ಕರಾವಳಿ

ಎರಡು ತಿಂಗಳಿನಿಂದ ಪತ್ನಿ,ಮಗಳು ನಾಪತ್ತೆ : ಚಿಂತೆಯಲ್ಲೇ ಸಾವನ್ನಪ್ಪಿದ ದೂರುದಾರ ಪತಿಯ ಶವ ಸಂಸ್ಕಾರಕ್ಕೆ ತೊಡಕು

Pinterest LinkedIn Tumblr

Missing_wife_dougtr

ಮಂಗಳೂರು / ಉಳ್ಳಾಲ: ಎರಡು ತಿಂಗಳ ಹಿಂದೆ ದೇರಳಕಟ್ಟೆಯ ಆಸ್ಪತ್ರೆಗೆ ಅಸೌಖ್ಯದಿಂದ ದಾಖಲಾಗಿದ್ದ ವ್ಯಕ್ತಿಯೊಬ್ಬರ ಪತ್ನಿ ಹಾಗೂ ಮಗಳು ನಾಪತ್ತೆಯಾಗಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿರುವ ವ್ಯಕ್ತಿ ಇದೀಗ ದಾವಣಗೆರೆಯಲ್ಲಿ ಮೃತಪಟ್ಟಿದ್ದಾರೆ.

ದಾವಣಗೆರೆ ಕುಕ್ಕುವಾಡದ ಕರಿಗನ್ನೂರು ಕ್ರಾಸ್ ನಿವಾಸಿ ರಾಜಣ್ಣ (55) ಊರಿನಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಇವರ ಪತ್ನಿ ಮಂಜುಳಾ (35) ಹಾಗೂ ಪುತ್ರಿ ಪಲ್ಲವಿ(14) ನಾಪತ್ತೆಯಾಗಿ ಎರಡು ತಿಂಗಳು ಕಳೆದರೂ ಅವರ ಪತ್ತೆ ಈವರೆಗೂ ಆಗಿಲ್ಲ.

ರಾಜಣ್ಣ ಅಸೌಖ್ಯದ ಹಿನ್ನೆಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಕರೆತರುವ ಸಂದರ್ಭ ಪತ್ನಿ ಮಂಜುಳಾ ಹಾಗೂ ಪುತ್ರಿ ಪಲ್ಲವಿ ಜತೆಯಾಗಿ ಬಂದಿದ್ದರು. ಎ.30ರಂದು ಮಂಜುಳಾ ಅವರು ಊರಿಗೆ ಹೋಗುವುದಾಗಿ ತಿಳಿಸಿ ತೆರಳಿದವರು, ಅತ್ತ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ರಾಜಣ್ಣ ನಾಪತ್ತೆ ದೂರು ದಾಖಲಿಸಿದ್ದರು. ಆದರೂ ಎರಡು ತಿಂಗಳಾದರೂ ಇಬ್ಬರ ಪತ್ತೆಯೂ ಆಗದೆ ರಾಜಣ್ಣ ಚಿಕಿತ್ಸೆ ಮುಗಿಸಿ ವಾಪಸ್ಸು ಊರು ಸೇರಿದ್ದರು.

ಪತ್ನಿ ಹಾಗೂ ಮಗಳ ಚಿಂತೆಯಿಂದ ಬಳಲುತ್ತಿದ್ದ ರಾಜಣ್ಣ ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅಲ್ಲದೆ ತೀರಿಹೋದಲ್ಲಿ ಪತ್ನಿ ಹಾಗೂ ಮಗಳ ಉಪಸ್ಥಿತಿಯಲ್ಲೇ ಅಂತಿಮ ವಿಧಿವಿಧಾನಗಳನ್ನು ನಡೆಸುವಂತೆ ಮನೆಮಂದಿಯಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಇಬ್ಬರ ಸುಳಿವು ದೊರೆಯದೆ, ಮನೆಮಂದಿ ಅಂತಿಮ ಸಂಸ್ಕಾರ ನಡೆಸದೆ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾದ ಮಂಜುಳಾ ಅವರು ಕಳೆದ 17 ವರ್ಷಗಳಿಂದ ಕರಿಗನ್ನೂರು ಕ್ರಾಸ್ ನಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Comments are closed.