ಕರಾವಳಿ

ಚಿದು ಬರೆಯುವ ಪ.ಗೋ ಸರಣಿ -9: ನಿವೇಶನ ಮಂಜೂರಾತಿ ಪತ್ರ ಓದಿ ಕೆಂಡಾಮಂಡಲ

Pinterest LinkedIn Tumblr

photo4 004

ಪ.ಗೋ ಹಠಕ್ಕೆ ಬಿದ್ದರೆ ಮಹಾ ಹಠಮಾರಿ. ಅವರ ಈ ಗುಣದಿಂದಾಗಿಯೇ ಅವರು ಏನಾದರೂ ಮುಚ್ಚುಮರೆ ಇಲ್ಲದೆ ಹೇಳಿಬಿಡಬೇಕು. ಕದ್ದುಮುಚ್ಚಿ ಮರೆ ಮಾಚುವ ಸುಳಿವು ಸಿಕ್ಕಿದರೆ ಮುಚ್ಚಿದವನು ಮಲಗಿದರೂ ಪ.ಗೋ ಮಲಗುವರಲ್ಲ ಅಂಥ ಹಠವಾದಿ. ಹಾಗೆಂದು ನಿರ್ಲಿಪ್ತವಾಗಿಯೂ ಇರಲು ಗೊತ್ತು. ಆದ್ದರಿಂದಲೇ ಪ.ಗೋ ಅವರನ್ನು ನಿರ್ಧಿಷ್ಟವಾಗಿ ಹೀಗೆಯೇ ಎಂದು ಹೇಳುವಂತಿರಲಿಲ್ಲ.

ಪತ್ರಕರ್ತರು ಅಸಾಮಾನ್ಯರು ಅಂದುಕೊಂಡಿದ್ದರೂ ಪ.ಗೋ ಮಾತ್ರ ಹಾಗೆ ಹೇಳುತ್ತಿರಲಿಲ್ಲ ಅಥವಾ ಕಾನೂನು ಮುರಿಯುವ ಮಾತನಾಡುತ್ತಿರಲಿಲ್ಲ. ಆದರೆ ಕಾನೂನು ಮುರಿಯಲು ತೀರ್ಮಾನಿಸಿದರೆ ಅವರನ್ನು ತಡೆಯುವುದು ಸಾಧ್ಯವೂ ಇರುತ್ತಿರಲಿಲ್ಲ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 1970ರ ದಶಕದಿಂದಲೇ ಅಸ್ತಿತ್ವದಲ್ಲಿತ್ತು. ವಡ್ಡರ್ಸೆ ರಘುರಾಮ ಶೆಟ್ಟರು ಬೆಂಗಳೂರಲ್ಲಿ ಠಿಕಾಣಿ ಹೂಡಿದ ಮೇಲೆ ಮಂಗಳೂರಲ್ಲಿ ಪತ್ರಕರ್ತರ ಸಮ್ಮೇಳನ ನಡೆದಿತ್ತು. ಆಗ ಪ.ಗೋ, ನರಸಿಂಹರಾವ್, ಮಯ್ಯ ಅವರೇ ನಾಯಕರು. ಆದ್ದರಿಂದ ಈ ಸಂಘಕ್ಕೆ ಇತಿಹಾಸವಿದೆ.

ಅಂಥ ಸಂಘಕ್ಕೆ ಯು.ನರಸಿಂಹ ರಾವ್ ಅಧ್ಯಕ್ಷರಾದರು, ನಾನು ಪ್ರಧಾನ ಕಾರ್ಯದರ್ಶಿಯಾದೆ. ಸಂಘಕ್ಕೆ ಸ್ವಂತ ಕಟ್ಟಡ ಆಗಬೇಕು ಎನ್ನುವ ಯೋಚನೆ ಬಂದಾಗ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿದ್ದ ಡಾ.ಸಿ.ಕೆ. ಬಂಟ್ವಾಳ್, ಪ್ರತಿಪಕ್ಷದ ನಾಯಕ ಕೆ.ನಾರಾಯಣ ಶೆಟ್ಟಿ, ಆಗ ಪಾಲಿಕೆ ಸದಸ್ಯರಾಗಿದ್ದ ಎನ್.ಯೋಗೀಶ್ ಭಟ್, ಶಾಸಕರಾಗಿದ್ದ ಬ್ಲೇಸಿಯಸ್ ಡಿ ಸೋಜ ಸಹಿತ ಎಲ್ಲರೂ ಬೆಂಬಲಿಸಿದರು.

ಮೂರು ನಾಲ್ಕು ಸ್ಥಳಗಳನ್ನು ಮೇಯರ್ ಮುತುವರ್ಜಿ ವಹಿಸಿ ಗುರುತಿಸಿ ನಮಗೆ ತಿಳಿಸಿ ನಿಮಗೆ ಯಾವುದು ಸೂಕ್ತವೆನ್ನುವುದನ್ನು ತಿಳಿಸಿದರೆ ಅದನ್ನು ಮಂಜೂರು ಮಾಡಿಸಿಕೊಡುವ ಭರವಸೆ ಕೊಟ್ಟಿದ್ದರು.

ಅವರು ಸೂಚಿಸಿದ ನಿವೇಶನಗಳ ಪೈಕಿ ನಮಗೆ ಹೆಚ್ಚು ಸೂಕ್ತವಾದ ಸ್ಥಳ ಈಗ ಪ್ರೆಸ್ ಪತ್ರಿಕಾಭವನ ಇರುವ ಸ್ಥಳ ಗಾಂಧಿನಗರದಲ್ಲಿರುವುದು. ಇದರ ಜೊತೆಗೇ ಮಣ್ಣಗುಡ್ಡೆಯಲ್ಲಿ ಕಾರ್ನರ್ ಸೈಟಿತ್ತು. ಅದು ಬೇಡವೆನ್ನುವ ತೀರ್ಮಾನಕ್ಕೆ ಬಂದೆವು. ಪಾಲಿಕೆ ಕಚೇರಿ, ಡಿಸಿ ಆಫೀಸ್, ನಿವೇಶನಕ್ಕೆ ಎಡತಾಕಲು ನಮ್ಮಲ್ಲಿ ಯಾರಲ್ಲೂ ವಾಹನವಿರಲಿಲ್ಲ. ಪ.ಗೋ ಅವರ ಸ್ಕೂಟರ್ ಏಕೈಕ ವಾಹನ. ನಾನು ಪ.ಗೋ ಸ್ಕೂಟರ್ ನಲ್ಲಿ ಬಂದರೆ ನರಸಿಂಹರಾವ್ ಮತ್ತು ರಾಮಚಂದ್ರರಾವ್ ರಿಕ್ಷಾ ಹಿಡಿದು ಬರುತ್ತಿದ್ದರು. ಮಯ್ಯರ ಮನೆ ಗಾಂಧಿನಗರದಲ್ಲೇ ಇತ್ತು. ಆಗ ಅವರು ಅವರ ಅಳಿಯ ಸಿಂಡಿಕೇಟ್ ಬ್ಯಾಂಕ್ ನಲ್ಲಿದ್ದ ಕಾರಣ ಅವರಿದ್ದ ಮನೆಯಲ್ಲೇ ಇವರ ವಾಸಕೂಡಾ. ಆದ್ದರಿಂದ ಮಯ್ಯ ಕೂಗಳತೆಯ ದೂರದಲ್ಲಿದ್ದ ಕಾರಣ ಸಮಸ್ಯೆ ಇರುತ್ತಿರಲಿಲ್ಲ.

ಗಾಂಧಿನಗರದ ನಿವೇಶನದ ಮೇಲೆ ಮಂಗಳೂರು ಮಹಾನಗರಪಾಲಿಕೆ ನೌಕರರ ಸಂಘದವರಿಗೆ ಆಸಕ್ತಿಯಿತ್ತು. ಅವರೂ ಸಂಘದ ಕಟ್ಟಡಕ್ಕೆ ನಿವೇಶನ ಹುಡುಕುತ್ತಿದ್ದರು. ಈ ವಿಷಯ ಬಹಿರಂಗವಾಗಿಯೇ ಚರ್ಚೆಗೆ ಬಂದಾಗ ಪಾಲಿಕೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಪತ್ರಕರ್ತರ ಸಂಘಕ್ಕೆ ಕೊಡಲು ಬೆಂಬಲಿಸಿದರು. ಇದು ಆಂತರಿಕವಾಗಿ ಪಾಲಿಕೆ ನೌಕರರಿಗೆ ಅಸಮಾಧಾನವಿತ್ತು.

ನರಸಿಂಹರಾವ್, ಪ.ಗೋ ಅವರನ್ನು ಎದುರುಹಾಕಿಕೊಂಡರೆ ಕಷ್ಟವಾದೀತು ಎನ್ನುವ ಸಂದೇಶ ನೌಕರರ ಸಂಘದವರಿಗೆ ಹೋಗಿತ್ತು. ಮಯ್ಯರು ಪ್ರಭಾವಿ ಅವರು ವಿರುದ್ಧವಾಗಿ ಬರೆದರೆ ಎನ್ನುವ ಭಯವೂ ಇತ್ತು. ಈ ಕಾರಣದಿಂದಾಗಿಯೇ ಯಾರೂ ಬಹಿರಂಗವಾಗಿ ನಿವೇಶನ ಕೊಡಲು ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ.

ವಾರದಲ್ಲಿ ಒಂದೆರಡು ದಿನವಾದರೂ ಪ,ಗೋ ಮತ್ತು ನಾನು ಪಾಲಿಕೆ ಕಚೇರಿಗೆ ಬಂದು ಕಂದಾಯ ಇಲಾಖೆಯಲ್ಲಿ ನಮ್ಮ ನಿವೇಶನದ ಅರ್ಜಿಯ ಸ್ಥಿತಿಗತಿ ವಿಚಾರಿಸುವುದು ವಾಡಿಕೆಯಾಯಿತು. ಆಗ ಬೆರಳೆಣಿಕೆಯಷ್ಟು ಜನ ಮಾತ್ರ ಪತ್ರಕರ್ತರಿದ್ದ ಕಾರಣ ಎಲ್ಲರಿಗೂ ನಮ್ಮ ಪರಿಚಯವಿತ್ತು. ಪಾಲಿಕೆ ಮಾಸಿಕ ಸಭೆಗಳಲ್ಲಿ ಮತ್ತು ಮೇಯರ್ ಚೇಂಬರ್ ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ ಕಾರಣ ಪಾಲಿಕೆಯ ಎಲ್ಲ ಸಿಬಂಧಿಗಳಿಗೂ ನಮ್ಮ ಗುರುತು ಇದ್ದೇ ಇತ್ತು. ಆದ ಕಾರಣ ಕಂದಾಯ ಇಲಾಖೆಗೆ ಹೋದ ಕೂಡಲೇ ಅಲ್ಲಿದ್ದವರು ನಮ್ಮ ಅರ್ಜಿ ಯಾವ ಟೇಬಲ್ ನಲ್ಲಿದೆ ಎನ್ನುವ ಮಾಹಿತಿ ತಕ್ಷಣಕ್ಕೆ ಸಿಗುತ್ತಿತ್ತು.

ಪ.ಗೋ ಈ ನಿವೇಶನದ ಅರ್ಜಿಯ ಬೆನ್ನು ಹಿಡಿದಿದ್ದ ಕಾರಣ ನರಸಿಂಹರಾವ್ ಅಧ್ಯಕ್ಷರಾಗಿದ್ದರೂ ಅದರ ಜವಾಬ್ದಾರಿಯನ್ನು ಪ.ಗೋ ಮತ್ತು ನನಗೆ ವಹಿಸಿದ್ದರು. ವರ್ಷ ಒಂದು ಕಳೆದರೂ ಅರ್ಜಿ ಮಂಜೂರಾತಿ ಹಂತಕ್ಕೆ ಬರಲೇ ಇಲ್ಲ. ಪ.ಗೋ ಒಂದು ದಿನ ಬೆಳಿಗ್ಗೆಯೇ ನನ್ನ ಕಚೇರಿಗೆ ಬಂದು ಎಲ್ಲಾ ಮುಚ್ಚಿ ಇಡು ಬಾ ಸ್ಕೂಟರ್ ಹತ್ತು ಎಂದರು. ಇದ್ದಕ್ಕಿದ್ದಂತೆಯೇ ಮಿಲಿಟರಿ ಆದೇಶ ಇವೊತ್ತೇನಾಯ್ತು ನಿಮಗೆ ಎಂದು ಕೇಳಿದೆ.

ಬಾ ನನ್ನೊಂದಿಗೆ ತೋರಿಸ್ತೇನೆ ಎಂದಷ್ಟೇ ಹೇಳಿ ಸ್ಕೂಟರ್ ಸ್ಟಾರ್ಟ್ ಮಾಡಿದರು. ನಾನು ಕುಳಿತೆ. ಆ ದಿನ ಯಾವೊತ್ತೂ ಇಲ್ಲದಷ್ಟು ಸ್ಪೀಡಾಗಿ ಸ್ಕೂಟರ್ ಓಡಿಸುತ್ತಿದ್ದರು. ಪ.ಗೋ ಸಿಟ್ಟಿಗೆದ್ದಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು, ಆದರೆ ಯಾರ ಮೇಲೆ ಇಂಥ ಅಸಾಧ್ಯ ಸಿಟ್ಟು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಲಾಲ್ ಬಾಗ್ ನಲ್ಲಿರುವ ಪಾಲಿಕೆ ಕಚೇರಿ ಮುಂದೆ ನಿಲ್ಲಿಸಿ ಬಾ ಎನ್ನುತ್ತಾ ಬಿರುಗಾಳಿಯಂತೆ ನಡೆಯತೊಡಗಿದರು.

ಆಗಷ್ಟೇ ಅಜಿತ್ ಕುಮಾರ್ ಮೆಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ನೇರವಾಗಿ ಹೊಕ್ಕಿದ್ದು ಮೇಯರ್ ಚೇಂಬರ್. ನಮ್ಮನ್ನು ನೋಡಿ ಅಜಿತ್ ಕುಮಾರ್ ಬನ್ನಿ ಬನ್ನಿ ಎಂದರು. ಇಬ್ಬರೂ ಕುಳಿತೆವು. ಆ ಹೊತ್ತಿಗೆ ಚೇಂಬರ್ ನಲ್ಲಿ ಇನ್ನೂ ಒಂದಷ್ಟು ಜನರಿದ್ದರು, ಕೆ.ನಾರಾಯಣ ಶೆಟ್ಟಿಯವರೂ ಇದ್ದರು.

ಮೇಯರ್ ಅಜಿತ್ ಕುಮಾರ್ ಟೀ ಕಾಫಿ ಯಾವುದಾಗಬಹುದೆಂದರು. ಪ.ಗೋ ಸ್ವಾಮೀ ಮೇಯರ್ರೇ ನಿಮ್ಮ ಟೀ. ಕಾಫಿ ಕುಡೀಲಿಕ್ಕೆ ಇಲ್ಲಿಗೆ ಬಂದಿಲ್ಲ, ಬೇಕಾದರೆ ಇನ್ನೊಂದ್ಸಲ ನಿಮ್ಮ ಮನೆಗೇ ಬರ್ತೀವಿ ಆಗ ನಾವೇ ಕೇಳಿ ಕುಡಿತೀವಿ ಮೊದ್ಲು ನಮ್ಮ ಸಂಘಕ್ಕೆ ಮಂಜೂರು ಮಾಡುವ ಜಾಗದ ಫೈಲ್ ತರಿಸಿ ಎಂದರು.

ಕೇಸ್ ವರ್ಕರ್ ಯಾರು ಕರೆಯಿರಿ ಮೇಯರ್ ಆದೇಶ. ದಡಬಡ ಅಲ್ಲಿದ್ದ ಜವಾನ ಓಡಿ ಹೋಗಿ ಯಾರನ್ನೋ ಕರೆದುಕೊಂಡು ಬಂದರು. ಪತ್ರಕರ್ತರ ಸಂಘದ ನಿವೇಶನದ ಫೈಲ್ ಎಲ್ಲಿದೆ ? ಮೇಯರ್ ಕೇಳಿದರು. ಸಾರ್ ಆ ಕೇಸ್ ವರ್ಕರ್ ರಜೆ ಸಾರ್, ನನಗೆ ಗೊತ್ತಿಲ್ಲ.

ಆಫೀಸರ್ ಕರೆಯಿರಿ, ಮೇಯರ್ ಗರಂ ಆದರು. ಸಾರ್ ಅವರು ಇನ್ನೂ ಬಂದಿಲ್ಲ ಸಾರ್. ಅಲ್ಲೇ ಇದ್ದ ನಾರಾಯಣ ಶೆಟ್ಟರು ಶುರು ಹಚ್ಚಿಕೊಂಡರು. ಸದನದಲ್ಲಿ ಮಂಜೂರಾಗಿ ಬೆಂಗಳೂರಿಗೆ ಹೋಗಿ ಬರಲು ಎಷ್ಟು ಸಮಯ ಬೇಕು, ಯಾಕೆ ಸತಾಯಿಸ್ತಿದ್ದಾರೆ ?.

ಮೇಯರ್ ಪ.ಗೋ ಅವರನ್ನು ಸಮಾಧಾನ ಪಡಿಸಿ ನಾನು ಖುದ್ದಾಗಿ ಆ ಫೈಲ್ ತರಿಸಿ ಆದಷ್ಟು ಬೇಗ ಕ್ಲಿಯರ್ ಮಾಡಿಸಿಕೊಡ್ತೀನಿ ಅದರ ಜವಾಬ್ದಾರಿ ನನಗೆ ಬಿಡಿ ಎಂದರು.

ನೀವು ಕೊಡ್ತೀರೋ ಇಲ್ಲವೋ ಎನ್ನುವುದನ್ನು ನೇರವಾಗಿ ಹೇಳಿಬಿಡಿ, ನಮಗೆ ಬಿಲ್ಡಿಂಗ್ ಹೇಗೆ ಮಾಡ್ಬೇಕು ಎನ್ನುವುದು ಗೊತ್ತಿದೆ ಎಂದರು ಪ.ಗೋ ಖಡಕ್ಕಾಗಿ. ನಾರಾಯಣ ಶೆಟ್ರು ಗೋಪಾಲಕೃಷ್ಣರೇ ನಾನು ಅದರ ಹಿಂದೆ ಇದ್ದು ನೋಡ್ಕೋತೀನಿ, ನೀವು ಚಿಂತೆ ಮಾಡಬೇಡಿ ಎಂದರು.

ಹೌದು ಸ್ವಾಮೀ ನಿಮ್ಮ ಧೈರ್ಯದಲ್ಲೇ ನಾವು ಸುಮ್ಮನಿದ್ದುದ್ದು ಇಷ್ಟು ಕಾಲ ಎಂದವರೇ ಬಾ ಮಾರಾಯ ಅವರು ಮಾಡ್ತಾರಂತೆ ಮಾಡಲಿ ಎಂದವರೇ ಹೊರಟರು. ಸ್ಕೂಟರ್ ಸ್ಟಾರ್ಟ್ ಮಾಡಿದರು, ನಾನೂ ಕುಳಿತೆ. ಸ್ವಲ್ಪ ಸಿಟ್ಟು ಇಳಿಮುಖವಾಗಿತ್ತು. ಸಿಟಿ ಆಸತ್ರೆ ಕ್ಯಾಂಟೀನ್ ಮುಂದೆ ನಿಲ್ಲಿಸಿ ಬಾ ಚಾ ಕುಡಿಯುವ ಎಂದರು. ಅಲ್ಲಿ ಚಹಾ ಕುಡಿಯುವಾಗ ಇದ್ದಕ್ಕಿದ್ದಹಾಗೆ ನಿಮಗೆ ನಿವೇಶನದ ಬಗ್ಗೆ ಯಾಕೆ ಸಿಟ್ಟು ಬಂತು ಕೇಳಿದೆ

ಅದಿಕ್ಕೇ ಫೈಲ್ ತರಿಸಿ ಎಂದು ಕೇಳಿದ್ದು. ಕೇಸ್ ವರ್ಕರ್ ಇಲ್ಲ, ಆಫೀಸರ್ ಇಲ್ಲ ಇದೇ ಆಯ್ತು ಮೈಗಳ್ಳರು. ಪ.ಗೋ ಅಲ್ಲೂ ಉರಿಯುತ್ತಿದ್ದರು.

ಹೇಗೂ ಪಾಲಿಕೆಯಲ್ಲಿ ಮಂಜೂರಾಗಿದೆ, ಬೆಂಗಳೂರಲ್ಲಿ ಅಪ್ರೂ ಆದ್ರೆ ಮುಗೀತು ಅದಕ್ಕೆ ಯಾಕೆ ಇಷ್ಟು ಅವಸರ ಬಂದೇ ಬರುತ್ತೆ ಎಂದೆ.

ಇವೊತ್ತು ಫೈಲ್ ಸಿಕ್ಕಿದ್ರೆ ಗೊತ್ತಾಗ್ತಿತ್ತು ಏನು ಎನ್ನುವುದು ಎಂದು ಮತ್ತೆ ಮತ್ತೆ ಅದೇ ರಾಗದಲ್ಲಿ ಮಾತನಾಡಿದರು.
ಇದು ಪ.ಗೋ ಅವರ ತನಿಖಾ ಪತ್ರಿಕೋದ್ಯಮದ ಝಲಕ್. ಅವರ ಕಿವಿಗೆ ಏನಾದರೂ ಮಾಹಿತಿ ಬಿದ್ದರೆ ಅದರ ಸತ್ಯಾಸತ್ಯತೆ ಗೊತ್ತಾಗುವ ತನಕ ಅದನ್ನು ಬಹಿರಂಗಪಡಿಸುವುದಿಲ್ಲ. ಏನೇ ಮಾಹಿತಿ ಕಿವಿಗೆ ಬಿದ್ದರೂ ಅದನ್ನು ಕೌಂಟರ್ ಚೆಕ್ ಮಾಡದೆ ಒಪ್ಪಿಕೊಳ್ಳುವ ಜಾಯಮಾನ ಪ.ಗೋ ಅವರದ್ದಲ್ಲ.

ಕೆಲವು ಸಲ ಅವರು ಚರ್ಚೆಗಿಳಿದರೆ ನಿಮ್ಮ ಜೊತೆ ಚರ್ಚೆ ಮಾಡಿ ಗೆಲ್ಲಲು ಸಾಧ್ಯವೇ ? ಎಂದು ನಾನೇ ಸುಮ್ಮನಾಗುತ್ತಿದ್ದೆ. ಪ.ಗೋ ಅವರಿಗೆ ಆಯಕಟ್ಟಿನ ಜಾಗಗಳಲ್ಲಿ ಒಳಸುದ್ದಿಗಳನ್ನು ಕೊಡುವ ಮಂದಿಯಿದ್ದರು. ಅಂಥ ಮೂಲಗಳನ್ನು ಜೋಪಾನವಾಗಿ ಕಾಯ್ದುಕೊಳ್ಳುತ್ತಿದ್ದರು. ಸುದ್ದಿಮೂಲ ಬಿಟ್ಟುಕೊಡುವ ಆಸಾಯಿಯೇ ಅಲ್ಲ.

ಮರುದಿನ ನರಸಿಂಹರಾಯರನ್ನು ಭೇಟಿ ಮಾಡಿ ಪ.ಗೋ ಸಿಟ್ಟಿಗೆದ್ದು ಮೇಯರ್ ಚೇಂಬರ್ ನಲ್ಲಿ ಹಾರಾಡಿದ್ದನ್ಬು ಹೇಳಿದೆ. ಅವನು ಹಾಗೆಲ್ಲಾ ಸುಮ್ಮ ಸುಮನೇ ಹಾರಾಡುವುದಿಲ್ಲ, ಏನೋ ಗೊತ್ತಾಗಿರಬೇಕು, ಸಂಶಯ ಅವನ ತಲೆಗೆ ಹೊಕ್ಕಿದರೆ ಅದು ನಿವಾರಣೆಯಾಗುವ ತನಕವೂ ಬಿಡುವುದಿಲ್ಲವೆಂದರು.

ಆಗ ನಮ್ಮ ಸಂಘದ ಪತ್ರವ್ಯವಹಾರದ ವಿಳಾಸ ನರಸಿಂಹರಾವ್ ಅವರ ಮನೆ. ಅಲ್ಲಿಗೆ ಪತ್ರಗಳು ಬರುತ್ತಿದ್ದವು. ಅವರದ್ದೇ ಮನೆ ವಿಳಾಸ ಸಂಘದ ವಿಳಾಸವಾಗಿತ್ತು. ಈ ಘಟನೆ ನಡೆದು ಒಂದು ವಾರವಾಗಿತ್ತು. ನರಸಿಂಹರಾವ್ ಮಂಗಳೂರು ಮಹಾನಗರಪಾಲಿಕೆಯಿಂದ ಬಂದಿದ್ದ ನಿವೇಶನದ ಕುರಿತಾದ ಪತ್ರವನ್ನು ತಂದು ನನ್ನ ಕೈಗೆ ಕೊಟ್ಟರು. ಇಷ್ಟು ವರ್ಷಗಳ ಪ್ರಯತ್ನ ಹೊಳೆನೀರಲ್ಲಿ ಹುಣಸೇ ಹಣ್ಣು ತೊಳೆದಂತಾಗಿತ್ತು. ಪ.ಗೋ ಅವರಿಗೆ ಫೋನ್ ಮಾಡಿ ನಿವೇಶನ ಮಂಜೂರಾತಿಗೆ ಸಂಬಂಧಿಸಿ ಪತ್ರ ಬಂದಿರುವುದನ್ನು ತಿಳಿಸಿ ಬೇಗ ಬರಲು ಹೇಳಿದೆ. ಅಲ್ಲಿಂದಲೇ ಬೈಯ್ಯಲು ಶುರು ಮಾಡಿದರು ನಾನು ಇದನ್ನೆಲ್ಲಾ ಊಹೆ ಮಾಡಿಯೇ ಫೈಲ್ ಕೇಳಿದ್ದು ರಾಯರನ್ನೂ ನಿಲ್ಲಲು ಹೇಳು ಎಂದವರೇ ಫೋನ್ ಇಟ್ಟರು. ಈಗ ಪ.ಗೋ ಬರ್ತಾರಂತೆ, ನೀವೂ ಇರಬೇಕಂತೆ ಎಂದೆ.

ಅಯ್ಯೋ ಮಾರಾಯ ಇನ್ನು ಅವನನ್ನು ಯಾರು ಕಂಟ್ರೋಲ್ ಮಾಡುವವರು ? ಎನ್ನುತ್ತಾ ಚಿಂತೆಗೀಡಾದರು. ವಾಯುವೇಗದಲ್ಲಿ ಬಂದವರೇ ಪಾಲಿಕೆಯಿಂದ ಬಂದಿದ್ದ ಕಾಗದ ತೆಗೆದುಕೊಂಡು ಓದಿ ಕೆಂಡಾಮಂಡಲವಾಗಿ ಬೀಡಿ ತೆಗೆದು ಬೆಂಕಿ ಹಚ್ಚಿ ಪುಸು ಪುಸು ಹೊಗೆ ಬಿಡತೊಡಗಿದರು.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment