
ಮಂಗಳೂರು,ಜು.20: ನಗರದಲ್ಲಿ ಸುಮಾರು 300ಕ್ಕೂ ಅಧಿಕ ಬಸ್ಸುಗಳು ಸಂಚರಿಸುತ್ತವೆ. ಆದರೆ ಸೂಕ್ತ ಬಸ್ಸು ನಿಲ್ದಾಣಗಳೇ ಇಲ್ಲ. ರಸ್ತೆಗಳಲ್ಲಿಯೇ ಬಸ್ಸುಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ನಗರದಲ್ಲಿ 19 ಸ್ಥಳಗಳಲ್ಲಿ ಬಸ್ಸು ನಿಲ್ದಾಣಗಳಿಗೆ ಜಾಗ ಗುರುತಿಸಿ ಸರ್ವೆ ನಡೆದು ಮೂರು ವರ್ಷಗಳೇ ಕಳೆದಿವೆ. ಆದರೆ ಬಸ್ಸು ನಿಲ್ದಾಣವಾಗಿಲ್ಲ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂದು ಬಸ್ಸು ಮಾಲಕರ ಪ್ರತಿನಿಧಿಗಳು ಆಕ್ಷೇಪಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಬಗ್ಗೆ ಅಧಿಕಾರಿಗಳು ಮತ್ತು ಬಸ್ಸು ಮಾಲಕರು ಹಾಗೂ ಸಾರ್ವಜನಿಕ ಪ್ರತಿನಿಧಿಗಳ ಸಭೆಯಲ್ಲಿ ಬಸ್ಸು ಮಾಲಕರ ಪ್ರತಿನಿಧಿಗಳಿಂದ ಈ ಅಭಿಪ್ರಾಯ ಕೇಳಿ ಬಂದಿದೆ.
ಅಧಿಕಾರಿಗಳು, ಬಸ್ಸು ಮಾಲಕರು ಹಾಗೂ ಸಾರ್ವಜನಿಕ ಪ್ರತಿನಿಧಿಗಳಿಂದ ವ್ಯಕ್ತವಾದ ಆಗ್ರಹದ ಹಿನ್ನೆಲೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ಮಾತನಾಡಿ, ನಗರದ ಪಿವಿಎಸ್, ಬಂಟ್ಸ್ ಹಾಸ್ಟೆಲ್, ಕರಾವಳಿ ವೃತ್ತ ಸೇರಿದಂತೆ ಹಲವಾರು ಜಂಕ್ಷನ್ ಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಜಂಕ್ಷನ್ ಗಳಲ್ಲಿಯೇ ಇರುವ ಬಸ್ಸು ನಿಲ್ದಾಣಗಳನ್ನು ಹಂತ ಹಂತವಾಗಿ ಆ ಸ್ಥಳದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರಿಸುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ನಗರದ ಫಳ್ನೀರ್ ರಸ್ತೆ, ಶಾರದಾ ಕಾಲೇಜು ರಸ್ತೆ, ಮಂಗಳೂರು ವಿವಿ ಕಾಲೇಜು ಎದುರಿನ ರಸ್ತೆ ಸೇರಿದಂತೆ ಹಲವಾರು ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ವಾಹನಗಳನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಂಬಂಧಪಟ್ಟ ಕಟ್ಟಡಗಳಿಗೆ ಸೇರಿದ ವಾಹನಗಳ ಪಾರ್ಕಿಂಗ್ ಗೆ ಆ ಕಟ್ಟಡದ ಪಾರ್ಕಿಂಗ್ ಜಾಗದಲ್ಲಿಯೇ ಅವಕಾಶ ನೀಡಬೇಕು. ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಟ್ಟಡಗಳ ಪರವಾನಿಗೆ ರದ್ದು ಮಾಡಬೇಕು ಎಂಬ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.
ಈ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಯವರು ಸಂಚಾರಿ ಪೊಲೀಸರು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಹೋಂ ಗಾರ್ಡ್ ಗಳನ್ನು ಟ್ರಾಫಿಕ್ ವಾರ್ಡನ್ ಗಳನ್ನು ನೇಮಕ ಮಾಡಿ ನಗರದಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ನಗರದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆ, ಪುರಭವನದ ಎದುರಿನ ರಸ್ತೆ ಸೇರಿದಂತೆ ನಗರದ ವಾಹನ ದಟ್ಟನೆ ಅಧಿಕವಿರುವ ರಸ್ತೆಗಳಲ್ಲಿ ಏಕ ಮುಖ ಸಂಚಾರಕ್ಕೆ, ಬದಲಿ ಸಂಚಾರ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಡೆಸುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಭ್ ರಾವ್ ಬೊರಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಸಂಚಾರಿ ವಿಭಾಗದ ಎಸಿಪಿ ತಿಲಕ್‌ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್.ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
Comments are closed.