ಕರಾವಳಿ

ಬೈಂದೂರು ಶಾಸಕ ಗೋಪಾಲ ಪೂಜಾರಿಗೆ ಕೈತಪ್ಪಿದ ಮಂತ್ರಿ ಸ್ಥಾನ; ಬೆಂಬಲಿಗರ ಆಕ್ರೋಶ

Pinterest LinkedIn Tumblr

Byndoor_MLA_Gopala Poojary

(ಕೆ.ಗೋಪಾಲ ಪೂಜಾರಿ)

ಕುಂದಾಪುರ: ನಾಲ್ಕು ಬಾರಿ ಶಾಸಕರಾಗಿ, ಕಳೆದ 5 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪಕ್ಷದ ಸಂಘಟನೆಯಲ್ಲಿ ಸಕ್ರೀಯರಾಗಿದ್ದ ಪ್ರಬಲ ಸಮುದಾಯದ ಬೈಂದೂರಿನ ಶಾಸಕ ಕೆ.ಗೋಪಾಲ ಪೂಜಾರಿಯವರನ್ನು ಈ ಬಾರಿಯ ಸಂಪುಟ ರಚನೆಯಲ್ಲಿ ಪರಿಗಣಿಸದೆ ಇರುವುದನ್ನು ನಾವು ಖಂಡಿಸುತ್ತಿರುವುದಾಗಿ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳಾದ ರಮೇಶ್ ಗಾಣಿಗ, ಸಂಪಿಗೇಡಿ ಸಂಜೀವ ಶೆಟ್ಟಿ, ಕೆ.ಪಿ.ಸಿ.ಸಿ ಸದಸ್ಯರುಗಳಾದ ಆಲೂರು ಮಂಜಯ್ಯ ಶೆಟ್ಟಿ, ಬಿಜೂರು ರಘುರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಎಸ್.ರಾಜೂ ಪೂಜಾರಿ, ಮದನಕುಮಾರ ಹಾಗೂ ತಾ.ಪಂ ಸದಸ್ಯ ರಾಜೂ ದೇವಾಡಿಗ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಸಂಕಷ್ಟ ಸಂದರ್ಭಗಳಲ್ಲಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ದುಡಿದಿರುವ, ಪಕ್ಷದ ಶಿಸ್ತಿನ ಸಿಪಾಯಿ, ಜಿಲ್ಲೆಯ ಹಿಂದುಳಿದ ವರ್ಗದ ನಾಯಕರಾಗಿರುವ ಶಾಸಕ ಗೋಪಾಲ ಪೂಜಾರಿಯವರನ್ನು ಮಂತ್ರಿ ಮಂಡಲಕ್ಕೆ ಪರಿಗಣಿಸದೆ ಇರುವ ಮೂಲಕ ಪಕ್ಷದ ಮುಖಂಡರುಗಳು ಸಾಮಾಜಿಕ ನ್ಯಾಯವನ್ನು ಕಡೆಗಣಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಈ ವರೆಗೂ ಕುಂದಾಪುರ ತಾಲ್ಲೂಕಿನಿಂದ ಆಯ್ಕೆಯಾಗಿರುವ ಶಾಸಕರಿಗೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡದೆ ತಾಲ್ಲೂಕಿನ ಜನತೆಗೆ ನಿರಂತರವಾಗಿ ದ್ರೋಹ ಬಗೆಯುತ್ತಿರುವ ಪಕ್ಷದ ಪ್ರಮುಖರ ಧೋರಣೆಗಳನ್ನು ನಾವು ಖಂಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಬಾರಿಯ ಪುನರ್‌ರಚನೆಯ ವೇಳೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಪ್ರತಾಪ್‌ಚಂದ್ರ ಶೆಟ್ಟಿಯವರನ್ನ ಅಥವಾ ಗೋಪಾಲ ಪೂಜಾರಿಯವರನ್ನು ಪರಿಗಣಿಸಬಹುದು ಎನ್ನುವ ನಿರೀಕ್ಷೆಗಳು ಇತ್ತು. ವಿಧಾನಪರಿಷತ್ ಸದಸ್ಯರಿಗೆ ಅವಕಾಶಗಳು ಕಡಿಮೆ ಎನ್ನುವ ಸುದ್ದಿಗಳು ಪಕ್ಷದ ವಲಯದಲ್ಲಿ ಬಂದಾಗ, ಗೋಪಾಲ ಪೂಜಾರಿಯವರಿಗೆ ಖಂಡಿತವಾಗಿಯೂ ಅವಕಾಶಗಳು ದೊರಕುತ್ತದೆ ಎನ್ನುವ ಕಾರ್ಯಕರ್ತರ ಹಾಗೂ ತಾಲ್ಲೂಕಿನ ಜನರಿಗೆ ಪಕ್ಷದ ತೀರ್ಮಾನಗಳು ಆಘಾತವನ್ನು ಉಂಟು ಮಾಡಿದೆ. ಪಕ್ಷದ ನಾಲ್ಕು ಅವಧಿಯ ಶಾಸಕರಾಗಿ ಹಾಗೂ ಕಷ್ಟ ಕಾಲದಲ್ಲಿ ಪಕ್ಷದ ಜಿಲ್ಲಾ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಶಾಸಕ ಗೋಪಾಲ ಪೂಜಾರಿಯವರಿಂದ ಪಕ್ಷಕ್ಕೆ ಯಾವ ದ್ರೋಹವಾಗಿದೆ ಎನ್ನುವುದನ್ನು ಪಕ್ಷದ ಪ್ರಮುಖರು ಜಿಲ್ಲೆಯ ಜನತೆಗೆ ಬಹಿರಂಗ ಪಡಿಸಬೇಕು ಎಂದು ಅವರುಗಳು ಒತ್ತಾಯಿಸಿದ್ದಾರೆ.

ಹಿಂದೆ ಎಸ್.ಎಂ ಕೃಷ್ಣ ಹಾಗೂ ಧರ್ಮಸಿಂಗ್ ಅವರುಗಳು ಮುಖ್ಯಮಂತ್ರಿಗಳಾಗಿದ್ದ ಸಂದರ್ಭಗಳಲ್ಲಿಯೂ ಶಾಸಕ ಗೋಪಾಲ ಪೂಜಾರಿಯವರಿಗೆ ಮಂತ್ರಿ ಸ್ಥಾನ ದೊರಕುತ್ತದೆ ಎನ್ನುವ ಆಶಾ ಭಾವನೆಗಳು ಜಿಲ್ಲೆಯ ಜನರಿಗೆ ಇತ್ತು. ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಸಂದರ್ಭಗಳಲ್ಲಿಯೂ ಅವರಿಗೆ ಮಂತ್ರಿಯಾಗುವ ಅವಕಾಶಗಳನ್ನು ನಿರಾಕರಿಸಲಾಗಿತ್ತು. ಈ ಬಾರಿ ಜಿಲ್ಲೆಯ ಹಿರಿಯ ಶಾಸಕರಾಗಿ ಅವರಿಗೆ ಸ್ಥಾನ ದೊರಕಬಹುದು ಎನ್ನುವ ನಿರೀಕ್ಷೆಗಳು ಇದೀಗ ಹುಸಿಯಾಗಿದೆ. ಈ ಕುರಿತು ಜಿಲ್ಲೆಯವರೇ ಆಗಿರುವ ಪಕ್ಷದ ರಾಷ್ಟ್ರೀಯ ಮುಖಂಡರು ಜಿಲ್ಲೆಯ ಜನರಿಗೆ ಸ್ವಷ್ಟನೆ ನೀಡಬೇಕು ಎಂದು ಆಗ್ರಹ.

ಶಾಸಕ ಗೋಪಾಲ ಪೂಜಾರಿಯವರಿಗೆ ಆಗಿರುವ ವಂಚನೆ ಹಾಗೂ ಅನ್ಯಾಯವನ್ನು ಖಂಡಿಸಿ, ಮುಂದೆ ಏನು ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ಧರಿಸಲು ಬುಧವಾರ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಪಕ್ಷದ ಪ್ರಮುಖರ, ಪದಾಧಿಕಾರಿಗಳ, ಜನಪ್ರತಿನಿಧಿಗಳ, ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಬರುವ ಸಾಮೂಹಿಕ ಅಭಿಪ್ರಾಯಗಳನ್ನು ಪರಿಗಣಿಸಿ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Comments are closed.