
ಮಂಗಳೂರು, ಜೂನ್ 25 : ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಬಂಧನದ ಬಗ್ಗೆ ಹಲವಾರು ವದಂತಿಗಳು ಹಬ್ಬಿದ ಬೆನ್ನಲೇ ಇದೀಗ ನರೇಶ್ ಶೆಣೈ ಪೊಲೀಸರಿಗೆ ಶರಣಾಗಿರುವ ಮಾಹಿತಿ ಖಚಿತಗೊಂಡಿದೆ.
ಮಾರ್ಚ್ 21ರಂದು ವಿನಾಯಕ್ ಬಾಳಿಗರ ಹತ್ಯೆ ನಡೆದಿತ್ತು. ಹತ್ಯೆ ಬಳಿಕ ಪೊಲೀಸರಿಗೆ ವಿಚಾರಣೆಗೆ ಬೇಕಾಗಿದ್ದ ನರೇಶ್ ಶೆಣೈ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಜಾಮೀನು ರಹಿತಾ ವಾರೆಂಟ್ ಹೊರಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಕ್ಕೆ ಹಾಜಾರು ಪಡಿಸಿದ್ದಾರೆ. ಪ್ರಕರಣದಲ್ಲಿ ನರೇಶ್ ಶೆಣೈ ಅವರು ಪ್ರಮುಖ ಆರೋಪಿಯಾಗಿದ್ದು, ಅವರಿಗಾಗಿ ಕಳೆದ ಮೂರು ತಿಂಗಳಿನಿಂದ ಹುಡುಕಾಟ ನಡೆಯುತ್ತಿತ್ತು. ಈ ನಡುವೆ ನರೇಶ್ ಶೆಣೈ ನಿರೀಕ್ಷಣಾ ಜಾಮೀನಿಗಾಗಿ ಮಂಗಳೂರಿನಲ್ಲಿ ಹಾಗೂ ಬೆಂಗಳೂರಿನ ಹೈಕೋರ್ಟ್ ನಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.
ಈ ಎಲ್ಲಾ ವಿದ್ಯಾಮಾನಗಳ ನಡುವೆ ವಿನಾಯಕ್ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು ಗುರುವಾರ ಮಂಗಳೂರಿನ 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಚಾರ್ಜ್ ಶೀಟ್‌ನಲ್ಲಿ ನರೇಶ್ ಶೆಣೈ ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಬಾಳಿಗಾ ಕೊಲೆ ಪ್ರಕರಣದಲ್ಲಿ ಪೊಲೀಸ್ ವಿಚಾರಣೆಗೆ ಬೇಕಾಗಿರುವ ನರೇಶ್ ಶೆಣೈ ಬುಧವಾರ ನಗರದ ನ್ಯಾಯಾಲಯಕ್ಕೆ ಶರಣಾಗತರಾಗುತ್ತಾರೆ ಎಂಬ ಮಾಹಿತಿ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅವರಣದ ಸುತ್ತಮುತ್ತ ಹಲವಾರು ಮಂದಿ ಸೇರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಅವರಣದ ಸುತ್ತ ಹಾಗೂ ನ್ಯಾಯಾಲಯದಲ್ಲಿ ಎ.ಸಿ.ಪಿ ತಿಲಕ್ ಚಂದ್ರ ನೇತ್ರತ್ವದ ಪೊಲೀಸರು ನರೇಶ್ ಶೆಣೈ ಬಂಧನಕ್ಕೆ ಕಾದು ಕುಳಿತ್ತಿದ್ದರು. ಆದರೆ ನ್ಯಾಯಾಲಯದ ಕಲಾಪಗಳು ಮುಗಿಯುವ ತನಕವೂ ನರೇಶ್ ಶೆಣೈ ಶರಣಾಗತರಾಗಿರಲಿಲ್ಲ.
ಆದರೆ ಇದೀಗ ನರೇಶ್ ಶೆಣೈ ಶುಕ್ರವಾರ ಮಂಗಳೂರಿನ ಸಿಸಿಬಿ ಪೊಲೀಸರ ಮುಂದೆ ಶರಣಾಗಿರುವ ಮಾಹಿತಿ ಖಚಿತಗೊಂಡಿದ್ದು, ಸಿಸಿಬಿ ಕಚೇರಿಯಲ್ಲಿ ಅವರ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ನರೇಶ್ ಶೆಣೈಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ದೇಶಪ್ರೇಮಿಗಳ ಸಂಘಟನೆ ಜೂನ್ 7ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಹತ್ಯೆ ನಡೆದು ಎರಡೂವರೆ ತಿಂಗಳಾದರೂ ಪೊಲೀಸರು ಆರೋಪಿ ನರೇಶ್ ಶೆಣೈಯನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಆರು ಮಂದಿ ಬಂಧನ : ಈಗ ಏಳು ಮಂದಿ…

ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ವಿನಿತ್ ಪೂಜಾರಿ, ನಿಶಿತ್ ದೇವಾಡಿಗ, ಶಿವ @ ಶಿವಪ್ರಸಾದ್, ಶೈಲೇಶ್ @ ಶೈಲು, ಕೆ ಮಂಜುನಾಥ್ ಶೆಣೈ ಯಾನೆ ಮಂಜು ನಿರೇಶ್ವಾಲ್ಯ ಯಾನೆ ಮಂಜು ಹಾಗೂ ಶ್ರೀಕಾಂತ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮಂಜು ನಿರೇಶ್ವಾಲ್ಯರಿಗೆ ಈಗಾಗಲೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೀಗ ನರೇಶ್ ಶೆಣೈ ಶರಣಾಗತಿಯೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೇರಿದೆ.
ಬಾಳಿಗ ಕೊಲೆ ಪ್ರಕರಣ : ಪ್ರಮುಖ ಆರೋಪಿ ನರೇಶ್ ಶೆಣೈ ಕೇರಳದಲ್ಲಿ ಬಂಧನ..?
Comments are closed.