ಕರಾವಳಿ

ಕಂಡ್ಲೂರು ಚರ್ಚ್ ಕಳ್ಳತನ; ತಮಿಳುನಾಡು ಮೂಲದ ಮೂವರು ಕಳ್ಳರ ಬಂಧನ; ಓರ್ವ ಪರಾರಿ; ಕಾರು ವಶ

Pinterest LinkedIn Tumblr

*ಯೋಗೀಶ್ ಕುಂಭಾಸಿ

ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರು ದೂಪದಕಟ್ಟೆಯಲ್ಲಿರುವ ಸಂತ ಅಂತೋನಿ ಪ್ರಾರ್ಥನಾ ಮಂದಿರದ ಬಾಗಿಲಿನ ಚಿಲಕ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಚಿಲ್ಲರೆ ಹಣ ಕದ್ದೊಯ್ದ ಮೂವರು ಕಳ್ಳರನ್ನು ಕುಂದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಸಂದರ್ಭ ಪ್ರಮುಖ ಆರೋಪಿಯೋರ್ವ ತಪ್ಪಿಸಿಕೊಂಡಿದ್ದಾನೆ.

ಆರೋಪಿಗಳನ್ನು ತಮಿಳುನಾಡು ವೆಲ್ಲೂರಿನ ರಮೇಶ್ (36), ವೆಂಕಟೇಶ(28), ಇಳುಮಲೈ(37) ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಶರವಣ್ಣನ್ ತಲೆಮರೆಸಿಕೊಂಡಿದ್ದಾನೆ.

Kandlur Church_Theft Case_Accused Arrest (3) Kandlur Church_Theft Case_Accused Arrest (2) Kandlur Church_Theft Case_Accused Arrest (1)

ಘಟನೆ ವಿವರ: ಜೂ.21 ರ ಮಂಗಳವಾರ ರಾತ್ರಿ ಕಂಡ್ಲೂರು ದೂಪದಕಟ್ಟೆಯ ಸಂತ ಅಂತೋನಿ ಚರ್ಚ್ ಎಡಭಾಗದ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಒಳಗಿದ್ದ ಎರಡು ಕಪಾಟುಗಳನ್ನು ಜಾಲಾಡಿದ್ದಲ್ಲದೇ ಕಾಣಿಕೆ ಹುಂಡಿಯನ್ನು ಮುರಿದು ಹಣಕ್ಕಾಗಿ ಶೋಧಿಸಿದ್ದರು. ಈ ಸಂದರ್ಭ ಕೈಗೆ ಪುಡಿಗಾಸನ್ನು ಕದ್ದೊಯ್ದಿದ್ದರು. ಬುಧವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.

ಸಿಕ್ಕಿಬಿದ್ದ ಕಳ್ಳರು..
ಚರ್ಚ್ ಕಳ್ಳತನದ ತರುವಾಯ ಕುಂದಾಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಂಡ ರಚಿಸಿ ಕಳ್ಳರ ಪತ್ತೆಗೆ ಬಲೆಬೀಸಿದ್ದರು. ಬುಧವಾರ ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕಂಡ್ಲೂರು ಸಮೀಪದ ಬಳ್ಕೂರು ಭಾಗದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರೊಂದನ್ನು ನೋಡಿ ಮಾಹಿತಿ ಕಲೆಹಾಕುವಾಗ ಅದರಲ್ಲಿದ್ದ ವ್ಯಕ್ತಿಗಳು ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಲ್ಲದೇ ಓರ್ವ ಪರಾರಿಯಾಗುತ್ತಾನೆ. ಕೂಡಲೇ ಪೊಲೀಸರು ಕಾರಿನಲ್ಲಿದ್ದ ಇತರ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಅದು ಕಳ್ಳರ ತಂಡವೆಂದು ತಿಳಿದುಬಂದಿದೆ.
ಮಂಗಳವಾರ ತಮಿಳುನಾಡಿನಿಂದ ಕುಂದಾಪುರಕ್ಕೆ ಕಾರಿನ ಮೂಲಕ ಬಂದಿದ್ದ ಈ ತಂಡ ಕಂಡ್ಲೂರಿನ ಚರ್ಚ್ ಕಳ್ಳತನ ನಡೆಸಿದ್ದರು. ಅಲ್ಲಿ ಹೆಚ್ಚಿಗೆ ಹಣ ಸಿಗದಿದ್ದು ಬುಧವಾರ ರಾತ್ರಿಯೂ ಕಳ್ಳತನ ನಡೆಸುವ ಸ್ಕೆಚ್ ರೂಪಿಸಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ. ಕಳ್ಳರ ತಂಡದ ಪ್ರಮುಖ ಆರೋಪಿ ಶರವಣ್ಣನ್ ಎನ್ನಲಾಗಿದೆ.

ಬಂಧಿತರಿಂದ ತಮಿಳುನಾಡು ನೋಂದಣಿ ಸಂಖ್ಯೆಯ ಇಂಡಿಕಾ ಕಾರು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಶರವಣ್ಣನ ಹುಡುಕಾಟಕ್ಕೆ ಬಲೆಬೀಸಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಕುಂದಾಪುರ: ಕಂಡ್ಲೂರು ಸಂತ ಅಂತೋನಿ ಚರ್ಚ್ ಕಳ್ಳತನಕ್ಕೆ ವಿಫಲ ಯತ್ನ

Comments are closed.