
ಮಂಗಳೂರು: ದ.ಕ. ಜಿಲ್ಲಾ ಬಿಜೆಪಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಗರದ ಪುರಭವನದಲ್ಲಿ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಅವರು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಂಸದರು, ಮುಂದಿನ ಚುನಾವಣೆಯಲ್ಲಿ ಎಲ್ಲ ಎಂಟು ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಸವಾಲು ನಮ್ಮ ಮುಂದಿದೆ. ಇದನ್ನು ಸಮರ್ಥವಾಗಿ ಎದುರಿಸಿ ದ.ಕ. ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸೋಣ ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆ, ಗ್ರಾಮ ಪಂಚಾಯತ್, ಜಿಲ್ಲಾ, ತಾಲೂಕು ಪಂಚಾಯತ್, ನಗರಾಡಳಿತ ಸಂಸ್ಥೆಗಳಲ್ಲಿ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ. ಅದೇ ರೀತಿ ಮುಂಬರುವ ಚುನಾವಣೆಯಲ್ಲೂ ಎಲ್ಲ ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಇದು ಪುನಾರಾರ್ವತನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಜಿಲ್ಲಾ ಬಿಜೆಪಿಯ ನಿರ್ಗಮನ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅವರು ಬಿಜೆಪಿ ದ.ಕ. ಜಿಲ್ಲಾ ನೂತನ ಅಧ್ಯಕ್ಷ ಸಂಜೀವ ಮಠಂದೂರು ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂಜೀವ ಮಠಂದೂರು ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ 8 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ನಿಟ್ಟಿನಲ್ಲಿ ನನ್ನ ಅಧಿಕಾರಾವಧಿಯನ್ನು ಒಂದು ಹೋರಾಟ ಪರ್ವವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಪಕ್ಷದ ಪ್ರಮುಖರಾದಜೇಷ್ಠಾ ಪಡಿವಾಳ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಮೇಯರ್ ಸುಮಿತ್ರಾ. ಕೆ ಉಪಸ್ಥಿತರಿದ್ದರು.

ಈ ಸಂದರ್ಭ ಭಾರತ ಜ್ಯೋತಿ ಪ್ರಶಸ್ತಿ ಪುರಸ್ಕೃತ ಬಿಜೆಪಿ ಮುಖಂಡ ಎಂ. ಬಹುಬಲಿ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ಕಿಶೋರ್ ರೈ ವಂದಿಸಿದರು. ದೇವದಾಸ ಶೆಟ್ಟಿ ನಿರೂಪಿಸಿದರು.
Comments are closed.