
ವಿಟ್ಲ, ಜೂ.23: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಮಂದಿ ಕುಖ್ಯಾತ ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 20ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಕುಡ್ತಮುಗೇರು ಮೂಲದ ಮಂಜೇಶ್ವರ ಬಾಕ್ರಬೈಲು ನಿವಾಸಿ ಬಾರಿಕ್ (32), ಕೊಡುಂಗಾಯಿ ರಾಧುಕಟ್ಟೆ ನಿವಾಸಿ ಬಶೀರ್ ಯಾನೆ ರಾಧುಕಟ್ಟೆ ಬಶೀರ್ (25 ), ಕಡಂಬು ಕ್ವಾಟ್ರಸ್ ನಿವಾಸಿ ಅಶ್ರಫ್ ಯಾನೆ ಅಸ್ರು (19), ರಾಧುಕಟ್ಟೆ ನಿವಾಸಿ ಸೈಪುದ್ದೀನ್ ಯಾನೆ ಸೈಪು (19), ಇರಾ ಬಾಳೆಪುಣಿ ನಿವಾಸಿ ಜಾಬಿರ್ (26), ಕುಡ್ತಮುಗೇರು ಕರೈ ನಿವಾಸಿ ಜುಬೈರ್ ಕೆ. (23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಪೊಲೀಸರು 2 ಕಾರು, 1 ಪಿಕಪ್, 1 ರಿಕ್ಷಾ, 1 ದನ, 15 ಕಿಂಟಾಲ್ ಅಡಿಕೆಯನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ರಾಧುಕಟ್ಟೆ ಬಶೀರ್ ಮೇಲೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 19 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿರುವುದಲ್ಲದೇ, ಕೇರಳದ ಕಾಸರಗೋಡು ಮತ್ತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣ ದಾಖಲಾಗಿದೆ.

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಗುಜರಾತ್ ನಲ್ಲಿ ಬಂಧಿಸಿಲ್ಪಟ್ಟು ಸುಮಾರು ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿ, 7 ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ. ಪರ್ತಕರ್ತ ವಿಟಿ ಪ್ರಸಾದ್ ಕೊಲೆ ಯತ್ನ ಪ್ರಕರಣ ಆರೋಪಿಯಾದ ಬಾರಿಕ್ ಜೈಲು ಶಿಕ್ಷೆ ಅನುಭವಿಸಿದ್ದ. ವಿಟ್ಲ ಠಾಣೆಯ ರೌಡಿ ಶೀಟರ್ ಆಗಿರುವ ಈತ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ. ಜಾಬಿರ್ ಎಂಬಾತ ಕೇರಳ ಮಂಜೇಶ್ವರ ಠಾಣೆಯಲ್ಲಿ ವಾಹನ ಕಳ್ಳತನ ಪ್ರಕರಣದ ಆರೋಪಿಯಾಗಿದ್ದಾನೆ.
ಕೊಲ್ನಾಡು ಗ್ರಾಮದ ಕುಡ್ತಮುಗೇರು ಪೇಟೆಯಲ್ಲಿನ ಅಡಿಕೆ ಅಂಗಡಿ ಕಳ್ಳತನ, ಕುಡ್ತಮುಗೇರು ಶ್ರೀನಿವಾಸ ಆಚಾರ್ಯ ಅವರ ಮನೆಯಲ್ಲಿ ಸಾಕು ನಾಯಿಗಳಿಗೆ ವಿಷ ಉಣಿಸಿ ಅಡಿಕೆ ಕಳ್ಳತನ, ಸುರಿಬೈಲ್ ಮಸೀದಿಯ ಆವರಣದಲ್ಲಿರಿಸಿದ ಅಡಿಕೆ ಕಳ್ಳತನ, ಕೊಡಂಗೆ ಎರ್ಮೆನಿಲೆ ರತ್ನಾಕರ ಶೆಟ್ಟಿ ಅವರ ಮನೆಯಂಗಳದಲ್ಲಿ ಸಾಕುನಾಯಿಗಳಿಗೆ ವಿಷ ಹಾಕಿ ಅಡಿಕೆ ಕಳ್ಳತನ, ಕಂಬಳಬೆಟ್ಟು ದರ್ಗಾ ಬಳಿಯ ಅಡಿಕೆ ಅಂಗಡಿ ಕಳ್ಳತನ, ಅಳಿಕೆ ಮಡಿಯಾಲ ಮಹೇಶ್ ಭಟ್ ಅವರ ಮನೆ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಜಾನುವಾರು ಕಳ್ಳತನ, ಅಳಕೆಮಜಲು ಪೆಲತ್ತಿಂಜ ಸಂಜೀವ ಗೌಡ ಅವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಒಂದು ವರ್ಷದಿಂದ ವಿಟ್ಲದಲ್ಲಿ ಹಲವು ಕಳವು ಪ್ರಕರಣಗಳು ನಡೆದಿದ್ದವು. ಇದು ಪೊಲೀಸರಿಗೆ ಭಾರೀ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಪೊಲೀಸರು ವಿಟ್ಲ ವ್ಯಾಪ್ತಿಯಲ್ಲಿ ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದು, ಬೆಳಗ್ಗಿನ ಜಾವ ಪುತ್ತೂರು ಕಡೆಗೆ 2 ಕಾರುಗಳಲ್ಲಿ ಆರೋಪಿಗಳು ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ತಂಡವು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷ ಭೂಷಣ್ ಜಿ.ಬೋರಸೆ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದು, ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿ ಜಿನ್ನಪ್ಪ ಗೌಡ, ರಾಮಚಂದ್ರ, ಜಯಕುಮಾರ್, ಪ್ರವೀಣ್ ರೈ, ರಕ್ಷಿತ್ ರೈ, ಪ್ರವೀಣ್ ಕುಮಾರ್, ರಮೇಶ್, ಲೋಕೇಶ್, ಸತೀಶ್, ಭವಿತ್ ರೈ, ಪ್ರಮೀಳಾ ಕೆ.ಎಸ್., ಚಾಲಕ ರಘುರಾಮ, ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್, ದಿವಾಕರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Comments are closed.