ಕರಾವಳಿ

ಚಿದು ಬರೆಯುವ ಪ.ಗೋ ಸರಣಿ-6 : ವರದಕ್ಷಿಣೆ ವಿರೋಧಿ ಸಂಘವೂ… ಮದುವೆಯಾದವರೂ

Pinterest LinkedIn Tumblr

photo4 002

ಪತ್ರಿಕಾಗೋಷ್ಠಿಗಳಲ್ಲಿ ಎರಡು ಭಾಗ. ಮೊದಲ ಭಾಗದಲ್ಲಿ ಪತ್ರಿಕಾಗೋಷ್ಠಿ ಕರೆದವರು ತಮಗೆ ಹೇಳಬೇಕೆನಿಸ್ದಿದ್ದನ್ನು ಹೇಳಿಕೊಳ್ಳುವುದು, ಎರಡನೇ ಭಾಗದಲ್ಲಿ ಪತ್ರಕರ್ತರು ತಮಗೆ ಸಂಘಟಕರು ಹೇಳಿದ ಮಾತುಗಳಲ್ಲಿ ಏನಾದರೂ ಹೆಚ್ಚಿನ ಮಾಹಿತಿ, ವಿವರಗಳು ಬೇಕಿದ್ದಲ್ಲಿ ಕೇಳುವುದು ಅರ್ಥಾತ್ ಸಂವಾದ.

ಅದು ವರದಕ್ಷಿಣೆ ಪರಾಕಾಷ್ಠೆಗೆ ಏರಿದ್ದ ಕಾಲಘಟ್ಟ. ಚಿನ್ನಕ್ಕೆ ಪವನ್ ಗೆ 2-2,500 ಇರಬಹುದು, ಆದರೆ ದುಬಾರಿ ಬೇಡಿಕೆ, ನಗದು ಕೇಳಿಕೆ. ಹೆಣ್ಣೆತ್ತವರು ಕಣ್ಣಿರಿಡುವ ಪ್ರಸಂಗ (ಈಗಲೂ ಪರಿಸ್ಥಿತಿ ಬದಲಾಗಿಲ್ಲ). ಅಲ್ಲಲ್ಲಿ ವರದಕ್ಷಿಣೆ ವಿರೋಧಿ ಕೂಗು ಕೇಳಿ ಬರುತಿತ್ತು. ವರದಕ್ಷಿಣೆ ಕೇಳುವವನನ್ನು ಮದುವೆಯಾಗುವುದಿಲ್ಲವೆಂದು ಹೆಣ್ಣು ಮಕ್ಕಳು ಪ್ರಮಾಣ ಮಾಡುವಂಥ ಪ್ರಸಂಗ. ಕವಿಗಳು, ಕತೆಗಾರರು ವರದಕ್ಷಿಣೆ ವಿರೋಧಿಯಾಗಿ ಕತೆ, ಕಾವ್ಯ ಬರೆಯುತ್ತಿದ್ದರು.

ಅಂತೂ ಎಲ್ಲಿ ನೋಡಿದರೂ ವರದಕ್ಷಿಣೆ ಪೆಂಡಂಭೂತದ ಬಗ್ಗೆಯೇ ಮಾತು, ಚರ್ಚೆ. ಸಾಮೂಹಿಕ ಮದುವೆಗಳಲ್ಲಿ ಮದುವೆಯಾಗಲು, ಮದುವೆ ಮಾಡಲು ನಾಚಿಕೆ, ಸರಳ ವಿವಾಹಕ್ಕೆ ಪ್ರೋತ್ಸಾಹ ಕೊಡಬೇಕೆನ್ನುವ ಸರ್ಕಾರದ ಕೂಗು ಹೀಗೆ ಎಲ್ಲಿ ನೋಡಿದರೂ ವರದಕ್ಷಿಣೆ ಕುರಿತಾಗಿಯೇ ಚರ್ಚೆ.

ಇದೇ ಹೊತ್ತಿಗೆ ಮಂಗಳೂರಲ್ಲಿ ವರದಕ್ಷಿಣೆ ವಿರೋಧಿ ಸಂಘ ಹುಟ್ಟು ಹಾಕಲು ಕೆಲವು ಬಂಟ ಸಮುದಾಯದ ನಾಯಕರು ಮುಂದಾದರು. ಅದರಲ್ಲೂ ಬಂಟ ಸಮುದಾಯದಲ್ಲಿ ವರದಕ್ಷಿಣೆ ಸ್ವರೂಪ ಭಯಾನಕ ಎನ್ನುವ ಅನಿಸಿಕೆಯಿದ್ದ ಕಾಲ. ಇಂಥ ದಿಟ್ಟತನವನ್ನು ನಾಯಕರು ತೋರಿಸುವುದನ್ನು ಯಾರೂ ನಿರಾಕರಿಸುವಂತಿಲ್ಲ.

ಆಗ ತುಳುಕೂಟದ ಮುಂಚೂಣಿಯ ನಾಯಕ ಎಸ್.ಆರ್.ಹೆಗ್ಡೆ ವಕೀಲರೂ ಕೂಡಾ. ಇವರೊಂದಿಗೆ ಪ್ರತಿಷ್ಠಿತ ಮನೆತನದ ಬಂಟ ಸಮುದಾಯದ ಮಹಿಳೆಯರೂ ಕೂಡಾ ಕೈಜೋಡಿಸಿದ್ದರು. ವರದಕ್ಷಿಣೆ ವಿಚಾರ ಬಂದಾಗಲೆಲ್ಲ ಬಂಟ ಸಮುದಯಾವನ್ನೇ ಬೆರಳು ಮಾಡಿತೋರಿಸುತ್ತಿದ್ದರು. ಯಾಕೆಂದರೆ ಇದ್ದ ಸಮುದಾಯಗಳ ಪೈಕಿಯೇ ಬಂಟ ಸಮುದಾಯದಲ್ಲಿ ಡೌರಿ ದುಬಾರಿ ಎನ್ನುವ ಕಾರಣಕ್ಕೆ.

ಆಗ ಇದ್ದಕಿದ್ದಂತೆಯೇ ಸಿಮೆಂಟ್ ದುಬಾರಿಯಾಯಿತು. ಆಗ ವರದಕ್ಷಿಣೆ ನಗದು ಬೇಡ ಒಂದೆರಡು ಲಾರಿ ಲೋಡ್ ಸಿಮೆಂಟ್ ಕಳುಹಿಸಿಕೊಡಿ ಎನ್ನುವ ಮಾತಿತ್ತು.

ಸಾಮಾಜಿಕ ಕಳಕಳಿಯಿಂದ ವರದಕ್ಷಿಣೆ ವಿರೋಧಿ ಸಂಘಟನೆ ಮಾಡುವುದು ಸೂಕ್ತವೇ ಆಗಿತ್ತು. ಈ ಸಂಘಟನೆಯ ಧೇಯೋದ್ದೇಶಗಳಲ್ಲಿ ಗಮನ ಸೆಳೆದದ್ದು ನಾವು ಯಾರೂ ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಮತ್ತು ವರದಕ್ಷಿಣೆ ಕೊಡುವುದಿಲ್ಲ ಎನ್ನುವುದು. ಹೀಗೆ ವರ ಮತ್ತು ವಧುವಿನ ಮನೆಯವರು ಅರ್ಥಾತ್ ತಂದೆ ತಾಯಿ ಹಾಗೆಯೇ ಮದುವೆಯಾಗುವ ಹೆಣ್ಣು ಮತ್ತು ಗಂಡು ಪ್ರಮಾಣ ಮಾಡಬೇಕಿತ್ತು.

ಅದೂ ಮಂಗಳೂರಲ್ಲಿ ಇಂಥ ಒಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗುತ್ತಿದೆ, ಬಂಟ ಸಮುದಾಯ ಇದರ ಮುಂಚೂಣಿಯಲ್ಲಿದೆ ಎನ್ನುವುದೇ ರೋಮಾಂಚನ, ಉಳಿದವರಿಗೂ ಸ್ಫೂರ್ತಿಯಾಗಬೇಕು ಎನ್ನುವುದು ನನ್ನಂಥ ಪಡ್ಡೇ ಹುಡುಗರ ಆಶಯವಾಗಿತ್ತು.

ಹೀಗೆ ಬಂಟ ಸಮುದಾಯದ ನಾಯಕರು ವರದಕ್ಷಿಣೆ ವಿರೋಧಿ ಸಂಘಟನೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಖಂಡಿತಕ್ಕೂ ಹೆಚ್ಚು ಪ್ರಚಾರಕೊಡಬೇಕೆನಿಸಿತ್ತು ವೈಯಕ್ತಿಕವಾಗಿ. ನಮ್ಮ ಪ.ಗೋ ಕೂಡಾ ವರದಕ್ಷಿಣೆಗೆ ಬದ್ಧ ವಿರೋಧಿ. ಆಗ ಯಾರಾದರೂ ಕೈಯ್ಯಲ್ಲಿ ಬ್ರಾಸ್ ಲೆಟ್ ಹಾಕಿದ್ದರೆ, ದಪ್ಪ ಚಿನ್ನದ ಚೈನ್ ಧರಿಸಿದ್ದರೆ ಪ.ಗೋ ಬಡಪಾಯಿ ಹೆಣ್ಣೆತ್ತವರನ್ನು ಸುಲಿಗೆ ಮಾಡಿ ಮಣಭಾರ ಚೈನ್ ಹಾಕಿದ್ದಾನೆ ಎಂದು ನನ್ನೊಂದಿಗೆ ಕಿವಿಯಲ್ಲಿ ಹೇಳುತ್ತಿದ್ದರು. ಇಂಥ ಚಿನ್ನ ಹಾಕಿದವರನ್ನು ಕಂಡರೆ ಪ.ಗೋ ಉರಿದು ಬೀಳುತ್ತಿದ್ದರು. ಸಿಟ್ಟನ್ನು ಶಮನಮಾಡಿಕೊಳ್ಳಲು ಕಿಸೆಯಿಂದ ಬೀಡಿ ತೆಗೆದು ಧಮ್ ಎಳೆಯುತ್ತಿದ್ದರು. ಒಂದರ ಹಿಂದೆ ಒಂದು ಸೇದಿದರು ಅಂದರೆ ಸಿಟ್ಟು ತಣಿದಿಲ್ಲ ಎಂದೇ ಅರ್ಥ.

ಇವರ ಈ ಸ್ಥಿತಿ ನೋಡಿ ಅದೆಷ್ಟೋ ಸಲ ನಿಮಗೆಯಾಕೆ ಸಿಟ್ಟು ಮಾರಾಯ್ರೇ ಇಬ್ಬರು ಗಂಡು ಮಕ್ಕಳು, ಒಬ್ಬರಿಗೆ ಮದುವೆ ಆಗಿದೆ, ಇನ್ನೊಬ್ಬರಿಗೆ ಬೇಕಾದರೆ ಒಂದೆರಡು ಕೇಜಿ ಚಿನ್ನ ತೆಗೆದುಕೊಂಡರಾಯಿತು. ವರದಕ್ಷಿಣೆ ಹೆಣ್ಣಿದ್ದವರ ಸಮಸ್ಯೆ ಎನ್ನುತ್ತಿದ್ದೆ.

ನಿನ್ನ ಮಂಡೆಗೆ ಹಾಕುವೆ ಎನ್ನುತ್ತಿದ್ದರು ಸಾತ್ವಿಕ ಸಿಟ್ಟಿನಿಂದ. ಇಂಥ ಪ.ಗೋ ಪತ್ರಿಕಾಗೋಷ್ಠಿ ಕರೆದರೆ ಆ ಆಹ್ವಾನ ಪತ್ರಿಕೆಯನ್ನು ಒಂದೀರಡು ಸಲವಾದರೂ ಮತ್ತೆ ಮತ್ತೆ ಓದಿ ಅದರಲ್ಲಿ ಯಾರಿದ್ದಾರೆ?, ಅವರ ಜಾತಕ ಏನು? ಇತ್ಯಾದಿ ಹೋಮ್ ವರ್ಕ್ ಮಾಡುತ್ತಿದ್ದರು. ನಾನು ಅವರು ಆ ರೀತಿ ಆಹ್ವಾನ ಪತ್ರಿಕೆ ಓದುವುದನ್ನು ನೋಡಿ ಬಾಯಿಪಾಠ ಮಾಡಬೇಡಿ ನಾಳೆ ಅವರೇ ಪರಿಚಯ ಮಾಡುತ್ತಾರೆ ಎನ್ನುತ್ತಿದ್ದೆ. ಆದರೆ ಪ.ಗೋ ಮತ್ತೆ ಮತ್ತೆ ಓದುತ್ತಿದ್ದುದಕ್ಕೆ ಅರ್ಥವಿದೆ ಎನ್ನುವುದು ಹೊಳೆದದ್ದು ತಡವಾಗಿ ಅದೂ ಅವರೇ ನನಗೆ ವಿವರಿಸಿದಾಗ.

ಬಂಟ ಸಮುದಾಯದ ನಾಯಕರು ವರದಕ್ಷಿಣೆ ವಿರೋಧಿ ಸಂಘ ಕಟ್ಟುವ ಕುರಿತು ನಿರ್ಧರಿಸಿ ಅದನ್ನು ಮಾಧ್ಯಮಗಳ ಮೂಲಕ ನಾಡಿನ ಜನರಿಗೆ ತಿಳಿಸಲು ಹೊಟೇಲ್ ಉಡ್ ಸೈಡ್ ನಲ್ಲಿ ಮುಸ್ಸಂಜೆ ಪತ್ರಿಕಾಗೋಷ್ಠಿ ನಂತರ ಪಾನಗೋಷ್ಠಿಗೆ ಬರಲು ಆಹ್ವಾನ ಪತ್ರ.

ಪ.ಗೋ ಅದನ್ನು ಎರಡು ಬಾರಿ ಓದಿದ ಮೇಲೆ ನಾಳೆ ಪತ್ರಿಕಾಗೋಷ್ಠಿಗೆ ಹೋಗಬೇಕು, ಮಜಾ ಇರುತ್ತದೆ ಎಂದರು. ನಾನು ಅವರ ಮಾತಿಗೆ ಉಪ್ಪುಕಾರ ಹಾಕಿ ಗುಂಡು ಹಾಕಲು ಮತ್ತೊಂದು ಅವಕಾಶ ಎಂದೆ.

ಆಗ ಪ.ಗೋ ನಿನ್ನ ಮಂಡೆ. ವರದಕ್ಷಿಣೆ ವಿರೋಧಿ ಸಂಘ ಕಟ್ಟುವವರು ಯಾರೆಲ್ಲ ಎನ್ನುವುದೇ ಕುತೂಹಲ ಮಾರಾಯ. ವರದಕ್ಷಿಣೆ ಸಂಘ ಕಟ್ಟಿ ಸದಸ್ಯರನ್ನು ಮಾಡಿಕೊಂಡರೆ ವರದಕ್ಷಿಣೆ ಕೊಡುವಂತಿಲ್ಲ, ತೆಗೆದುಕೊಳ್ಳುವಂತಿಲ್ಲ. ಈಗಿನ ಕಾಲದಲ್ಲಿ ಇದೆಲ್ಲಾ ನಡೆಯುತ್ತಾ ? ಕೇಳಿದರು.

ಹೌದಲ್ಲವೇ ಇದು ಅಷ್ಟು ಸುಲಭದ ಮಾತಲ್ಲ ಅನ್ನಿಸಿತು. ಆದರೂ ಇಂಥ ಸಾಹಸಕ್ಕೆ ಯಾರೆಲ್ಲ ಕೈಹಾಕುತ್ತಾರೆ, ಅವರಿಗೆ ಎಷ್ಟರಮಟ್ಟಿನ ಬೆಂಬಲ ಸಿಗಬಹುದು ಎನ್ನುವುದನ್ನು ನಾಳೆ ಊಹಿಸಬಹುದು ಎಂದರು ಪ.ಗೋ. ಅಲ್ಲಿಯತನಕ ನಾನು ಈ ಪತ್ರಿಕಾಗೋಷ್ಠಿ ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲ. ಕೊನೆಗೆ ಊಟ ಇದೆ ಎನ್ನುವುದನ್ನು ನಮೂದಿಸಿದ್ದರೆ ಏನಿರಲಿ ಏನಿಲ್ಲದಿರಲಿ ಅಲ್ಲಿಗೆ ಹೋಗುವುದು ತಪ್ಪದಿರಲಿ ಎನ್ನುವುದೇ ಆಶಯ.

ಯಾಕೋ ಪ.ಗೋ ಅವರ ಇಂಥ ತನಿಖಾ ಪ್ರಯೋಗ, ನೆಗೇಟಿವ್ ಆಗಿ ಮುಂಚಿತವಾಗಿ ಊಹಿಸುವುದು ಕುತೂಹಲ ಮೂಡಿಸಿತು. ನಿಮಗೆ ಯಾಕಿಂತ ಬುದ್ಧಿ ?, ಮಯ್ಯರಿಗೆ, ನರಸಿಂಹ ರಾಯರಿಗೆ, ಉಭಯರಿಗೆ ಇಂಥ ಯೋಚನೆ ಹೊಳೆಯುವುದಿಲ್ಲ. ನೀವು ಪ್ರತೀ ಬಾರಿಯೂ ಏನಾದರೊಂದು ಕೊಂಕು ಹುಡುಕುತ್ತೀರಲ್ಲ? ಎಂದೆ.

ಮೊದಲು ನಾನೊಬ್ಬನೇ ಇಂಥ ಕೆಲಸ ಮಾಡುತ್ತಿದ್ದೆ, ಇನ್ನು ಮುಂದೆ ನೀನೂ ಇದನ್ನೇ ಮಾಡುವುದು ತಿಳ್ಕೋ. ನಾಳೆ ಸಂಜೆ ಪ್ರೆಸ್ ಮೀಟ್ ಗಿಂತ್ ಮುಂಚೆ ಸಿಕ್ಕು ಹೇಳ್ತೀನಿ ಎಂದವರೇ ಮತ್ತೆ ಮರುದಿನವೇ ಸಿಕಿದ್ದು.

ಸಮಯಕ್ಕಿಂತ ಮುಂಚಿತವಾಗಿಯೇ ಹೊಟೇಲ್ ಉಡ್ ಸೈಡ್ ಗೆ ಹೋದೆವು. ಬಹುಷ ಈಗ ಆ ಹೊಟೇಲ್ ಎಲ್ಲೆಂದು ಹೇಳಬೇಕೇ ಹೊರತು ಅದಿಲ್ಲ. ಈಗಿನ ಸಿಟಿ ಸೆಂಟರ್ ಇರುವ ಜಾಗವೇ ಹೊಟೇಲ್ ಉಡ್ ಸೈಡ್ ಇದ್ದದ್ದು. ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಇದಾಗಿತ್ತು. ಅಪ್ಪಾಜಿ ನಾಯಕ್ ಅದರ ಮಾಲೀಕರು. ಕ್ಯಾಬರೇ ಡ್ಯಾನ್ಸ್ ಮಂಗಳೂರಲ್ಲಿ ಆರಂಭವಾದದ್ದೇ ಆ ಹೊಟೇಲ್ ನಲ್ಲಿ. ಚಲನಚಿತ್ರ ತಾರೆಯರು ಉಳಿದುಕೊಳ್ಳುತ್ತಿದ್ದ ಹೊಟೇಲ್ ಕೂಡಾ ಆಗಿತ್ತು. ಕ್ಸೆನಾಡ್ ಬಾರ್ ಅಂಡ್ ರೆಸ್ಟೋರೆಂಟ್ ಐಷಾರಾಮಿಯಾಗಿತ್ತು. ಕೋಳಿ ಸುಕ್ಕ, ನೀರ್ ತೆಳ್ಳಾವು ಫೇಮಸ್.

ಅದೇ ಹಾಲ್ ನಲ್ಲಿ ಪತ್ರಿಕಾಗೋಷ್ಠಿ. ಇಂಪಾದ ಸಂಗೀತ, ಡಿಮ್ ಲೈಟ್ ಇಲ್ಲಿನ ವಿಶೇಷ. ಪತ್ರಿಕಾಗೋಷ್ಠಿ ಶುರುವಾದರೆ ಸಂಗೀತ ಸ್ಟಾಪ್ ಆಗುತ್ತಿತ್ತು. ಮತ್ತೆ ಪಾನಗೋಷ್ಠಿಗೆ ಸಂಗೀತ ಸುಧೆ.

ವೇದಿಕೆ ಮೇಲೆ ಬಂಟ ಸಮುದಾಯದ ನಾಯಕರು. ಎದ್ದು ಕಾಣುವವರೆಂದರೆ ಎಸ್.ಆರ್.ಹೆಗ್ಡೆ, ವೇದಿಕೆ ಮೇಲೆ ಏಳೆಂಟು ಜನರಿದ್ದರು. ಮಹಿಳೆಯರೂ ಇದ್ದರು. ಆಗಿನ್ನೂ ನನಗೆ ಎಲ್ಲರ ಪರಿಚಯವಿರಲಿಲ್ಲ. ಹೆಗ್ಡೆ ಅವರನ್ನು ಬಿಟ್ಟರೆ.

ಪ್ರಾರಂಭದಲ್ಲಿ ಸ್ವಾಗತ, ವೇದಿಕೆಯಲ್ಲಿದ್ದ ಎಲ್ಲರ ಪರಿಚಯ ಮಾಡಲಾಯಿತು. ಮೊದಲು ಎಸ್.ಆರ್.ಹೆಗ್ಡೆ ಅವರು ಮಾತನಾಡಿದರು, ನಂತರ ಒಬ್ಬೊಬ್ಬರಾಗಿ ವರದಕ್ಷಿಣೆ ವಿರೋಧಿ ಸಂಘ ಕಟ್ಟಿದ ಉದ್ದೇಶಗಳನ್ನು ವಿವರಿಸಿದರು. ಇಲ್ಲಿರುವ ಯಾರೂ ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಮತ್ತು ಕೊಡುವುದಿಲ್ಲವೆಂದು ಪ್ರಮಾಣ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿದ್ದವರು ಮಾತನಾಡುವಾಗ ಪಕ್ಕದಲ್ಲಿ ಕುಳಿತಿದ್ದ ಪ.ಗೋ ಅವರ ಜಾತಕ ಹೇಳತೊಡಗುತ್ತಿದ್ದರು. ಅವರಿಗೆಷ್ಟು ಮಕ್ಕಳು, ಎಲ್ಲಿದ್ದಾರೆ, ಮದುವೆಯಾಗಿರುವುದು, ಅವರು ಏನು ಮಾಡುತ್ತಾರೆ ಇತ್ಯಾದಿ..ಇತ್ಯಾದಿ. ವೃತ್ತಿಯಲ್ಲಿ ಹಿರಿಯರಾಗಿದ್ದ ಕಾರಣ ಪ.ಗೋ ಅವರಿಗೆ ಇದೆಲ್ಲವೂ ಗೊತ್ತಿತ್ತು ಎನ್ನಬಹುದಾದರೂ ಅವರು ಅತ್ಯಂತ ಶ್ರದ್ಧೆಯಿಂದ ಕಸಬು ಮಾಡುತ್ತಿದ್ದರು.

ಪತ್ರಿಕಾಗೋಷ್ಠಿಯ ಮೊದಲ ಭಾಗದಲ್ಲಿ ಅವರು ಹೇಳುವುದೆಲ್ಲವೂ ಮುಗಿದ ಮೇಲೆ ಪ.ಗೋ ನನ್ನನ್ನು ಪ್ರಶ್ನೆ ಕೇಳು ಎಂದರು. ಹೇಗೆ ಕೇಳಬೇಕೆಂದು ಪ.ಗೋ ಹೇಳಿಕೊಟ್ಟಿದ್ದರು. ಒಂದು ವೇಳೆ ಅವರೇನಾದರೂ ಹಾರಿಕೆ ಉತ್ತರ ಕೊಟ್ಟರೆ ಮುಂದಿನದ್ದನ್ನು ನಾನು ನೋಡಿಕೊಳ್ಳುತ್ತೇನೆ, ಕೇಳು ಎಂದು ಚಿವುಟಿದರು.

ಪ.ಗೋ ಬೆಂಬಲಕ್ಕಿರುವಾಗ ಅಳುಕೆಲ್ಲಿಂದ ಬರಬೇಕು?. ನಿಮ್ಮ ಉದ್ದೇಶಗಳೆಲ್ಲವೂ ಸರಿಯಾದವೇ ಆಗಿವೆ?, ವರದಕ್ಷಿಣೆ ತೆಗೆದುಕೊಳ್ಳಬಾರದು, ಹಾಗೆಯೇ ನಾವು ಯಾರೂ ತೆಗೆದುಕೊಳ್ಳುವುದಿಲ್ಲ, ಕೊಡುವುದಿಲ್ಲ ಎನ್ನುತ್ತೀರಿ. ಆದರೆ ವೇದಿಕೆಯಲ್ಲಿ ಎಲ್ಲರೂ ಮದುವೆ ಆದವರು, ಮಕ್ಕಳಿಗೆ ಮದುವೆ ಮಾಡಿದವರು. ನೀವು ಪ್ರಮಾಣ ಮಾಡುವುದಕ್ಕೇನರ್ಥವಿದೆ?, ನಿಮ್ಮ ಸಂಘದಲ್ಲಿ ಮದುವೆಯಾಗದವರು ಎಷ್ಟು ಜನರಿದ್ದಾರೆ?.

ನಾನು ಪ್ರಶ್ನೆ ಮುಗಿಸುವುದರೊಳಗೆ ಅವರೊಳಗೇ ಚರ್ಚೆ ಏನೋ ಸಂಚಲನ. ಆದರೂ ಉತ್ತರ ಕೊಡಲು ಮುಂದಾದವರು ಹೆಗ್ಡೆಯವರು. ನಾವು ಇಂಥ ಒಂದು ಸಾಹಸಕ್ಕೆ ಕೈಹಾಕಿದ್ದೇವೆ , ನಮ್ಮ ಯುವಕರು ವರದಕ್ಷಿಣೆ ತೆಗೆದುಕೊಳ್ಳಬಾರದು ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.

ಈಗ ಪ.ಗೋ ಸರದಿ. ಸ್ವಾಮೀ. ನೀವು ಮನವರಿಕೆ ಮಾಡಿಕೊಡಿ, ಅವರ ಮನೆ ಮುಂದೆ ಧರಣಿ ಮಾಡಿ ಯಾರೂ ಬೇಡಾ ಎನ್ನುವುದಿಲ್ಲ. ಇವನು ಕೇಳಿದ ಪ್ರಶ್ನೆಯನ್ನು ನಾನು ರಿಪೀಟ್ ಮಾಡುತ್ತೇನೆ ಎಂದರು. ಹೆಗ್ಡೆಯವರು ಬೇಡಾ ಬೇಡಾ ಗೊತ್ತಾಯ್ತು ಎಂದರು.

ಇರಲಿ ಗೊತ್ತಾಗದಿದ್ದವರಿಗೆ ಗೊತ್ತಾಗಲಿ ಹೇಳ್ತೀನಿ ಕೇಳಿ ನಿಮ್ಮ ಸಂಘಕ್ಕೆ ನಮ್ಮ ವಿರೋಧವಲ್ಲ. ನಮ್ಮ ಬೆಂಬಲ ಇದೆ. ಆದರೆ ಪ್ರಮಾಣ ಮಾಡಬೇಕಾದವರು ನೀವಲ್ಲ. ಯಾರು ಮದುವೆಯಾಗಲು ಇದ್ದಾರೆ ಅವರು. ನಿಮ್ಮ ಮಕ್ಕಳನ್ನು ವೇದಿಕೆ ಮೇಲೆ ಕುಳಿತುಕೊಳ್ಳಿಸಿ ಪ್ರಮಾಣ ಮಾಡಿದ್ದರೆ ಒಪ್ಪಬಹುದಿತ್ತು. ಇದನ್ನೇ ಚಿದಂಬರ ಕೇಳಿದ್ದು, ತಪ್ಪೇ ?.

ಗೋಪಾಲಕೃಷ್ಣರೇ ನಾವು ತಪ್ಪು ಅಂತೇನೂ ಹೇಳ್ತಾ ಇಲ್ಲ. ನಾವು ಇದಕ್ಕಾಗಿಯೇ ಪ್ರಯತ್ನ ಮಾಡುತ್ತೇವೆ. ಸಂಘ ಕಟ್ಟುತ್ತೇವೆ, ಯುವಕರನ್ನು ಒಟ್ಟುಗೂಡಿಸಿ ನಿಮ್ಮ ಮುಂದೆಯೇ ಪ್ರಮಾಣ ಮಾಡಿಸುತ್ತೇವೆ ಎಂದರು.

ಆಗಲೇ ಪತ್ರಿಕಾಗೋಷ್ಠಿ ಕರೆಯಬಹುದಿತ್ತಲ್ಲ, ಈಗ ಯಾಕೆ ಕರೆದಿರಿ? ಮತ್ತೆ ಪ.ಗೋ ಬಾಣ. ನಾವು ಸಂಘದ ಉದ್ಘಾಟನೆ ಮಾಡುವ ಸಲುವಾಗಿ ಪ್ರಚಾರಕ್ಕಾಗಿ ಕರೆದೆವು ಸಮಜಾಯಿಷಿ. ನರಸಿಂಹರಾವ್, ಮಯ್ಯ, ಉಭಯ ನಮ್ಮಿಬ್ಬರನ್ನು ಮುಂದೇನು ಪ್ರಶ್ನೆಯೋ ಎನ್ನುವ ಕುತೂಹಲದಿಂದ ನೋಡುತ್ತಿದ್ದರು. ಪತ್ರಿಕಾಗೋಷ್ಠಿ ಮುಕ್ತಾಯ, ಆದರೆ ಯಾರ ಮುಖದಲ್ಲೂ ಗೆಲುವಿಲ್ಲ.

ನಾವು ಮತ್ತೆ ಅಲ್ಲೇ ಇದ್ದರೆ ಅವರಿಗೂ ಎಂಜಾಯ್ ಮಾಡಿದಂತಾಗದು ಎನ್ನುವ ಕಾರಣಕ್ಕೆ ಪ.ಗೋ ನನ್ನನ್ನು ಸ್ಕೂಟರ್ ಗೆ ಹತ್ತಿಸಿಕೊಂಡು ಕಾಟೇಜ್ ಗೆ ಬಂದು ಸಾಂಬಾರ್ ನಲ್ಲಿ ಊಟಮಾಡಿ ಮಲಗಿಯೂ ಮಧ್ಯರಾತ್ರಿ ತನಕ ಪ.ಗೋ ಮಾತಾಡಿದ್ರು. ಮುಂದೆ ವರದಕ್ಷಿಣೆ ವಿರೊಧಿ ಸಂಘವೂ ಏಳಿಗೆಯಾಗಲಿಲ್ಲ, ವರದಕ್ಷಿಣೆ ಪಿಡುಗೂ ನಿಲ್ಲಲಿಲ್ಲ.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment