ಕರಾವಳಿ

ಯಕ್ಷ ಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ಗೆ ದುಬೈ ಯು‌ಎ‌ಇ ಘಟಕದಿಂದ 30 ಲಕ್ಷ ರೂ. ದೇಣಿಗೆ ಹಸ್ತಾಂತರ

Pinterest LinkedIn Tumblr

Patla_Foundetion_UAE_1

ಮಂಗಳೂರು: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‌ನ ಆಶ್ರಯದಲ್ಲಿ ಜುಲೈ 18ರಂದು ಸಂಜೆ ನಗರದ ಗೋಲ್ಡ್‌ಪಿಂಚ್ ಹೊಟೇಲ್‌ನ ಸಭಾಂಗಣದಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮ ಜರಗಿದ್ದು ಪಟ್ಲ ಪೌಂಡೇಶನ್ ಟ್ರಸ್ಟ್‌ನ ಕಾರ್ಯ ಯೋಜನೆಯನ್ನು ಮೆಚ್ಚಿ ದುಬಾಯಿ ಯು‌ಎ‌ಇ ಘಟಕವು ದುಬಾಯಿಯಲ್ಲಿ ಸಂಗ್ರಹಿಸಿದ 30ಲಕ್ಷ ರೂ.ವಿಗೂ ಅಧಿಕ ಮೊತ್ತದ ಚೆಕ್‌ನ್ನು ದುಬಾಯಿ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್‌ನ ಮಾಲಕ ಪ್ರವೀಣ್ ಶೆಟ್ಟಿ ವಕ್ವಾಡಿ ಅವರು ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಜೂನ್ 5ರಂದು ದುಬಾಯಿಯಲ್ಲಿ ಪಟ್ಲ ಪೌಂಡೇಶನ್‌ನ ಘಟಕ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳಲ್ಲಿ ದುಬಾಯಿ ಘಟಕವು ಟ್ರಸ್ಟ್‌ನ ಕಾರ್ಯ ಯೋಜನೆಗಳನ್ನು ಮೆಚ್ಚಿ ಹಣ ಸಂಗ್ರಹಿಸಿ ಟ್ರಸ್ಟ್‌ಗೆ ನೀಡಿದ್ದೇವೆ ಎಂದು ವಕ್ವಾಡಿ ಪ್ರವೀಣ್ ಶೆಟ್ಟಿ ತಿಳಿಸಿದರು.

ದುಬಾಯಿಯಲ್ಲಿ ಯಕ್ಷಗಾನಕ್ಕೆ ಬಹುಬೇಡಿಕೆಯಿದೆ. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ನಡೆಯಬೇಕು. ಅಶಕ್ತರನ್ನು ಗುರುತಿಸಿ ಗೌರವಿಸುವುದರ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಆರೋಗ್ಯ ವಿಮಾ ಯೋಜನೆಯನ್ನು ಪಟ್ಲ ಪೌಂಡೇಶನ್ ಟ್ರಸ್ಟ್ ಜ್ಯಾರಿಗೊಳಿಸಿರುವುದು ಶ್ಲಾಘನೀಯ ಕೆಲಸ ಎಂದರು.

ದುಬಾಯಿಯಲ್ಲಿ ಉದ್ಯಮಿ ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರು ಸೇರಿಕೊಂಡು ಪಟ್ಲ ಪೌಂಡೇಶನ್‌ನ ಘಟಕವನ್ನು ರಚಿಸಿ ಆ ಮೂಲಕ ನಿಧಿ ಸಂಗ್ರಹಿಸಿದ್ದೇವೆ. ಒಳ್ಳೆಯ ಕಾರ್ಯಕ್ರಮಕ್ಕೆ ಜನರು ಉತ್ತಮ ಸ್ಪಂದನೆ ನೀಡುತ್ತಾರೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.ಟ್ರಸ್ಟ್‌ನ ಯೋಜನೆಗಳಿಗೆ ಎಲ್ಲರೂ ಕೈ ಜೋಡಿಸೋಣ. ಶೀಘ್ರದಲ್ಲೇ ತನ್ನ ತವರೂರು ಕುಂದಾಪುರದಲ್ಲೂ ಘಟಕ ರಚಿಸುವುದಾಗಿ ವಕ್ವಾಡಿ ಪ್ರವೀಣ್ ಶೆಟ್ಟಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿ ಅವರನ್ನು ಟ್ರಸ್ಟ್‌ನ ಸ್ಥಾಪಾಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶಾಲು ಹೊದಿಸಿ ಗೌರವಿಸಿದರು. ಕರ್ನೂರು ಮೋಹನ್ ರೈ ಅವರು ಪ್ರವೀಣ್ ಶೆಟ್ಟಿ ಅವರನ್ನು ಸಭೆಗೆ ಪರಿಚಯಿಸಿದರು.

Patla_Foundetion_UAE_2

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಲ ಸತೀಶ್ ಶೆಟ್ಟಿ ಅವರು ಆಶ್ರಯ ಯೋಜನೆಯಡಿಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ 5 ಎಕ್ರೆ ಜಾಗವನ್ನು ಗುರುತಿಸಿ 100 ಮನೆಗಳನ್ನು ನಿರ್ಮಿಸಿ ಮನೆ ಇಲ್ಲದ ಬಡ ಕಲಾವಿದರಿಗೆ ನೀಡುವ ಕಾರ್ಯಯೋಜನೆ ಪ್ರಗತಿಯಲ್ಲಿದೆ ಎಂದರು

ಮುಂದಿನ ದಿನಗಳಲ್ಲಿ ಅಮೇರಿಕಾದಲ್ಲೂ ಪಟ್ಲ ಪೌಂಡೇಶನ್‌ನ ಘಟಕ ರಚನೆಯಾಗಲಿದೆ. ಅಲ್ಲದೆ ಕರಾವಳಿ ಜಿಲ್ಲೆಯಾದ್ಯಂತ ಈ ಘಟಕಗಳು ಅಸ್ತಿತ್ವಕ್ಕೆ ಬಂದು ಬಡ ಕಲಾವಿದರ ಅಭ್ಯುದಯಕ್ಕಾಗಿ ಶ್ರಮಿಸಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಟ್ರಸ್ಟ್‌ನ ಮುಂದಿನ ಯೋಜನಾ ಪರಿಕಲ್ಪನೆಯಾದ ‘ಪಟ್ಲ ಯಕ್ಷಾಶ್ರಯ ಕಲಾಗ್ರಾಮ’ ಇದರ ಕಾಲ್ಪನಿಕ ಚಿತ್ರದ ನಕಾಶೆಯನ್ನು ಎಕ್ಕಾರ್ ಕಟೀಲು ಘಟಕದ ಅಧ್ಯಕ್ಷರಾದ ಗಿರೀಶ್ ಶೆಟ್ಟಿ ಕಟೀಲು ತಯಾರಿಸಿದ್ದು ಅದರ ಮಾದರಿಯನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು.

ಸಭೆಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಮನುರಾವ್, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ಕೋಶಾಧಿಕಾರಿ ಸಿ‌ಎ ಸುದೇಶ್ ಕುಮಾರ್, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.