
ಮಂಗಳೂರು,ಜೂನ್.24: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯೊಂದರಲ್ಲಿ ಮೂರು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಆರ್ ಟಿ.ಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಳಿಗಾ ಕೊಲೆಯ ಪ್ರಮುಖ ಆರೋಪಿ ಯುವ ಬ್ರಿಗೇಡ್ ನಾಯಕ ನರೇಶ್ ಶೆಣೈಯನ್ನು ಮಂಗಳೂರು ನಗರ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಗುರುವಾರ ತಡ ರಾತ್ರಿ ಕೇರಳದಲ್ಲಿ ಬಂಧಿಸಿರುವ ಬಗ್ಗೆ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಈ ಕೊಲೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಬಹುದೊಡ್ಡ ಪ್ರಗತಿ ಸಾಧಿಸಿದ್ದಂತಾಗಿದೆ.
ಇದೀಗ ಒಂದು ಮೂಲಗಳ ಪ್ರಕಾರ ನರೇಶ್ ಶೆಣೈಯನ್ನು ಈಗಾಗಲೇ ಮಂಗಳೂರಿಗೆ ಕರೆತರಲಾಗಿದ್ದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಮೂಲಗಳ ಪ್ರಕಾರ ನರೇಶ್ ಶೆಣೈಯನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜಾರು ಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ನರೇಶ್ ಶೆಣೈ ಬಂಧನದ ಬಗ್ಗೆ ಯಾವೂದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಂಧನದ ಬಗ್ಗೆ ಪೊಲೀಸ್ ಇಲಾಖೆ ಕೂಡ ಇನ್ನೂ ಸ್ಪಷ್ಟಪಡಿಸಿಲ್ಲ. ಇದುವರೆಗೆ ನರೇಶ್ ಶೆಣೈ ಬಂಧನವಾದ ನಿಖರವಾದ ಸ್ಥಳ ಮತ್ತು ಸಮಯ ಹಾಗೂ ಇನ್ನಿತ್ತರ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ.
ನ್ಯಾಯಾಲಯಕ್ಕೆ ಶರಣಾಗತ : ವದಂತಿ
ಬಾಳಿಗಾ ಕೊಲೆ ಪ್ರಕರಣದಲ್ಲಿ ಪೊಲೀಸ್ ವಿಚಾರಣೆಗೆ ಬೇಕಾಗಿರುವ ಯುವ ಬ್ರಿಗೇಡ್ ನ ನರೇಶ್ ಶೆಣೈ ಬುಧವಾರ ನಗರದ ನ್ಯಾಯಾಲಯಕ್ಕೆ ಶರಣಾಗತರಾಗುತ್ತಾರೆ ಎಂಬ ಮಾಹಿತಿ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅವರಣದ ಸುತ್ತಮುತ್ತ ಹಲವಾರು ಮಂದಿ ಸೇರಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದ ಅವರಣದ ಸುತ್ತ ಹಾಗೂ ನ್ಯಾಯಾಲಯದಲ್ಲಿ ಎ.ಸಿ.ಪಿ ತಿಲಕ್ ಚಂದ್ರ ನೇತ್ರತ್ವದ ಪೊಲೀಸರು ನರೇಶ್ ಶೆಣೈ ಬಂಧನಕ್ಕೆ ಕಾದು ಕುಳಿತ್ತಿದ್ದರು. ಆದರೆ ನ್ಯಾಯಾಲಯದ ಕಲಾಪಗಳು ಮುಗಿಯುವ ತನಕವೂ ನರೇಶ್ ಶೆಣೈ ಶರಣಾಗತರಾಗಿರಲಿಲ್ಲ ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ಹತ್ಯೆ:
ಮಾರ್ಚ್ 21ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು.
ಬಾಳಿಗಾ ಹತ್ಯೆ ನಡೆದ ಬಳಿಕ ನರೇಶ್ ಶೆಣೈ ನಾಪತ್ತೆಯಾಗಿದ್ದು, ಬಾಳಿಗ ಅವರ ಹತ್ಯೆ ಪ್ರಕರಣದಲ್ಲಿ ಯುವ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಅವರ ಪಾತ್ರ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ನರೇಶ್ ಶೆಣೈ ಎಲ್ಲಿಯೂ ಪತ್ತೆಯಾಗದ ಕಾರಣ ‘ಲುಕ್ಔಟ್’ ನೋಟಿಸ್ ಜಾರಿಗೊಳಿಸಿದ್ದರು. ನರೇಶ್ ಶೆಣೈ ಪತ್ತೆಗೆ ದೇಶದ ಪ್ರಮುಖ ನಗರ ಹಾಗೂ ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಮಾತ್ರವಲ್ಲದೇ ಪೊಲೀಸರ ವಿಚಾರಣೆಗೆ ನರೇಶ್ ಶೆಣೈ ಬೇಕಾಗಿದುದ್ದರಿಂದ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಕೂಡ ಹೊರಡಿಸಲಾಗಿತ್ತು.
Comments are closed.