ಕರಾವಳಿ

ಮಂಗಳೂರು ಧರ್ಮಪ್ರಾಂತದ ಬಿಷಪ್‌‌ ಅವರಿಗೆ ನಗರದಲ್ಲಿ ಪೌರ ಸಮ್ಮಾನ ಗೌರವ.

Pinterest LinkedIn Tumblr

bishop_townhall_1

ಬಡವರ ದೀನ ದಲಿತರ ನೋವಿಗೆ ಸ್ಪಂದಿಸಿದವ ಮಂಗಳೂರು ಬಿಷಪ್‌ : ಅತಿ.ವಂ.ಡಾ.ಬರ್ನಾಡ್ ಮೊರಾಸ್

 

ಮಂಗಳೂರು,ಜೂ.22: ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ|ರೆ|ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಜೂ. 21ರಂದು ತಮ್ಮ ಜೀವನದ ಅಮೃತೋತ್ಸವವನ್ನು (75ನೆ ವರ್ಷಾಚರಣೆ) ಆಚರಿಸಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಅವರಿಗೆ ನಗರದಲ್ಲಿ ಪೌರ ಸಮ್ಮಾನ ಮಾಡಿ ಗೌರವಿಸಲಾಯಿತು.

ನಗರದ ಪುರಭವನದಲ್ಲಿ ಮಂಗಳವಾರ ಮಂಗಳೂರು ಮೇಯರ್‌ ಹರಿನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಂ ಶೆಟ್ಟಿ ಅಭಿನಂದಿಸಿದರು.ಬೆಂಗಳೂರಿನ ಆರ್ಚ್‌ ಬಿಷಪ್‌ ರೈ|ರೆ|ಡಾ| ಬರ್ನಾರ್ಡ್‌ಮೊರಾಸ್‌, ರಾಮಕೃಷ್ಣ ಮಠದ ಸ್ವಾಮೀಜಿ ಶ್ರೀ ಜಿತಕಾಮಾನಂದಜಿ, ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್‌ ತ್ವಾಕಾ ಅಹಮದ್‌ ಮುಸ್ಲಿಯಾರ್‌ ಅವರು ಮುಖ್ಯ ಅತಿಥಿಗಳಾಗಿದ್ದರು.

ಈ ವೇಳೆ ಪೌರ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬೆಂಗಳೂರಿನ ಕ್ರೈಸ್ತ ಮಹಾ ಧರ್ಮಾಧ್ಯಕ್ಷ ಅತಿ.ವಂ.ಡಾ.ಬರ್ನಾಡ್ ಮೊರಾಸ್ ಅವರು, ಮಂಗಳೂರು ಕ್ರೈಸ್ತ ಧರ್ಮಪೀಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಲೋಶಿಯಸ್ ಪೌಲ್‌ರವರು ಉತ್ಸವ ಮೂರ್ತಿಯಂತೆ ಇರದೆ ಸಮಾಜದ ಎಲ್ಲಾ ಜನಸಮುದಾಯದ ಜೊತೆ ಪ್ರೀತಿ ವಿಶ್ವಾಸದೊಂದಿಗೆ ನಡೆದುಕೊಂಡವರು.

ಬಡವರ ದೀನ ದಲಿತರ ನೋವಿಗೆ ಸ್ಪಂದಿಸಿದವರು. ಶಾಲೆ, ಕಾಲೇಜುಗಳನ್ನು ಹುಟ್ಟು ಹಾಕಿ ಶೈಕ್ಷಣಿಕ ಆರೋಗ್ಯದ ಸೇವೆ ಮಾಡಿದವರು. ಆಫ್ರಿಕಾದ ತಾಂಜೇನಿಯದಲ್ಲೂ ಬಡವರ ಸೇವೆ ಮಾಡಿದವರು. ಗುಲ್ಬರ್ಗ ಕ್ರೈಸ್ತ ಧರ್ಮ ಪೀಠ ರಚನೆಯಾಗಲು ಕಾರಣ ಕರ್ತರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ಕ್ರೈಸ್ತನ ಹಾದಿಯಲ್ಲಿ ಧರ್ಮಾಧ್ಯಕ್ಷ ಹುದ್ದೆಗೆ ಚ್ಯುತಿ ಬಾರದಂತೆ ನಡೆದುಕೊಂಡು ಮಾದರಿಯಾಗಿದ್ದಾರೆ. ಅವರ ಸಾಧನೆ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಇದೇ ರೀತಿ ಎಲ್ಲರು ಬಡವರ ಸೇವೆಯೊಂದಿಗೆ ಜಿಲ್ಲೆಯ ಅಭಿವೃದ್ಧಿಗಾಗಿ ಶಾಂತಿ ಸೌರ್ಹಾದತೆಯೊಂದಿಗೆ ಹೆಜ್ಜೆ ಹಾಕೋಣ ಎಂದು ಹೇಳಿದರು.

bishop_townhall_2 bishop_townhall_3 bishop_townhall_4 bishop_townhall_5 bishop_townhall_6 bishop_townhall_7 bishop_townhall_8 bishop_townhall_9 bishop_townhall_10 bishop_townhall_11 bishop_townhall_12 bishop_townhall_13 bishop_townhall_14 bishop_townhall_15 bishop_townhall_16 bishop_townhall_17 bishop_townhall_18

ಪೌರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮಂಗಳೂರು ಕ್ರೈಸ್ತ ಧರ್ಮ ಪೀಠದ ಧರ್ಮಾಧ್ಯಕ್ಷ ಅತೀ.ವಂ.ಡಾ.ಅಲೋಶಿಯಸ್ ಪೌಲ್ ಡಿ ಸೋಜ ಅವರು, ನಾನು ಧರ್ಮಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಸಮಾಜದ ಎಲ್ಲಾ ಜನರೊಂದಿಗೆ ಪ್ರೀತಿ, ಅನುಕಂಪ, ಸಹನಶೀಲತೆಯೊಂದಿಗೆ ಕ್ರಿಸ್ತನ ಹಾದಿಯಲ್ಲಿ ಸಾಗಲು ಪ್ರಯತ್ನಿಸಿದ್ದೇನೆ. ಇಲ್ಲಿನ ಜನರು ನನ್ನನ್ನು ಪ್ರೀತಿ, ಗೌರವ, ಅಭಿಮಾನದಿಂದ ನಡೆಸಿಕೊಂಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಈ ಪೌರ ಸನ್ಮಾನ ಇಡೀ ಸಮುದಾಯಕ್ಕೆ ಸಂದ ಗೌರವವಾಗಿದೆ. ನಾನು ಕ್ರೈಸ್ತ ಅನುಯಾಯಿಯಾಗಲು ತೀರ್ಮಾನಿಸಿದಾಗ ಜನಸೇವೆ ಮಾಡಬೇಕೆಂಬ ಹಂಬಲ ಮಾತ್ರ ನನ್ನಲ್ಲಿತ್ತು. ಆದರೆ ನಾನು ನಿರೀಕ್ಷೆಯೂ ಮಾಡದಿದ್ದ ಧರ್ಮಾಧ್ಯಕ್ಷ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ದೊರೆಯಿತು.ಅದೊಂದು ಭಗವಂತನ ಕೃಪೆ ಎಂದು ನಾನು ಭಾವಿಸಿದ್ದೇನೆ. ಸಮುದಾಯದ ಜನರ ಮೇಲೆ ಕೆಲವೊಂದು ಅಹಿತಕರ ಘಟನೆಗಳು ನಡೆದಾಗಲೂ ನಮಗೆ ಸಹಾಯ ನೀಡಿದ ಮಂಗಳೂರಿನ ಜನರು, ಜನ ಪ್ರತಿನಿಧಿಗಳನ್ನು ಮರೆಯಲು ಸಾಧ್ಯವಿಲ್ಲ. ಇಂದು ಜಿಲ್ಲೆಯ ಜನರು ಹಿಂದು, ಮುಸ್ಲಿಂ, ಕ್ರೈಸ್ತರೆನ್ನುವ ಭೇದವಿಲ್ಲದೆ ನನಗೆ ಪೌರ ಸನ್ಮಾನ ನೀಡಿರುವುದೇ ಜಿಲ್ಲೆಯ ಸೌರ್ಹಾದತೆಗೆ ನೀಡಿದ ಕೊಡುಗೆ ’’ ಎಂದು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ ಅವರು, ಮಂಗಳೂರು ಕ್ರೈಸ್ತ ಧರ್ಮ ಪೀಠದ ವಂದನೀಯ ಡಾ.ಅಲೋಶಿಯಸ್ ಪೌಲ್ ಡಿಸೋಜರವರು ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುತ್ತಾ ಅವರ ಪ್ರೀತಿಗೆ ಪಾತ್ರರಾದವರು. ಬಂಟ್ವಾಳ ತಾಲೂಕಿನ ಕುಗ್ರಾಮವೊಂದರಲ್ಲಿ ಹುಟ್ಟಿ ಕಳೆದ 20ವರ್ಷಗಳಲ್ಲಿ ಕ್ರೈಸ್ತ ಧರ್ಮ ಪೀಠದ ಧರ್ಮಾಧ್ಯಕ್ಷರಾದ ಬಳಿಕ ಮಹಾತ್ಮ ಗಾಂಧಿಯವರಂತೆ ಜಾತಿ, ಮತ, ಭೇದವಿಲ್ಲದೆ ಬಡವರ ಶಿಕ್ಷಣ ಮತ್ತು ಆರೋಗ್ಯ ಸೇವೆ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಹತ್ವದ ಕೆಲಸವನ್ನು ಮಾಡಿದ್ದಾರೆ.ಪ್ರಚಾರವನ್ನು ಬಯಸದ ಸಮರ್ಥ ನಾಯಕತ್ವ, ಅನುಕಂಪ, ಸರಳತೆ ಮೊದಲಾದ ಮಾನವೀಯ ಗುಣಗಳ ಮೂಲಕ ಮಂಗಳೂರಿನ ಜನತೆಗೆ, ಯುವಜನರಿಗೆ ಮಾದರಿಯಾಗಿದ್ದಾರೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಬಳ್ಳಾರಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಹೆನ್ರಿ ಡಿ ಸೋಜ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಅಮರನಾಥ ಶೆಟ್ಟಿ, ಶಾಸಕರಾದ ಮೊಯ್ದೀನ್ ಬಾವ, ಶಕುಂತಳಾ ಶೆಟ್ಟಿ, ಗಣೇಶ್ ಕಾರ್ನಿಕ್, ಐವನ್ ಡಿಸೋಜ, ಮಾಜಿ ಶಾಸಕ ಯೋಗೀಶ್ ಭಟ್, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ವಿನಯ ಹೆಗ್ಡೆ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞ, ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ರೊನಾಲ್ಡ್ ಕುಲಾಸೊ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್, ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಮಾಜಿ ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಉಪ ಮೇಯರ್ ಸುಮಿತ್ರ ಕರಿಯ, ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಬೆಥನಿ ಸಂಸ್ಥೆಯ ಮಹಾ ಮುಖ್ಯಸ್ಥೆ ವಂ,ರೋಸ್ ಸೆಲಿನ್ ಬಿ.ಎಸ್, ಅರ್ಸುಲಾಯ್ನ ಸಂಸ್ಥೆಯ ಮುಖ್ಯಸ್ಥೆ ವಂ.ಸುಶಿಲಾ ಸ್ಕಿಕ್ವೇರಾ, ಪ್ರಜ್ಞಾ ಸಲಹಾ ಕೇಂದ್ರದ ಸ್ಥಾಪಕಿ ಪ್ರೊ.ಹೀಲ್ಡಾ ರಾಯಪ್ಪನ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ.ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಪೌರ ಸನ್ಮಾನ ಸಮಿತಿಯ ಪ್ರಧಾನ ಸಂಚಾಲಕ ಜೆ.ಆರ್.ಲೊಬೊ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಪಿ.ನೊರೋನ್ಹಾ ವಂದಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸನ್ಮಾನ ಪತ್ರ ವಾಚಿಸಿದರು. ಕನೆಪ್ಟಾ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದ ಪ್ರಾರಂಭದಲ್ಲಿ ಸಮ್ಮಾನಿತರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಬಿಷಪ್‌ ಸೇವೆಯ ವಿವರ :
1941ರ ಜೂ. 21ರಂದು ಬಂಟ್ವಾಳ ತಾಲೂಕು ಅಗ್ರಾರ್‌ ಚರ್ಚ್‌ನ ಹೆಕ್ಕೊಟ್ಟು ಗ್ರಾಮದಲ್ಲಿ ಜನನ. 1958 ರಲ್ಲಿ ಧಾರ್ಮಿಕ ಸೇವೆ ತರಬೇತಿ ಪಡೆಯಲು ಜಪ್ಪು ಸೈಂಟ್‌ ಜೋಸೆಫ್‌ ಸೆಮಿನರಿಗೆ ಸೇರ್ಪಡೆ. 1966ರಲ್ಲಿ ಗುರುದೀಕ್ಷೆ. 1970ರಲ್ಲಿ ಕುಲಶೇಖರ ಚರ್ಚ್‌ನಲ್ಲಿ ಸಹಾಯಕ ಗುರುಗಳಾಗಿ ಸೇವೆ ಆರಂಭ. ಬಳಿಕ ನಿಕಟ ಪೂರ್ವ ಬಿಷಪರ ಕಾರ್ಯದರ್ಶಿಯಾಗಿ ನಿಯೋಜನೆ. ರೋಮ್‌ಗೆ ತೆರಳಿ ಕೆಥೋಲಿಕ್‌ ಧರ್ಮಸಭೆಯ ಕಾನೂ ನಿನ ವಿಷಯದಲ್ಲಿ ಡಾಕ್ಟರೆಟ್‌ ಪದವಿ.
1976ರಲ್ಲಿ ಮಂಗಳೂರಿಗೆ ವಾಪಸಾಗಿ ಬಿಷಪರ ಕಾರ್ಯದರ್ಶಿ, ಛಾನ್ಸಲರ್‌ ಆಗಿ ನೇಮಕ. 1985- 87ರಲ್ಲಿ ಗ್ಲಾಡ್‌ಸಂ ಹೋಂನ ನಿರ್ದೇಶಕರಾಗಿ ಸೇವೆ.
1987- 94ರ ಅವಧಿಯಲ್ಲಿ ಕಾಸ್ಸಿಯಾ ಚರ್ಚ್‌ಗುರು, ಧರ್ಮಪ್ರಾಂತದ ಛಾನ್ಸಲರ್‌, ನ್ಯಾಯಿಕ ಅಧಿಕಾರಿ,
1995ರಲ್ಲಿ ಜಪ್ಪು ಸೆಮಿನರಿಯ ರೆಕ್ಟರ್‌ ಆಗಿ ನೇಮಕ. 1995 ನ. 1ರಂದು ಧರ್ಮಪ್ರಾಂತದ ಸಹಾಯಕ ಬಿಷಪರಾಗಿ ಮತ್ತು 1996 ಮೇ 15ರಂದು ಅಧಿಕೃತ ಬಿಷಪರಾಗಿ ನೇಮಕಗೊಂಡು ಅಧಿಕಾರ ಸ್ವೀಕರಿಸಿದ್ದರು.

Comments are closed.