ಕರಾವಳಿ

ಭಾರೀ ಕುತೂಹಲ ಸೃಷ್ಟಿಸಿದ್ದ ವೇದಾವತಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು – ಆರೋಪಿ ಮೈದುನ ಬಂಧನ

Pinterest LinkedIn Tumblr

Vedhavati_murder_accused

ಸುಬ್ರಹ್ಮಣ್ಯ, ಜು.7: ಭಾರೀ ಕುತೂಹಲ ಸೃಷ್ಟಿಸಿದ್ದ ಮೆಟ್ಟಿನಡ್ಕ ನಿವಾಸಿ ವೇದಾವತಿ (45) ಎಂಬವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೇದಾವತಿ ಅವರನ್ನು ಕೊಲೆ ನಡೆಸಿದ ಆರೋಪಿ ಆಕೆಯ ಮೈದುನ ಕರುಣಾಕರ (53 ) ಎಂಬವರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ ಒಡವೆ ವಿಚಾರಕ್ಕೆ ಸಂಬಂಧಿಸಿ ಕೊಲೆ ನಡೆಸಿರುವುದಾಗಿ ಆರೋಪಿ ಒಪ್ಪಿಕೊಂಡ ಬಗ್ಗೆ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂದಿಸಿ ಸ್ಪಷ್ಟ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದು ಈ ಬಗ್ಗೆ ಮಾಧ್ಯಮಗಳಿಗೆ ಸ್ವತ: ಪೊಲೀಸ್ ವರಿಷ್ಠಾಧಿಕಾರಿಗಳೇ ಮಾಹಿತಿ ನೀಡುವರು ಎಂದು ಪೊಲೀಸರು ತಿಳಿಸಿದ್ದಾರೆ.

ವೇದಾವತಿ ಕೊಲೆ ಘಟನೆ ನಡೆದ ಬಳಿಕ ಪ್ರಕರಣದ ತನಿಖೆ ನಡೆಸುತಿದ್ದ ಪೊಲೀಸರು ಹಲವರನ್ನು ತನಿಖೆಗೆ ಒಳಪಡಿಸಿದ್ದರು. ಹಲವು ಮಂದಿಯನ್ನು ತನಿಖೆಗೆ ಒಳಪಡಿಸಿದ ಬಳಿಕ ಪೊಲೀಸರು ಮೃತರ ಸಂಬಂಧಿ ಕರುಣಾಕರರ ಮೇಲೆ ಸಂಶಯಪಟ್ಟಿದ್ದರು. ಅವರ ಚಲನವಲನ ಬಗ್ಗೆ ಸಂಶಯಿತಗೊಂಡ ಪೊಲೀಸರು ಅವರ ಮೇಲೆ ನಿಗಾವಹಿಸಿದ್ದರು.ಆರಂಭದಲ್ಲಿ ಅವರಿಂದ ಕೊಲೆಗೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ.

ಈ ನಡುವೆ ಮೃತರ ಮನೆಯ ಪಕ್ಕದಲ್ಲೆ ವಾಸಿಸುತ್ತಿದ್ದ ಕರುಣಾಕರ ಅವರು ಮೂಲವ್ಯಾಧಿ ಕಾಯಿಲೆಗೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಪೊಲೀಸರು ಆಸ್ಪತ್ರೆಯಲ್ಲಿ ಕಾವಲಿದ್ದು ಆರೋಪಿ ತಪ್ಪಿಸದಂತೆ ಎಚ್ಚರ ವಹಿಸಿದ್ದರು. ಚಿಕಿತ್ಸೆಗೆಂದು ದಾಖಲಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ತಕ್ಷಣ ವಶಕ್ಕೆ ಪಡೆದ ಪೊಲೀಸರು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಅವರು ಕೊಲೆಗೆ ಸಂಬಂಧಿಸಿ ನೀಡಿದ ಕೆಲ ಮಾಹಿತಿಯಂತೆ ಪೊಲೀಸರು ಕರುಣಾಕರ ಆರೋಪಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹಣಕಾಸಿನ ವಿಚಾರದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಕರುಣಾಕರ ಅವರು ವಿಪರೀತ ಸಾಲಕ್ಕೆ ಒಳಗಾಗಿದ್ದರು. ಸ್ಥಳಿಯವಾಗಿ ಹಲವರಿಂದ ಕೈ ಸಾಲ ಹಾಗೂ ಬಡ್ಡಿಗೆ ಸಾಲ ಮಾಡಿದ್ದರು. ಅದು ವಿಪರೀತ ಮಟ್ಟಕ್ಕೆ ಬೆಳೆದಿತ್ತು. ಹಣಕಾಸಿನ ಅಡಚಣೆಗೆ ಒಳಗಾದ ಅವರು ಸಂಬಂಧಿ ವೇದಾವತಿ ಅವರಿಂದ ಆಭರಣ ಪಡೆದಿದ್ದರು. ಈ ವಿಚಾರ ವೇದಾವತಿ ಅವರ ಪತಿ ಜಯರಾಮ ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಪಡೆದ ಒಡವೆಗಳನ್ನು ಕರುಣಾಕರ ಅವರು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿದ್ದರು.

ವೇದಾವತಿ ಮನೆಯಲ್ಲಿ ಉಳಿದುಕೊಂಡಿದ್ದ ಅವರ ಅಳಿಯ ವಿಜೇತ್ ಅವರ ವಿವಾಹ ಹತ್ತಿರ ಬರುತಿದ್ದಂತೆ ವೇದಾವತಿ ಅವರುಒಡವೆ ಮರುಕಳಿಸುವಂತೆ ಕೇಳಿದ್ದಾರೆ. ಆದರೆ ಸಕಾಲದಲ್ಲಿ ಒಡವೆ ಬಿಡಿಸಲು ಅಸಮರ್ಥನಾದ ಕರುಣಾಕರ ವ್ಯವಸ್ಥಿತವಾಗಿ ವೇದಾವತಿ ಅವರನ್ನು ಮುಗಿಸುವ ನಿರ್ಧಾರ ಬಂದು ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಕೊಲೆಗೆ ಪತ್ನಿ ಕೂಡ ಸಹಕರಿಸಿದ ಬಗ್ಗೆ ತನಿಖೆ ವೇಳೆ ಬಾಯ್ಬಿಟ್ಟಿದ್ದು ಕೊಲೆ ನಡೆಸಿದ ಬಳಿಕ ಬಳಸಿದ ಬಟ್ಟೆಯರಕ್ತದ ಕಲೆಗಳನ್ನು ಪತ್ನಿ ತೊಳೆದು ಶುಚಿಗೊಳಿಸಿದ ಬಗ್ಗೆಯೂ ತನಿಖೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು ಪ್ರಕರಣದಲ್ಲಿ ಪತ್ನಿ ಆರೋಪಿಯಾಗುವ ಸಾಧ್ಯತೆಯಿದೆ.

ಕೃಷಿಕ ಜಯರಾಮ ಎಂಬವರ ಪತ್ನಿ ಗೃಹಿಣಿ ವೇದಾವತಿ ಅವರನ್ನು ಎ.16 ರಂದು ಮಧ್ಯಾಹ್ನ 3 ರ ವೇಳೆಗೆ ಅವರ ಮನೆಯಲ್ಲೆ ಬರ್ಬರವಾಗಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಪತಿ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆ ಈ ಕೃತ್ಯ ನಡೆದಿತ್ತು. ಅವರ ಮಕ್ಕಳಿಬ್ಬರು ವಿದ್ಯಾಭ್ಯಾಸ ಹೊಂದಲು ಮನೆಯಿಂದ ಹೊರಗೆ ಉಳಿದಿದ್ದ ವೇಳೆ ಈ ಘಟನೆ ಸಂವಿಸಿತ್ತು. ಸಂಜೆ ವೇಳೆಗೆ ಅಳಿಯ ವಿಜೇತ್ ಮನೆಗೆ ಬಂದ ವೇಳೆ ಮನೆಯ ಅಡುಗೆ ಮನೆಯ ಕೊಠಡಿಯಲ್ಲಿ ವೇದಾವತಿ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಪ್ರಕರಣ ಬೆಳಕಿಗೆ ಬಂದಿತ್ತು.

ಕೊಲೆ ನಡೆದ ಸ್ಥಳದಲ್ಲಿ ಕೊಲೆಗೆ ಬಳಸಿದ ಎರಡು ಕತ್ತಿ ಹಾಗೂ ಪಕ್ಕದ ಗೋಡೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಕೊಲೆ ನಡೆಸಿದ ಬಳಿಕ ಚಹರೆ ಸಿಗಬಾರದು ಎಂಬ ಕಾರಣಕ್ಕೆ ಕೊಠಡಿಗಳನ್ನು ನೀರು ಹಾಕಿ ತೊಳೆದಿದ್ದರು. ಘಟನೆ ನಡೆದ ವೇಳೆ ಮನೆಯ ಕೋಣೆಗಳ ಕಪಾಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಗೂ ಕೆಲ ವೌಲ್ಯದ ಆಭರಣಗಳು ಕಳವಾಗಿದ್ದವು. ಶವದ ಮೈಮೇಲಿದ್ದ ಆಭರಣಗಳನ್ನು ಕೃತ್ಯ ನಡೆಸಿದವರು ಬಿಟ್ಟು ಹೋಗಿದ್ದರು. ಭಾರೀ ಕುತೂಹಲ ಸೃಷ್ಟಿಸಿದ್ದ ಈ ಪ್ರಕರಣದ ಕೊಲೆ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಆರೋಪಿಯನ್ನು ಬುಧವಾರ ಸ್ಥಳ ಮಹಜರಿಗಾಗಿ ಕೊಲೆ ನಡೆದ ಸ್ಥಳ ಮೆಟ್ಟಿನಡ್ಕಕ್ಕೆ ಕರೆತರುತ್ತಿದ್ದಂತೆ ನೂರಾರು ಮಂದಿ ಸ್ಥಳಿಯರು ಸ್ಥಳಕ್ಕೆ ಆಗಮಿಸಿದ್ದರು.

Comments are closed.