ಕರಾವಳಿ

ಕುವೈತ್‌ನಲ್ಲಿ ಪೂರ್ವಾನುಮತಿ ಪಡೆಯದೆ ಸತ್ಯನಾರಾಯಣ ಪೂಜೆ; ಬಂಧಿತ 11 ಜನ ಭಾರತೀಯರು ಇನ್ನೂ ಪೊಲೀಸ್ ವಶದಲ್ಲಿ

Pinterest LinkedIn Tumblr

jail

ಮಂಗಳೂರು, ನ.8: ಸತ್ಯನಾರಾಯಣ ಪೂಜೆಯಲ್ಲಿ ತೊಡಗಿದ್ದ 11 ಮಂದಿ ಭಾರತೀಯರು ಬಂಧಿತರಾಗಿದ್ದು ಸದ್ಯ ಅವರೆಲ್ಲ ಕುವೈತ್ ಪೊಲೀಸರ ವಶದಲ್ಲೇ ಇದ್ದಾರೆ.

ಹಿನ್ನೆಲೆ: ಕರಾವಳಿ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಈ ತಂಡ ಕಳೆದ 10 ವರ್ಷಗಳಿಂದಲೂ ಪ್ರತಿವರ್ಷ ಕುವೈತ್‌ನಲ್ಲಿ ಸತ್ಯನಾರಾಯಣ ಪೂಜೆ ಏರ್ಪಡಿಸುತ್ತಿದ್ದರು. ಅದರಂತೆ ಈ ಬಾರಿಯೂ (ಕಳೆದ 15 ದಿನಗಳ ಹಿಂದೆ) ಪೂಜೆ ಏರ್ಪಡಿಸಿದ್ದರು. ಆದರೆ ಈ ಬಾರಿ ಅವರು ತಮ್ಮ ಪೂಜಾ ಕಾರ್ಯಗಳಿಗಾಗಿ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 15 ದಿನಗಳಾದರೂ ಬಂಧಿತರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ.

ಸತ್ಯನಾರಾಯಣ ಪೂಜೆ ಸಂಘಟಿಸಿದ್ದ ಸಂದರ್ಭ ನೆರೆ ಹೊರೆಯವರು ನಮಗೆ ಡಿಸ್ಟರ್ಬ್ ಆಗುತ್ತಿದೆ ಎಂದು ದೂರು ನೀಡಿದ್ದರು. ಹಾಗಾಗಿ ಅವರನ್ನು ಪ್ರಶ್ನಿಸಲು ಪೊಲೀಸರು ವಶಕ್ಕೆ ಪಡೆದಿದ್ದರು. ಅವರೆಲ್ಲ ಪೊಲೀಸ್ ವಶದಲ್ಲೇ ಇದ್ದಾರೆ ಎಂದು ಕುವೈತ್‌ನ ಭಾರತ ರಾಯಭಾರಿ ಸುನೀಲ್‌ಜೈನ್ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಸಂಸದೆ ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು) ಅವರು ರಾಯಭಾರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಕುವೈತ್ ಅಧಿಕಾರಿಗಳು ಈ ಕುರಿತಂತೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

Write A Comment