
ಬೆಂಗಳೂರು: ಕಬಾಲಿ… ಕಬಾಲಿ… ಕಬಾಲಿ… ಎಲ್ಲೆಲ್ಲೂ ಕಬಾಲಿಯದೇ ಹವಾ. ಸೂಪರ್ ಸ್ಟಾರ್, ಗ್ಲೋಬಲ್ ಸ್ಟಾರ್, ಕನ್ನಡಿಗ ರಜನಿಕಾಂತ್ ಅವರ 159ನೇ ಚಿತ್ರ ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಶೇ.100ರಷ್ಟು ಅಂಕ ಪಡೆದಿದೆ.
ಸ್ಟೈಲ್ ಕಿಂಗ್ ರಜನಿಕಾಂತ್ ಅವರ ಡೈಲಾಗ್ಗಳು ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವಂತೆ ಮಾಡಿದೆ. ತಮಿಳು, ತೆಲುಗು, ಹಿಂದಿ ಮೂರು ಭಾಷೆಗಳಲ್ಲಿ ಇಂಡಿಯಾದಲ್ಲಿ ಬಿಡುಗಡೆಯಾಗಿದೆ. ಅಮೆರಿಕ, ಮಲೇಷ್ಯಾ, ಜಪಾನ್, ತೈವಾನ್, ಇಂಡೋನೇಷ್ಯಗಳಲ್ಲೂ ಈ ಚಿತ್ರದ ಅಬ್ಬರ ಜೋರಾಗಿದೆ. ಈ ಹಿಂದೆ ಇದ್ದ ಬಾಹುಬಲಿಯ ದಾಖಲೆಯನ್ನು ಮುರಿದಿದ್ದು , ಚಿತ್ರ ಬಿಡುಗಡೆಗೂ ಮುನ್ನವೇ ಎರಡು ನೂರು ಕೋಟಿ ರೂ.ಗಳ ಕಲೆಕ್ಷನ್ ಗಳಿಸಿದೆ.
ಕಳೆದ ಒಂದು ವಾರದಿಂದ ಟೀಸರ್ ಬಿಡುಗಡೆಯಾದಾಗಿನಿಂದ ರಜನಿ ಚಿತ್ರದ ಕಬಾಲಿ ಅಬ್ಬರ ಜೋರಾಗಿತ್ತು. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲೆಲ್ಲೂ ಕಬಾಲಿಯದೇ ಮಾತು.
ಇಂದು ಬಿಡುಗಡೆಯಾದ ಕಬಾಲಿ ಚಿತ್ರ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳಲ್ಲಿ ನೂಕುನುಗ್ಗಲು, ಇದನ್ನು ತಡೆಯಲು ಪೊಲೀಸರು ಹರಸಾಹಸಪಟ್ಟು, ಅಲ್ಲಲ್ಲಿ ಲಾಠಿ ರುಚಿ ತೋರಿಸಬೇಕಾಯಿತು.
ವಿವೇಕನಗರದ ಬಾಲಾಜಿ ಥಿಯೇಟರ್ನಲ್ಲಿ ಸೂಪರ್ ಸ್ಟಾರ್ ಅಭಿನಯದ ಮೊದಲ ಶೋಗೆ ಶಾಸಕ ಎನ್.ಎ.ಹ್ಯಾರೀಸ್ರಿಂದ ಚಾಲನೆ ದೊರೆಯಿತು. ಸಾಮಾನ್ಯವಾಗಿ ಪ್ರತಿದಿನ ನಾಲ್ಕು ಶೋಗಳು ನಡೆಯುತ್ತವೆ. ಆದರೆ ಅಭಿಮಾನಿಗಳ ಒತ್ತಡದಿಂದ ಬೆಳಗಿನ ಜಾವ 4.30 ಒಂದು ಶೋವನ್ನು ಪ್ರತ್ಯೇಕವಾಗಿ ಎಲ್ಲ ಚಿತ್ರಮಂದಿರಗಳಲ್ಲೂ ನಡೆಸಲಾಯಿತು. ನಿನ್ನೆ ರಾತ್ರಿ 1 ಗಂಟೆಯಿಂದಲೇ ರಜನಿ ಅಭಿಮಾನಿಗಳು ಚಿತ್ರಮಂದಿರಗಳ ಬಳಿ ಜಮಾಹಿಸಿದ್ದರು. 4.30ಕ್ಕೆ ಚಿತ್ರ ಪ್ರಾರಂಭವಾಗುತ್ತಿದ್ದಂತೆ ರಜನಿಯನ್ನು ತೆರೆ ಮೇಲೆ ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಎಲ್ಲ ಚಿತ್ರಮಂದಿರಗಳ ಸುತ್ತ ರಜನಿಯದೇ ಫ್ಲೆಕ್ಸ್ , ಬಂಟಿಂಗ್ಸ್, ಬ್ಯಾನರ್ಗಳು, ಎತ್ತರೆತ್ತರದ ಕಟೌಟ್ಗಳು, ಫ್ಲೆಕ್ಸ್ಗಳಿಗೆ ಹಾಲಿನ ಅಭಿಷೇಕ ಮಾಡುತ್ತಿದ್ದರು.
ಈ ಚಿತ್ರದಲ್ಲಿ ರಜನಿ ಡಾನ್ ಆಗಿ ಮಿಂಚಿದ್ದಾರೆ. 60ರ ವಯೋಮಾನದಲ್ಲಿ ಗ್ಯಾಂಗ್ಸ್ಟಾರ್ ಪಾತ್ರದಲ್ಲಿ ರಜನಿಯ ಅಭಿನಯ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತ್ತು. ಮಲೇಷ್ಯಾದಲ್ಲಿ ತಮಿಳರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವುದರ ವಿರುದ್ಧ ಹೋರಾಟ ಮಾಡಿ ಡಾನ್ ಆಗಿ ಅವರಿಗೆ ನ್ಯಾಯ ಒದಗಿಸಿಕೊಡುವ ಸುತ್ತ ಎಣೆದಿರುವ ಒಂದು ಕಥೆ. ಕಥೆಯ ಪಾತ್ರಧಾರಿಗಳು ಕೂಡ ಬಹುತೇಕ ಹೊಸಬರಿದ್ದಾರೆ. ಸಾಮಾನ್ಯವಾಗಿ ಸೂಪರ್ ಸ್ಟಾರ್ ರಜನಿ ಚಿತ್ರವೆಂದರೆ ದೊಡ್ಡ ದೊಡ್ಡ ನಿರ್ದೇಶಕರು, ಸಂಗೀತ ನಿರ್ದೇಶಕರು ಇರುತ್ತಿದ್ದರು. ಆದರೆ ಈ ಚಿತ್ರದಲ್ಲಿ ಆ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ಕೇವಲ ಮೂರು ಚಿತ್ರಗಳನ್ನು ನಿರ್ಮಿಸಿದ ರಂಜಿತ್ ನಿರ್ದೇಶಕರಾಗಿ ಯಶಸ್ವಿಯಾಗಿದ್ದಾರೆ. ಕಳನಾಯಕನ ಪಾತ್ರದಲ್ಲಿ ಕನ್ನಡದ ಕಿಶೋರ್ನ ಅಭಿನಯ ಸೂಪರ್ ಆಗಿದೆ.
ಬಳ್ಳಾರಿಯಲ್ಲಿ ಬಹುನಿರೀಕ್ಷಿತ ಕಬಾಲಿ ಚಿತ್ರಕ್ಕೆ ಮಳೆ ಅಡ್ಡಿಯಾಗಿತ್ತು. ಆದರೂ ಮಳೆಯನ್ನು ಲೆಕ್ಕಿಸದೆ ಅಭಿಮಾನಿಗಳು ಚಿತ್ರಮಂದಿರಕ್ಕೆ ಧಾವಿಸುತ್ತಿದ್ದರು. ಶಿವಮೊಗ್ಗದಲ್ಲಿ ಕಬಾಲಿ ಹವಾ ಜೋರಾಗಿತ್ತು. ಬೆಳ್ಳಗೆ 7 ಗಂಟೆಗೆ ಶುರುವಾದ ಕಬಾಲಿ ಶೋ ಮುಗಿದ ಮೇಲೆ ನೆಚ್ಚಿನ ನಟ ರಜನಿಗೆ ಹಾಲಿನ ಅಭಿಷೇಕ ಮಾಡಿದರು. ಶಿವಮೊಗ್ಗದ ಮಲ್ಲಿಕಾರ್ಜುನ ಹಾಗೂ ಮಂಜುನಾಥ ಚಿತ್ರಮಂದಿರಗಳಲ್ಲಿ ರಜನಿ ಅಭಿಮಾನಿಗಳ ನಡುವೆ ನೂಕುನುಗ್ಗಲುಂಟಾಗಿ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಯಿತು. ಕೋಲಾರ, ಕೆಜಿಎಫ್ ಮುಂತಾದ ಕಡೆ ರಜನಿ ಕಟೌಟ್ಗೆ ಬೃಹತ್ ಹಾರ ಹಾಕಿ ಅಭಿಮಾನಿಗಳು ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಸಾಂಸ್ಕøತಿಕ ನಗರಿ ಮೈಸೂರಿನಲ್ಲೂ ಕಬಾಲಿಯದೇ ಹವಾ. ಕಬಾಲಿ ಚಿತ್ರ ವೀಕ್ಷಿಸಿ ಹೊರಬಂದ ಪ್ರೇಕ್ಷಕರ ಬಾಯಲ್ಲಿ ಸೂಪರ್ ಎಂಬ ಪದ ಕೇಳಿಬರುತ್ತಿತ್ತು. ಕೆಲವು ಹುಚ್ಚು ಅಭಿಮಾನಿಗಳು ಕಬಾಲಿ ವೇಷಧಾರಿಯಾಗಿದ್ದರು. ಬೆಂಗಳೂರಿನ ಇನ್ನು ಕೆಲವೆಡೆ ರಜನಿ ಜೇಡಿಮಣ್ಣಿನ ಪ್ರತಿಮೆಯನ್ನು ಕೂಡ ಅನಾವರಣಗೊಳಿಸಿದ್ದರು.
Comments are closed.