ಕರಾವಳಿ

ಉಡುಪಿಯಲ್ಲಿ ವಿ.ಎಸ್. ಉಗ್ರಪ್ಪ ಫುಲ್ ಗರಂ; ಎಸ್ಪಿ ಸೇರಿದಂತೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಉಗ್ರಪ್ಪ

Pinterest LinkedIn Tumblr

ಉಡುಪಿ: ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಪರಿಣಾಮಕಾರಿ ಕ್ರಮ ತೆಗೆದುಕೊಂಡಿಲ್ಲ ಎಂದು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ತಡೆ ಕುರಿತ ತಜ್ಞರ ಸಮಿತಿಯ ಅಧ್ಯಕ್ಷ  ವಿ.ಎಸ್‌. ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Udupi_Ugrappa_Meeting (4) Udupi_Ugrappa_Meeting (3) Udupi_Ugrappa_Meeting (2) Udupi_Ugrappa_Meeting (1)

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೌರ್ಜನ್ಯ ತಡೆಯಲು ಹಾಗೂ ಘಟನೆಗಳು ನಡೆದ ನಂತರ ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲಾಧಿ ಕಾರಿ ಅವರು ತಮ್ಮ ಪರಿಮಿತಿಯಲ್ಲಿ ಕಾನೂನುಗಳ ಬಗ್ಗೆ ಮಾಹಿತಿ ಹೊಂದಿ ದ್ದಾರೆ. ಉಳಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿಯೇ ಇಲ್ಲ ಎಂಬುದು ಅವರು ನೀಡಿದ ಉತ್ತರದಿಂದಲೇ ಗೊತ್ತಾಗುತ್ತದೆ ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅನ್ವಯ 84 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ಐದು ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಹೊರಬಿದ್ದಿದೆ. ಆದರೆ, ಕೇವಲ ಒಂದೇ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಈ ಕಾಯ್ದೆಯ ಅನ್ವಯ ಪ್ರಕರಣವೊಂದು ದಾಖಲಾದರೆ ಎಷ್ಟು ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕು ಹಾಗೂ ವಿಚಾರಣೆಯ ಅವಧಿ ಎಷ್ಟು ಎಂಬುದು ಸಹ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದು ಹೇಳಿದರು.

ಎಸ್ಪಿಗೆ ವಾರ್ನಿಂಗ್ ಮಾಡಿದ ಉಗ್ರಪ್ಪ….
ವಿಶಾಖ ಕಾನೂನಿನ ಪ್ರಕಾರ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಮಿತಿ ರಚಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಉಗ್ರಪ್ಪ ಅವರು ಎಸ್‌ಪಿ ಅಣ್ಣಾಮಲೈ ಅವರಿಗೆ ತಿಳಿಸಿದರು. ಜಿಲ್ಲಾಮಟ್ಟದಲ್ಲಿ ಸಮಿತಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅಣ್ಣಾಮಲೈ ಹೇಳಿದರು. ‘ಸ್ಥಳೀಯ ಮಟ್ಟದಲ್ಲಿ ಸಮಿತಿ ಯಾಕೆ ಮಾಡಿಲ್ಲ?’ ಎಂದು ಉಗ್ರಪ್ಪ ಪ್ರಶ್ನಿಸಿದರು. ‘ಕಾನೂನಿನಲ್ಲಿ ಪ್ರತೀ ಠಾಣೆಯಲ್ಲಿಯೂ ಸಮಿತಿ ರಚಿಸಲು ತಿಳಿಸಿಲ್ಲ. ಜಿಲ್ಲಾ ಮಟ್ಟದ ಸಮಿತಿಯೇ ಉತ್ತಮವಾಗಿ ನಿರ್ವಹಿಸುತ್ತಿದೆ. ದೇಶದ ಯಾವ ಭಾಗದಲ್ಲಿಯೂ ಸ್ಥಳೀಯವಾಗಿ ಸಮಿತಿ ಮಾಡಿಲ್ಲ’ ಎಂದು ಅಣ್ಣಾಮಲೈ ಉತ್ತರಿಸಿದರು. ಆಗ ಸಭೆಯಲ್ಲಿದ್ದ ಯುವಕರಿಬ್ಬರು ಚಪ್ಪಾಳೆ ಹೊಡೆದರು. ಇದು ಉಗ್ರಪ್ಪ ಅವರನ್ನು ಕೆರಳಿ ಸಿತು. ಯಾಕೆ ಚಪ್ಪಾಳೆ ಹೊಡೆದಿರಿ? ಎಂದು ಯುವಕರನ್ನು ಪ್ರಶ್ನಿಸಿದರು. ‘ಎಸ್‌ಪಿ ಅವರು ಹೇಳಿರುವುದು ಸರಿಯಾಗಿಯೇ ಇದೆ. ಖುಷಿ ಯಾಯಿತು. ಅದಕ್ಕೆ ಹೊಡೆದೆವು’ ಎಂದು ಯುವಕರು ಉತ್ತರಿಸಿದರು. ಆ ಯುವಕರನ್ನು ಕೂಡಲೇ ಕಸ್ಟಡಿಗೆ ತೆಗೆದು ಕೊಳ್ಳುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ ಹಿನ್ನೆಲೆ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಅನಂತರ ಎಸ್‌ಪಿ ಯವರು ಕ್ಷಮೆ ಯಾಚಿಸಿದರು

ದೆಹಲಿಯಲ್ಲಿ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ನಂತರ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಪರಿಹಾರ ಧನ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಜಿಲ್ಲೆಯಲ್ಲಿ 233 ಪ್ರಕರಣ ನಡೆದಿದ್ದು ಒಂದೇ ಒಂದು ಪ್ರಕರಣದಲ್ಲಿಯೂ ಪರಿಹಾರ ಧನ ನೀಡಿಲ್ಲ ಎಂದರು. ಅಪರಾಧ ಎಸಗಿದರೆ ಜೈಲು ಶಿಕ್ಷೆ ಕಾಯಂ ಎಂಬ ಮನೋಭಾವವನ್ನು ಸಮಾಜ ದಲ್ಲಿ ಮೂಡಿಸಬೇಕು. ಎಲ್ಲ ಪ್ರಕರಣ ಗಳಲ್ಲಿ ಆರೋಪಿಗಳು ಖುಲಾಸೆಯಾದರೆ ಅದರಿಂದ ಕೆಟ್ಟ ಸಂದೇಶ ಹೋಗುತ್ತದೆ. ಜಿಲ್ಲಾಧಿಕಾರಿ ಅವರು ತಮ್ಮ ಅಧಿಕಾರ ಬಳಸಿ ಎಲ್ಲ ಇಲಾಖೆಗಳನ್ನು ಸಕ್ರಿಯಗೊಳಿಸಬೇಕು ಎಂದರು.

ಸಮಿತಿ ಸದಸ್ಯರಾದ ಶರಣಪ್ಪ ಮಟ್ಟೂರು, ಮೋಟಮ್ಮ, ವಿನಿಶಾ ನೀರೊ, ಡಾ. ವಸುಂಧರಾ ಭೂಪತಿ, ಪ್ರಭಾ, ಎಚ್‌.ಆರ್‌. ರೇಣುಕಾ, ಕೆ.ಎಸ್‌. ವಿಮಲಾ, ಪ್ರಫುಲ್ಲಾ ಮಧುಕರ್‌ ಉಪಸ್ಥಿತರಿದ್ದರು.

Comments are closed.