾಗಿ ಮಾಡಬಾರದು, ಫಾರಂ 4ನ್ನು ಕಾನೂನಿನಂತೆ ಪುನರ್‌ರೂಪಿಸಬೇಕು, ಚಾಲಕ ನಿರ್ವಾಹಕರಿಗೆ ರನ್ನಿಂಗ್ ಟೈಮ್‌ನಂತೆ ವೇತನವನ್ನು, ಒಟಿಯನ್ನು ಕೊಡಬೇಕು, ಚಾಲಕ ಕಂ ನಿರ್ವಾಹಕರಿಗೆ ಅವರು ಇಚ್ಛೆಪಡುವ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ಇನ್ನು ಮುಂದೆ ಚಾಲಕ ಕಂ ನಿರ್ವಾಹಕ ಹುದ್ದೆ ರದ್ದು ಮಾಡಬೇಕು, ಚಾಲಕರು,ನಿರ್ವಾಹಕರು, ಯಾಂತ್ರಿಕ ಸಿಬ್ಬಂದಿಯ ವೇತನದಲ್ಲಿ ಅಕ್ರಮ ಕಡಿತ ಪೂರ್ಣವಾಗಿ ರದ್ದು ಮಾಡಬೇಕು, ಮಹಿಳೆಯರಿಗೆ ಎಲ್ಲಾ ಕಡೆ ವಿಶ್ರಾಂತಿ ಗೃಹ ಮತ್ತು ಕ್ರೀಚ್ ನಿರ್ಮಿಸುವುದು ಮತ್ತು ಮಹಿಳೆಯರಿಗೆ ಕಾರ್ಯಸ್ಥಾನದಲ್ಲಿ ಕಿರುಕುಳ ತಪ್ಪಬೇಕು, ಟ್ರೈನಿ ಪದ್ದತಿಯನ್ನು ರದ್ದು ಮಾಡಬೇಕು, ತರಬೇತಿದಾರರನ್ನು ಕೆಲಸಕ್ಕೆ ಸೇರಿದ ದಿನದಿಂದ ಖಾಯಂಗೊಳಿಸಬೇಕು, ಅಮಾನತ್ತಿನಲ್ಲಿಡುವ ಪದ್ದತಿಯನ್ನು ರದ್ದು ಮಾಡಬೇಕು, ಆಪೇಕ್ಷೆಪಟ್ಟ ನೌಕರರಿಗೆ ಒಂದು ನಿಗಮದಿಂದ ಇನ್ನೊಂದು ನಿಗಮಕ್ಕೆ ವರ್ಗಾವಣೆಗೆ ಅವಕಾಶ ನೀಡಬೇಕು, ಎಲ್ಲಾ ಸಾರಿಗೆ ನೌಕರರಿಗೆ, ಅವಲಂಬಿತ ತಂದೆ, ತಾಯಿಗಳನ್ನೊಳಗೊಂಡ ಪೂರ್ಣ ಮೆಡಿಕಲ್ ರಿಯಂಬರ್ಸ್‌ಮೆಂಟ್ ಮಾಡಬೇಕು ಸೇರಿದಂತೆ 44 ಬೇಡಿಕೆಗಳನ್ನಿಟ್ಟುಕೊಂಡು ಮುಷ್ಕರವನ್ನು ರಾಜ್ಯಾದ್ಯಾಂತ ನಡೆಸಲು ನಿರ್ಧರಿಸಲಾಗಿದೆ.
ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ಬಿಜೆಪಿ ಹಾಗೂ ಎಐಟಿಯುಸಿ ಬೆಂಬಲ :
ಮಂಗಳೂರು, ಜು.24- ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರ ವೇತನ ಯಾವುದೇ ಉಳಿದ ಸರಕಾರಿ ಕ್ಷೇತ್ರದ ಸಂಸ್ಥೆಗಳಿಂತ ಅತ್ಯಂತ ಕಡಿಮೆಯಾಗಿದೆ. ಅದರೊಂದಿಗೆ ಈ ನಿಗಮಗಳಲ್ಲಿ ಕಾರ್ಮಿಕರ ಮೇಲಿನ ದೌರ್ಜನ್ಯ ಅತ್ಯಧಿಕವಾಗಿದೆ. ಕಾರ್ಮಿಕರನ್ನು ಜೀತದಾಳುಗಳಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಎಐಟಿಯುಸಿ ಆರೋಪಿಸಿದ್ದು, ಹಾಗಾಗಿ ಜುಲೈ 25ರಿಂದ ನಡೆಯುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ.
ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕರ್ನಾಟಕ ಸರಕಾರ ಕೇವಲ ೮% ವೇತನ ವೃದ್ಧಿ ಘೋಷಿಸಿರುವುದು ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಕೇಂದ್ರ ಸರಕಾರಿ ನೌಕರರ ವೇತನ ೨೩.೫೫% ನಷ್ಟು ಏರಿಸಲಾಗಿದೆ. ರಾಜ್ಯ ಸರಕಾರಿ ನೌಕರರ ವೇತನ ಅದೇ ಪ್ರಮಾಣದಲ್ಲಿ ಏರುವ ಸಾಧ್ಯತೆಗಳು ಕಂಡುಬರುತ್ತಿದೆ. ಆದರೆ ರಾಜ್ಯ ಸಾರಿಗೆ ನೌಕರರ ವೇತನ ಕೇವಲ 8 ಶೇ. ಏರಿಸಿರುವುದು ವಿಷಾದಕರ ಸಂಗತಿ.
ಇವೆಲ್ಲವನ್ನೂ ಪ್ರತಿಭಟಿಸಿ ಸಾರಿಗೆ ಕಾರ್ಮಿಕರ ಜಂಟಿ ಸಮಿತಿ 2016ರರ ಜುಲೈ 25ರಿಂದ ಅನಿಧಿಷ್ಟಾವಧಿ ಮುಷ್ಕರ ಘೋಷಿಸಿದೆ. ಕಾರ್ಮಿಕರ ಬೇಡಿಕೆಗಳು ನೈಜ ಬೇಡಿಕೆಗಳಾಗಿದ್ದು ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಜಂಟಿ ಸಮಿತಿ ಜೊತೆ ಚರ್ಚಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಐಟಿಯುಸಿ ದಕ ಮತ್ತು ಉಡುಪಿ ಜಿಲ್ಲಾ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ ಹಾಗೂ ಈ ಮುಷ್ಕರಕ್ಕೆ ತನ್ನ ಪೂರ್ಣ ಬೆಂಬಲ ನೀಡುತ್ತದೆ ಎಂದು ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಯಚ್ ವಿ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರಕ್ಕೆ ಬಿಜೆಪಿ ಬೆಂಬಲ
ಸೋಮವಾರ (ನಾಳೆ) ನಡೆಯುವ ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರಕ್ಕೆ ಬಿಜೆಪಿ ಬೆಂಬಲ ವ್ಯಕ್ತಪಡಿಸುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಬೇಡಿಕೆಯನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯು ಆಗ್ರಹಿಸುತ್ತದೆ.
ಸಾರಿಗೆ ಇಲಾಖೆ ನೌಕರರ ಸಂಘಟನೆಗಳು ಶೇಕಡಾ 30ರಷ್ಟು ವೇತನ ಹೆಚ್ಚಿಸುವ ಬೇಡಿಕೆ , ಅಂತರ ನಿಗಮ ವರ್ಗಾವಣೆ, ವೈದ್ಯಕೀಯ ವೆಚ್ಚ, ಸಮವಸ್ತ್ರ ಭತ್ಯೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಂಜೀವ ಮಠಂದೂರು ಕರ್ನಾಟಕ ರಾಜ್ಯ ಸರಕಾರವನ್ನು ಆಗ್ರಹಿಸಿರುವುದಾಗಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.