ಕರಾವಳಿ

APMC ಶೋಷಣೆ ! ರೈತರ ರಕ್ತ ಹೀರುತ್ತಿರುವ ಅಧಿಕಾರಿಗಳು; ರಕ್ಷಿಸುವಂತೆ ಕಣ್ಣೀರು ಹಾಕುತ್ತಿರುವ ಅನ್ನದಾತ (ವಿಶೇಷ ವರದಿ)

Pinterest LinkedIn Tumblr

APMC2444

(ಸಾಂದರ್ಭಿಕ ಚಿತ್ರ)

ವರದಿ: ವಿಜಯಲಕ್ಷ್ಮಿ ಶಿಬರೂರು(ಸುವರ್ಣ ನ್ಯೂಸ್​)

ಅನ್ನದಾತ ಕಣ್ಣೀರು ಹಾಕ್ತಿದ್ದಾನೆ. ಹತಾಶನಾಗಿ ಅಳುತ್ತಿದ್ದಾನೆ. ನಮ್ಮನ್ನು ರಕ್ಷಿಸಿ……ರಕ್ಷಿಸೀ ಅಂತ ಸಿಎಂ ಸಿದ್ದರಾಮಯ್ಯ ಅವರಲ್ಲಿ ಪರಿಪರಿಯಾಗಿ ಬೇಡುತ್ತಿದ್ದಾನೆ. ಮುಖ್ಯಮಂತ್ರಿಗಳಲ್ಲಿ ಅನ್ನದಾತನ ಬೇಡಿಕೆ ಏನು ಗೊತ್ತಾ? ರೈತರನ್ನ ರಕ್ಷಿಸಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ರಕ್ಕಸ ರೂಪ ತಾಳಿದೆ. ಭಯಾನಕ ಮಾಫಿಯಾವೊಂದನ್ನ ಪೋಷಿಸಿ ಬೆಳೆದ ಬೆಳೆಗೆ ಬೆಲೆ ಸಿಗದ ಹಾಗೆ ಮಾಡ್ತಿದೆ. ಹಾಗಾಗಿ ಅದರಿಂದ ತಮ್ಮನ್ನ ರಕ್ಷಿಸಿ ಅಂತ ಅಂಗಾಲಾಚುತ್ತಿದ್ದಾರೆ.

ಅಧಿಕಾರಿಗಳೇ ಮಾಫಿಯಾ ಪೋಷಕರು !:
ರೈತರ ರಕ್ತ ಹೀರುತ್ತಿರೋ ಈ ಮಾಫಿಯಾವನ್ನು ಎಪಿಎಂಸಿ ಅಧಿಕಾರಿಗಳೇ ಪೋಷಿಸುತ್ತಿದ್ದಾರೆ.ಅವರ ನೇತೃತ್ವದಲ್ಲೇ ಆ ಮಾಫಿಯಾ ರೈತರ ಮೇಲೆ ದೌರ್ಜನ್ಯ ಎಸಗುತ್ತಿದೆ ಅನ್ನೋದು ರೈತರ ನೇರ ಆರೋಪ. ಹಾಗಾದ್ರೆ ಅನ್ನದಾತನ ಸಾವಿಗೆ ಮುನ್ನುಡಿ ಬರೆಯುತ್ತಿರೋ ಆ ಮಾಫಿಯಾ ಯಾವುದು? ಅದರ ಕರಾಳತೆ ಏನು? ಅದು ಮಾಡುತ್ತಿರೋ ದಂಧೆಯಾದ್ರು ಏನು ಅಂತ ತಿಳಿಯಲು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ರಾಜ್ಯದ ನಾನಾ ಭಾಗಗಳ ಎಪಿಎಂಸಿಗೆ ಲಗ್ಗೆ ಇಟ್ಟು ಅಧ್ಯಯನ ನಡೆಸಿತು. ಮಾಫಿಯಾದ ಹೆಜ್ಜೆ ಗುರುತುಗಳನ್ನ ಪತ್ತೆ ಹಚ್ಚಲು ಹಗಲು ರಾತ್ರಿಯೆನ್ನದೆ ರಹಸ್ಯ ಕಾರ್ಯಾಚರಣೆ ಮಾಡಿತು. ನಮ್ಮ ನಿರಂತರ ಶ್ರಮದ ಫಲವಾಗಿ ಎಪಿಎಂಸಿಯಲ್ಲಿ ನಡೆಯುತ್ತಿರೋ ಒಂದೊಂದೇ ಕರಾಳ ದಂಧೆಗಳ ಭಯಾನಕ ಮುಖಗಳು ಬಯಲಾಗ್ತಾ ಹೋದವು.

ಅಧಿಕಾರಿಗಳಿಗಿದೆ ಅಪವಿತ್ರ ಮೈತ್ರಿ !:

ನಾವು ನಮ್ಮ ರಹಸ್ಯ ಕಾರ್ಯಾಚರಣೆಯನ್ನು ಬರದ ನಾಡು ಕೋಲಾರ ಜಿಲ್ಲೆಯಿಂದಲೇ ಪ್ರಾರಂಭಿಸಿದ್ವಿ. ಇಲ್ಲಿನ ರೈತ ಬರದ ಬೇಗೆಯಲ್ಲೂ ಬೋರ್​ ಕೊರೆದು, ಟೊಮೆಟೋ, ತರಕಾರಿ ಬೆಳೆದು ಮಾರುಕಟ್ಟೆಗೆ ತಂದ್ರೆ, ಆತನ ಬಂಗಾರದಂಥಾ ಬೆಳೆಗೆ ಚಿಕ್ಕಾಸೂ ಬೆಲೆ ಇಲ್ಲದಂತೆ ಹರಾಜು ಹಾಕ್ತಾರೆ. ನಮ್ಮ ಕಣ್ಣಮುಂದೆಯೇ 15 ಕೆ.ಜಿಯ ಒಂದು ಟೊಮೆಟೋ ಬಾಕ್ಸನ್ನ ಬರೀ 40 ರೂಪಾಯಿಗೆ ಹರಾಜು ಕೂಗಿದ್ರು. ಅದೂ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇರುವಾಗ. ಎಂಥಾ ಅನ್ಯಾಯ ನೋಡಿ. ಇಲ್ಲಿ ವರ್ತಕರ ಹಾಗೂ ಅಧಿಕಾರಿಗಳ ನಡುವಿನ ಅಪವಿತ್ರ ಮೈತ್ರಿ ಇದೆ. ಎಪಿಎಂಸಿ ಅಧಿಕಾರಿಗಳು ವರ್ತಕರ ಕೈ ಗೊಂಬೆಯಾಗಿದ್ದಾರೆ. ಇದೇ ರೈತರ ಕೊರಳಿಗೆ ಉರುಳಾಗಿರೋದು. ಇಲ್ಲಿ ವರ್ತಕರು ತಮಗೆ ಅನುಕೂಲ ಆಗೋ ರೀತಿಯಲ್ಲಿ ಬೆಲೆ ಕಟ್ತಾ ಹೋಗ್ತಾರೆ. ಎಪಿಎಂಸಿಯಲ್ಲಿ ತರಕಾರಿ ರೈತನ ದನಿಗೆ ಬೆಲೆಯೇ ಇಲ್ಲ. ಮೊದಲೇ ತರಕಾರಿ… ಕೊಳೆಯೋ ವಸ್ತು. ಹಾಗಾಗಿ ರೈತ ಹೆಚ್ಚು ರಿಸ್ಕ್​ ತೆಗೆದುಕೊಳ್ಳುವ ಹಾಗೂ ಇಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅಂತ ತಿಳ್ಕೊಂಡು ಎದೆ ತುಂಬಾ ನೋವು, ಕಣ್ಣಂಚಿನಲ್ಲಿ ನೀರು ಹೊತ್ತು ಹತಾಶನಾಗಿ ಮಾಲು ಮಾರಿ ಬರ್ತಾನೆ.

ಭರ್ಜರಿ ಕಮಿಷನ್ ಮಾಫಿಯಾ!:

ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನ ರೈತರ ಅನುಕೂಲಕ್ಕಾಗಿ ಸ್ಥಾಪಸಿದೆ. ಇಲ್ಲಿ ರೈತನೇ ರಾಜ. ಆತ ಬೆಳೆದ ಬೆಳೆಗೆ ಕಮಿಷನ್​ ಕಾಟ ಇಲ್ಲದೆ ಸರಿಯಾದ ಬೆಲೆ ಸಿಗಬೇಕು ಅನ್ನೋ ಮಹದುದ್ದೇಶದಿಂದ ಎಪಿಎಂಸಿಯನ್ನ ಸ್ಥಾಪಸಲಾಗಿದೆ. ಕಮಿಷನ್​ ಪಡೆಯೋದು ಇಲ್ಲಿ ಶಿಕ್ಷಾರ್ಹ ಅಪರಾಧ. ಆದ್ರೆ ರಾಜ್ಯದ ಹೆಚ್ಚಿನ ಎಲ್ಲಾ ಎಪಿಎಂಸಿ ಕಮಿಷನ್​ ಮಾಫಿಯಾದ ಕಪಿಮುಷ್ಟಿಯಲ್ಲಿದೆ. ಇದಕ್ಕೆ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯೂ ಹೊರತಾಗಿಲ್ಲ. ಇಲ್ಲಿಯೂ ಭರ್ಜರಿ ಕಮಿಷನ್​ ದಂಧೆ ನಡೀತಿದೆ ಇದನ್ನ ರೈತರೇ ಒಪ್ಪಿಕೊಳ್ತಾರೆ. ಇದಕ್ಕೆ ಪೂರಕವಾದ ಸಾಕ್ಷಿಗಳೂ ನಮಗೆ ಸಿಕ್ಕಿವೆ. ರೈತರಿಗೆ ವರ್ತಕರು ನೀಡಿರೋ ಬಿಲ್ಲುಗಳಲ್ಲೇ 10 ಕಮಿಷನ್​ ನಮೂದಿಸಲಾಗಿದೆ. ವರ್ತಕರು ಖರೀದಿದಾರರಿಂದ ವಸೂಲಿ ಮಾಡಬೇಕಾದ ತೆರಿಗೆ ಹಾಗೂ ಎಪಿಎಂಸಿ ಆವರ್ತನಿಧಿಯ ಹಣವನ್ನು ರೈತನಿಂದಲೇ​ ಪಡೀತ್ತಿದ್ದಾರೆ. ಇದು ಕಾನೂನು ಬಾಹಿರ. ಆದ್ರೆ ಎಪಿಎಂಸಿಗಳಲ್ಲಿಲ್ಲಿ ಕಮಿಷನ್​ ಪಡೆಯೋದು ಮಾಮೂಲು. ಇದು ಡಿ.ಸಿಯಿಂದ ಹಿಡಿದು ಸಚಿವರವರೆಗೆ ಎಲ್ಲರಿಗೂ ಗೊತ್ತು ಅಂತಾರೆ ಕೋಲಾರ ಎಪಿಎಂಸಿ ಕಾರ್ಯದರ್ಶಿ ನಾರಾಯಣ ಸ್ವಾಮಿ. ಪರಿಸ್ಥಿತಿ ಹೀಗಿರಬೇಕಾದ್ರೆ, ಅನ್ನದಾತನನ್ನ ಈ ಮಾಫಿಯಾದಿಂದ ರಕ್ಷಿಸುವವರು ಯಾರು ಹೇಳಿ?

APMC1

ಕೋಲಾರದ ರೈತನ ನೋವು ಆಲಿಸಿ ನಾವು ಬೆಂಗಳೂರಿನ ಎಪಿಎಂಸಿ ಯಾರ್ಡ್​ನ ತರಕಾರಿ ಮಾರುಕಟ್ಟೆಗೆ ಎಂಟ್ರಿ ಕೊಟ್ರೆ ಭಯಾನಕವಾದ ದೃಶ್ಯಗಳು ನಮ್ಮನ್ನ ಸ್ವಾಗತಿಸಿದವು. ಇಲ್ಲಿನ ರಸ್ತೆಗಳು ಕೊಳಚೆ ಗುಂಡಿಗಳಾಗಿದ್ದವು. ಆ ಕೊಳಚೆಯಲ್ಲೇ ತರಕಾರಿ ಮೂಟೆ ಇಟ್ಟು ಮಾರಲಾಗುತ್ತಿದೆ. ಇಲ್ಲಿ ರೈತನಿಗೆ ವಿಶ್ರಾಂತಿ ಪಡೆಯಲು ಜಾಗವೇ ಇಲ್ಲ. ಇಲ್ಲಿನ ವರ್ತಕರು ಸರ್ಕಾರಕ್ಕೆ ಅಷ್ಟೊಂದು ತೆರಿಗೆ ಪಾವತಿಸುತ್ತಿದ್ರೂ ಅಲ್ಲಿ ಯಾವ ವ್ಯವಸ್ಥೆಯೂ ಇಲ್ಲ. ಅದೊಂದು ಅವ್ಯವಸ್ಥೆಯ ಆಗರ.

ತರಕಾರಿಗೂ ತಟ್ಟಿದೆ ಶಾಪ !:

ಇಲ್ಲೇನಾದ್ರೂ ಕಮಿಷನ್​ ಮಾಫಿಯಾದ ಹಾವಳಿ ಇದೆಯಾ ಅಂತ ಚೆಕ್​​ ಮಾಡುತ್ತಾ ಸಾಗಿದೆವು. ಆಗ ನಮಗೆ ತರಕಾರಿ ವರ್ತಕರ ಸಂಘದ ಕಾರ್ಯದರ್ಶಿಗಳು ಸಿಕ್ರು ಅವರು ಇಲ್ಲಿ ಕಮಿಷನ್​ ದಂಧೆ ಇಲ್ಲವೇ ಇಲ್ಲ ಅಂತ ವಾದಿಸಿದ್ರು. ಆದ್ರೆ ಕಮಿಷನ್ ದಂಧೆ ಭರ್ಜರಿಯಾಗಿದೆ ಅನ್ನೋದನ್ನ ರೈತರೇ ಓಪನ್​ ಆಗಿ ಹೇಳ್ತಾರೆ. ಅಲ್ಲದೆ ಇದು ನಾವು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲೂ ಇದು ಬಯಲಾಯ್ತು ವರ್ಷ ಇಡೀ ಕಷ್ಟಪಟ್ಟು ದುಡಿದು ಫಲ ಪಡೆದು ಅದನ್ನ ದೂರದೂರಿನಿಂದ ಹೊತ್ತು ಮಾರುಕಟ್ಟೆಗೆ ತಂದ್ರೆ, ಇಲ್ಲಿ ರೈತನಿಂದಲೇ ಕಮಿಷನ್​ ಪಡೆದು ಶೋಷಿಸಲಾಗುತ್ತೆ. ಇದು ಎಂಥಾ ನ್ಯಾಯ ಮುಖ್ಯಮಂತ್ರಿಗಳೇ.

ನಮ್ಮ ಮುಂದಿನ ಟಾರ್ಗೆಟ್​ ಇದ್ದಿದ್ದು ಬೆಂಗಳೂರಿನ ಈರುಳ್ಳಿ, ಆಲೂಗಡ್ಡೆ, ಅಕ್ಕಿ ಇತರ ದವಸ ಧಾನ್ಯಗಳ ಮಾರುಕಟ್ಟೆ. ಈ ಮಾರುಕಟ್ಟೆಯೊಳಗೆ ಎಂಟ್ರಿ ಹೋಡೀತ್ತಿದ್ದ ಹಾಗೆ ನಮಗೆ ಶಾಕ್​ ಕಾದಿತ್ತು. ಇಲ್ಲಿ ಮಾರುಕಟ್ಟೆಯೊಳಗೆ ಎಂಟ್ರಿ ಹೊಡೆಯೋದು ಬಿಡಿ ಅದರ ಹತ್ತಿರದ ರಸ್ತೆಗೂ ಹೋಗೇಕೆ ಸಾಧ್ಯ ಆಗ್ಲಿಲ್ಲ. ಯಾಕಂದ್ರೆ ಇಡೀ ಎಪಿಎಂಸಿ ಯಾರ್ಡ್​ನಲ್ಲಿ ಟ್ರಾಫಿಕ್​ ಜಾಮಾಗಿತ್ತು. ಇದಕ್ಕೆ ಕಾರಣ ಏನು ಅಂತ ತಿಳಿಯ ಹೊರಟ ನಮಗೆ ಗೊತ್ತಾಯ್ತು ಅದು ಮಂಡಿ ಮಾಫಿಯಾ ಎಫೆಕ್ಟ್​ ಅಂತ. ಆಲೂಗಡ್ಡೆ, ಈರುಳ್ಳಿ ಹಾಗೂ ಇತರ ತರಕಾರಿಗಾಗಿ ಸರ್ಕಾರ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ದಾಸನಾಪುರದಲ್ಲಿ ಸುಸಜ್ಜಿತವಾದ ಕೃಷಿ ಮಾರುಕಟ್ಟೆ ಸ್ಥಾಪಿಸಿದೆ. ಆದ್ರೆ ಅಲ್ಲಿಗೆ ಈ ಮಾರುಕಟ್ಟೆಯನ್ನ ಸ್ಥಳಾಂತರಿಸಲು ಎಪಿಎಂಸಿ ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದಕ್ಕೆ ಕಾರಣ ಹಳೇ ವರ್ತಕರು ಮತ್ತು ಹೊಸ ವರ್ತಕರ ನಡುವಿನ ಹಗ್ಗಜಗ್ಗಾಟ. ಮಂಡಿ ಮಾಫಿಯಾದ ಅಬ್ಬರದಿಂದ ರೈತರು ತಮ್ಮ ಬೆಳೆಯನ್ನ ದಿನಗಟ್ಟಲೆ ರಸ್ತೆಯಲ್ಲೇ ಇಟ್ಟುಕೊಂಡು ಹಾಳುಮಾಡಬೇಕಾಗಿದೆ. ಅಲ್ಲದೆ ಬೆಳೆಯನ್ನ ತೂಕವೇ ಮಾಡಲಾಗದೆ ಮೋಸ ಹೋಗ್ತಿದ್ದಾರೆ.

APMC

‘ಕೈ’, ‘ನೋಟು’ಗಳದ್ದೇ ದರ್ಬಾರು !:

ಇನ್ನು ಕಷ್ಟಪಟ್ಟು ಮಾರುಕಟ್ಟೆಯೊಳಗೆ ಎಂಟ್ರಿ ಪಡೆದ ನಮಗೆ ಮತ್ತೊಂದು ವಿಚಿತ್ರ ಮಾಫಿಯಾದ ಪರಿಚಯ ಆಯ್ತು. ಅದುವೇ ‘ಕೈ’ ಮಾಫಿಯಾ. ಯಸ್, ಈ ಮಾಫಿಯಾದ ಬಣ್ಣ ಬಯಲು ಮಾಡಲು ರಹಸ್ಯ ಕಾರ್ಯಾಚರಣೆಗಿಳಿದ್ವಿ. ಖರೀದಿದಾರರ ವೇಷದಲ್ಲಿ ಈರಳ್ಳಿ ಮಂಡಿಗೆ ತೆರಳಿ ಹರಾಜಲ್ಲಿ ಭಾಗವಹಿಸಿದ್ವಿ. ನಾವು ಎನ್​.ಆರ್​ ಏಜೆನ್ಸಿ ಮತ್ತು ವಾಣಿ ಟ್ರೇಡಿಂಗ್​ ಕಂಪೆನಿಗೆ ತೆರಳಿ, ಮೂರು ಮೂಟೆ ಈರುಳ್ಳಿಗೆ ಬೇಡಿಕೆ ಇಟ್ವಿ. ಅಲ್ಲಿ ಒಬ್ರು 10 ಕೈ ತನ್ನದು ಅಂದ್ರೆ ಇನ್ನೊಬ್ರು 20 ಕೈ ಅಂದ್ರು. ಅಷ್ಟು ಕಮಿಷನ್​ ಫಿಕ್ಸ್​ ಮಾಡಿ ಈರುಳ್ಳಿ ಖರೀದಿಸಿದ್ವಿ. ಇವರ ಕೈ ವ್ಯವಹಾರ ನಮಗೆ ಸಿಕ್ಕ ಬಿಲ್ಲಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತೆ. ‘ಕೈ’ ಅನ್ನೋದು ವರ್ತಕರ ಸೀಕ್ರೆಟ್​ ಕೋಡ್​. ಒಂದು ಕೈ ಅಂದ್ರೆ 5 ರೂಪಾಯಿ. ಇನ್ನು ಕೆಲವರು ನೋಟು ಅಂತಾರೆ. ಒಂದು ನೋಟು ಅಂದ್ರೆ 100 ರೂಪಾಯಿ. ಈ ವರ್ತಕರು ಮೊದಲೇ ಫಿಕ್ಸ್​ ಮಾಡಿಕೊಂಡು ಹಾರಾಜಾಗುವಾಗ ಮೂಟೆಗೆ ನೂರು ರೂಪಾಯಿ ಕಡಿಮೆ ಬೆಲೆ ಕಟ್ತಾರೆ. ಅಂದ್ರೆ ಒಂದು ಲೋಡಿಗೆ ಕನಿಷ್ಟ ಅಂದ್ರು ರೈತನಿಂದ 25000 ರೂಪಾಯಿ ಲೂಟಿ ಹೊಡಿತಾರೆ. ಹಾಗಾದ್ರೆ ಇವರ ಲೂಟಿಯ ಪ್ರಮಾಣ ಎಷ್ಟಿದೆ ಅನ್ನೋದನ್ನ ನೀವೇ ಅಂದಾಚಿಸಿ.

ಬಿಳಿ ಚೀಟಿ ಮಾಫಿಯಾ !:

ಬಿಳಿ ಚೀಟಿ ವ್ಯವಹಾರ ಅಂದ್ರೆ, ವ್ಯಾಪಾರಸ್ಥರು ಎಪಿಎಂಸಿ ಕೊಡೋ ಬಿಲ್ಲನ್ನ ರೈತನಿಗೆ ಕೊಡದೆ ಬಿಳಿ ಚೀಟಿಯಲ್ಲಿ ಲೆಕ್ಕ ಬರೆದು ಕೊಡ್ತಾರೆ. ಇದು ತೆರಿಗೆ ವಂಚನೆ ಮಾಡೋ ವರ್ತಕರು ಅನುಸರಿಸುತ್ತಿರೋ ಅಕ್ರಮ ದಾರಿ. ಈ ಅಕ್ರಮ ವ್ಯವಹಾರ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತೆ. ತಾವು ಮಾಡೋ ವ್ಯವಹಾರದ ಶೇಕಡಾ 50 ರಷ್ಟನ್ನ ಮಾತ್ರ ತೋರಿಸಿ ಸರ್ಕಾರಕ್ಕೆ ಭಾರೀ ಮೋಸ ಮಾಡ್ತಿದ್ದಾರೆ. ಇಲ್ಲಿನ ಶೇಕಡಾ 10ರಷ್ಟು ಮಂದಿ ಪ್ರಾಮಾಣಿಕವಾಗಿ ವ್ಯವಹಾರ ಮಾಡಿದ್ರೆ ಉಳಿದೆಲ್ಲರೂ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡ್ತಿದ್ದಾರೆ. ಇದು ಬೆಂಗಳೂರು ಮಾತ್ರವಲ್ಲ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕಪ್ಪ ಅವರ ಜಿಲ್ಲೆ ದಾವಣಗೆರೆ ಸೇರಿದಂತೆ ಹೆಚ್ಚಿನ ಎಲ್ಲಾ ಎಪಿಎಂಸಿಗಳಲ್ಲೂ ಭಾರೀ ವಂಚನೆ ನಡೀತಿದೆ. ಈ ರೀತಿ ಒಂದು ಕಡೆ ಸರ್ಕಾರಕ್ಕೆ ಇನ್ನೊಂದು ಕಡೆ ರೈತನಿಗೆ ಮೋಸ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಎಪಿಎಂಸಿ ಅಧಿಕಾರಿಗಳ ನೇರ ಕೈವಾಡ ಇದೆ.

ಈಗಲಾದ್ರೂ ಗೊತ್ತಾಯ್ತಾ? ರೈತನ ಹತಾಶೆಯ ಮೂಲ ಎಲ್ಲಿದೆ? ರೈತನ ಸಾವಿಗೆ ಪ್ರೇರಣೆ ಎಲ್ಲಿಂದ ಸಿಗುತ್ತೆ ಅಂತ. ಸರ್ಕಾರದ ಸಂಸ್ಥೆಯಲ್ಲೇ ರೈತನಿಗೆ ಇಷ್ಟೊಂದು ಮೋಸ ನಡೀತಿದ್ರೂ ನಮ್ಮ ತೋಟಗಾರಿಕಾ ಸಚಿವರು ನೆಮ್ಮದಿಯಾಗಿದ್ದಾರೆ. ಅಧಿಕಾರಿಗಳೋ ಮಾಫಿಯಾ ಜೊತೆ ಕೈಜೋಡಿಸಿ ಭರ್ಜರಿ ಲೂಟಿಯಲ್ಲಿ ತೊಡಗಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳೇ ಈ ಕಮಿಷನ್ ಮಾಫಿಯಾಕ್ಕೆ ಬ್ರೇಕ್ ಹಾಕಲು ಕಠಿಣ ಕ್ರಮಕೈಗೊಳ್ಳಬೇಕು. ಅನ್ನದಾತನ ಕಣ್ಣೀರಿ ಒರೆಸಬೇಕು.

Write A Comment