ವರದಿ-ಯೋಗೀಶ್ ಕುಂಭಾಸಿ
ಕುಂದಾಪುರ: ಉಡುಪಿ ಕಡೆಯಿಂದ ವೇಗವಾಗಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರದ ಕೋಟೇಶ್ವರ ಸಮೀಪದ ಅಂಕದಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಕೋಟೇಶ್ವರ ನಿವಾಸಿ ಉಮೇಶ್ ಮಂಜ(54) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಇವರು ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು.

ಘಟನೆ ವಿವರ: ಹಲವು ವರ್ಷಗಳಿಂದ ದೇವಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತಿದ್ದ ಉಮೇಶ ಮಂಜ ಅವರು ನಿತ್ಯ ತಮ್ಮ ನಿವಾಸವಾದ ಕೋಟೆಶ್ವರದಿಂದ ಕುಂದಾಪುರದ ದೇವಸ್ಥಾನಕ್ಕೆ ಆರೇಳು ಕಿಲೋಮೀಟರ್ ನಡೆದು ಸಾಗುವ ಪರಿಪಾಠವನ್ನು ಹೊಂದಿದ್ದವರು. ನಿತ್ಯದಂತೆಯೇ ಮಂಗಳವಾರ ಮುಂಜಾನೆಯೂಕೂದ ಮನೆಯಿಂದ ಎದ್ದು ದೇವಸ್ಥಾನಕ್ಕೆ ನಡೆದು ತೆರಳುತ್ತಿದ್ದ ವೇಳೆ ಅಂಕದಕಟ್ಟೆ ಸಮೀಪ ಹಿಂಬದಿಯಿಂದ ಬಂದ ಇನ್ನೋವಾ ಕಾರು ಬಲವಾಗಿ ಡಿಕ್ಕಿಯಾಗಿ ಅಲ್ಲಿಂದ ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಮಂಜರು ಹೆದ್ದಾರಿಯಿಂದ ಸಮೀಪದ ಸರ್ವೀಸ್ ರಸ್ತೆಯಲ್ಲಿ ಬಿದ್ದಿದ್ದರು. ವಿಪರೀತ ರಕ್ತ ಸ್ರಾವವಾದ ಪರಿಣಾಮ ಮಂಜರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೇ ಮಾರ್ಗವಾಗಿ ಬೆಳಿಗ್ಗೆನ ಜಾವ ವಾಕಿಂಗ್ ತೆರಳುತ್ತಿದ್ದ ಮಂದಿ ಉಮೇಶ್ ಮಂಜರ ಮೃತದೇಹವನ್ನು ಕಂಡು ಸಂಬಂದಪಟ್ಟವರಿಗೆ ಫೋನಾಯಿಸಿ ವಿಚಾರ ತಿಳಿಸಿದ್ದಾರೆ.
ಪರಾರಿಯಾದ ಇನ್ನೋವಾ ಕಾರು:
ಮುಂಜಾನೆ ವೇಳೆ ಕತ್ತಲಿನಲ್ಲಿ ಪಾದಾಚಾರಿ ಉಮೇಶ್ ಮಂಜ ಅವರಿಗೆ ಡಿಕ್ಕಿ ಹೊಡೆದ ಇನ್ನೋವಾ ಕಾರು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದೆ. ಮೃತದೇಹ ಸಿಕ್ಕು ಗುರುತು ಹಿಡಿದ ಬಳಿಕ ಯಾವ ವಾಹನ ಡಿಕ್ಕಿಯಾಗಿತ್ತೆಂಬುದು ಯಾರಿಗೂ ತಿಳಿದಿಲ್ಲವಾದರೂ ವಾಹನದ ಮುಂಭಾಗದ ವಸ್ತುವೊಂದು ಸ್ಥಳದಲ್ಲಿ ದೊರಕಿದ್ದು ಮೇಲ್ನೋಟಕ್ಕೆ ಅದು ಇನ್ನೋವಾ ಕಾರಿನದ್ದಾಗಿದೆಯೆಂದು ಅಂದಾಜಿಸಲಾಗಿತ್ತು. ಅದರಂತೆಯೇ ಪೊಲೀಸರು ಸ್ಥಳಿಯರ ಸಹಕಾರದಲ್ಲಿ ಹುಡುಕಾಟ ನಡೆಸಿದ್ದರು.
ಹೆಮ್ಮಾಡಿಯಲ್ಲಿ ಸಿಕ್ಕ ಕಾರು:
ಯಾವುದೇ ಜಾಡು ಇಲ್ಲದೆಯೂ ಅಪರಿಚಿತ ವಾಹನವನ್ನು ತಪಾಸಣೆಗೈದು ವಶಕ್ಕೆ ಪಡೆಯುವುದು ಸಾಹಸವಾಗಿತ್ತು. ಸಿಕ್ಕ ಸಣ್ಣದೊಂದು ವಸ್ತುವಿನ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ತಾಲೂಕಿನ ಹೆಮ್ಮಾಡಿ ಸಮೀಪದ ಗ್ಯಾರೇಜೊಂದರಲ್ಲಿ ಇನ್ನೋವಾ ಕಾರು ಪತ್ತೆಯಾಗಿತ್ತು. ಮುಂಭಾಗದಲ್ಲಿ ನಜ್ಜುಗುಜ್ಜಾಗಿದ್ದ ಕಾರಿನ ಮುಂಭಾಗದ ತುಂಡೊದರ ವಸ್ತು ಅಂಕದಕಟ್ಟೆಯ ಅಪಘಾತ ನಡೆದ ಸ್ಥಳದಲ್ಲಿ ಸಿಕ್ಕ ವಸ್ತುವು ಒಂದೇ ಆಗಿದ್ದ ಕಾರಣ ಇನ್ನೋವಾ ಕಾರು ಅಪಘಾತ ನಡೆಸಿದ್ದೆಂದು ಖಾತ್ರಿಯಾಗಿತ್ತು. ಕೇರಳ ಮೂಲದ ನೊಂದಣಿ ಸಂಖ್ಯೆ ಹೊಂದಿರುವ ಕಾರನ್ನು ಹೆಮ್ಮಾಡಿಯಲ್ಲಿ ಬಿಟ್ಟ ಡ್ರೈವರ್ ಪರಾರಿಯಾಗಿದ್ದ. ಆತನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ.

ಅರ್ಚಕ, ಜ್ಯೋತಿಷಿಯಾಗಿದ್ದ ಉಮೇಶ್ ಮಂಜರು:
ಉಮೇಶ್ ಮಂಜರು ಕೋಟೇಶ್ವರ ಮಂಜರ ಮನೆತನದ ಸಹೋದರ ಪೈಕಿ ಓರ್ವರಾಗಿದ್ದು ಇತ್ತೀಚೆಗಷ್ಟೇ ಕೋಟೇಶ್ವರದಲ್ಲಿ ನೂತನ ಮನೆಯೊಂದನ್ನು ಕಟ್ಟಿಸಿ ಗೃಹಪ್ರವೇಶವನ್ನು ಮಾಡಿದ್ದರೆನ್ನಲಾಗಿದೆ. ವರ್ಷದಲ್ಲಿ ನಾಲ್ಕು ತಿಂಗಳುಗಳ ಕಾಲ ಕುಂದೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿಯೂ ಉಳಿದ ಸಮಯದಲ್ಲಿ ಜ್ಯೋತಿಷಿ ಹಾಗೂ ಜಾತಕ ನೋಡುವ ಕೆಲಸ ಮಾಡಿಕೊಂಡಿದ್ದರು. ಉಮೇಶ ಮಂಜರು ಪತ್ನಿ, ಇಬ್ಬರು ಪುತ್ರರು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಕುಂದಾಪುರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.