ಮಂಗಳೂರು, ಜು.15: ಇಸ್ಲಾಂ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯ್ಕಾ ಅವರ ಬಗ್ಗೆ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ವೇದಿಕೆ ವತಿಯಿಂದ ಇಂದು ಅಪರಾಹ್ನ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಡಾ. ಝಾಕಿರ್ ನಾಯಕ್ ಪರ ಭಿತ್ತಿ ಪತ್ರ ಪ್ರದರ್ಶಿಸುತ್ತಾ, ನಾಯಕ್ ಪರ ಘೋಷಣೆಗಳನ್ನು ಕೂಗುತ್ತಾ ಮಾಧ್ಯಮದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಹಳಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಕಾರು ಝಾಕಿರ್ ನಾಯಕ್ ಪರ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಝಾಕಿರ್ ನಾಯಕ್ ಮಾನವ ಹಕ್ಕುಗಳ ಪರ, ಅಲ್ಪಸಂಖ್ಯಾತರ ಪರ ಮಾತನಾಡುವುದನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಇದರ ಮುಂದುವರಿದ ಭಾಗವಾಗಿ ಝಾಕಿರ್ ನಾಯಕ್ ಮೇಲಿನ ಆರೋಪ ಎಂದು ಪ್ರತಿಭಟನಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಥಾವುಲ್ಲಾ ಜೋಕಟ್ಟೆ, ಪುತ್ತೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಪಿಎಫ್‌ಐನ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಜಮಾ ಅತೇ ಇಸ್ಲಾಮೀ ಹಿಂದ್ನ ಮುಹಮ್ಮದ್ ಕುಂಞಿ, ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ನ ಇಸ್ಮಾಯೀಲ್ ಶಾಫಿ, ದ.ಕ. ಜಿಲ್ಲಾ ಸೆಂಟ್ರಲ್ ಕಮಿಟಿಯ ಹಮೀದ್ ಕಂದಕ್, ಜಮೀಯತುಲ್ ಫಲಾಹ್ನ ಹಾಜಿ ಅಬ್ದುಲ್ಲತೀಫ್, ಯುನಿವೆಫ್ ಕರ್ನಾಟಕದ ರಫೀವುದ್ದೀನ್ ಕುದ್ರೋಳಿ, ದ.ಕ. ಜಿಲ್ಲಾ ಎಸ್ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಕೆ. ಅಶ್ರಫ್, ಮುಸ್ಲಿಂ ಐಕ್ಯತಾ ವೇದಿಕೆಯ ಮುಸ್ತಫಾ ಕೆಂಪಿ, ಮಂಗಳೂರು ಸೆಂಟ್ರಲ್ ಕಮಿಟಿಯ ಅಝೀಝ್ ಕುದ್ರೋಳಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ರಫೀಕ್ ಮಾಸ್ಟರ್, ಮುಸ್ಲಿಂ ಲೇಖಕರ ಸಂಘದ ಉಮರ್ ಯು.ಎಚ್., ಹೋಪ್ ಫೌಂಡೇಶನ್ನ ಸೈಫ್ ಸುಲ್ತಾನ್ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಯ ನಾಯಕರು ಭಾಗಿಯಾದ್ದರು.
Comments are closed.