ಕರಾವಳಿ

ಹಾರನ್ ಇಲ್ಲದ ಹಳೇ ಬೈಕ್ ಮತ್ತು ಪ.ಗೋ ಥಿಯರಿ

Pinterest LinkedIn Tumblr

1970 lambretta

(ಚಿತ್ರ ಮಾಹಿತಿ: ಇವು ಸಾಂದರ್ಭಿಕ ಚಿತ್ರಗಳು. ಬೈಕ್ ಇದನ್ನೇ ಹೋಲುತ್ತಿತ್ತು. ಸ್ಕೂಟರ್ ಸೆಕೆಂಡ್ ಹ್ಯಾಂಡ್ ಮತ್ತು ಇದೇ ಕಂಪೆನಿಯದು)

(ಚಿದು ಬರೆಯುವ ಪ.ಗೋ ಸರಣಿ-3)

ಈಗ ಪತ್ರಕರ್ತರು ಸ್ವಂತ ವಾಹನ ಹೊಂದಿದ್ದರೆ ಅಚ್ಚರಿಯಲ್ಲ, ಅದು ಈಗಿನ ಅನಿವಾರ್ಯತೆ. ಹೊಸ ಹೊಸ ಮಾಡೆಲ್ ಕಾರು, ಬೈಕ್, ಸ್ಕೂಟರ್ ಗಳನ್ನು ಈಗಿನ ಪತ್ರಕರ್ತರು ಹೊಂದಿದ್ದಾರೆ. 80ರ ದಶಕದಲ್ಲಿ ಪ.ಗೋ ಅವರೂ ವಾಹನ ಹೊಂದಿದ್ದರು. ಅದು ಬೈಕ್, ಆದರೆ ಅಂಥ ಬೈಕ್ ಮಂಗಳೂರಲ್ಲಿ ಬೇರೆ ಯಾರಲ್ಲೂ ಇರಲಿಲ್ಲ. ಅದು ಬ್ರಿಟೀಷರ ಕಾಲದ್ದೆಂದು ಅವರೇ ಹೇಳುತ್ತಿದ್ದರು, ಅದನ್ನು ನೋಡುವುದಕ್ಕೂ ಹಾಗೆಯೇ ಇತ್ತು. ಯಾವ ಮಾಡೆಲ್ ಎನ್ನುವುದಂತೂ ಗೊತ್ತಾಗುತ್ತಿರಲಿಲ್ಲ. ಕಪ್ಪು ಬಣ್ಣದ ಆ ಬೈಕ್ಗೆ ಹಾರನ್ ಇರಲಿಲ್ಲ ಮತ್ತು ಅದಕ್ಕೆ ಹಾರನ್ ಬೇಕಾಗಿರಲಿಲ್ಲ. ಯಾಕೆಂದರೆ ಅದು ಚಲಿಸುವಾಗ ಭಾರೀ ಸದ್ದು ಮಾಡುತ್ತಿತ್ತು. ಆ ಸದ್ದೇ ಒಂಥರಾ ಹಾರನ್ ಎನ್ನುವಂತಿತ್ತು. ದೂರದಲ್ಲಿ ಬರುವಾಗಲೇ ಕಿಗಡಚಿಕ್ಕುವ ವಿಚಿತ್ರವಾದ ಸದ್ದು ಬರುತ್ತಿತ್ತು. ಸೈಲೆನ್ಸರ್ ಇಲ್ಲದ ಬೈಕ್ ಅಥವಾ ಸ್ಕೂಟರ್ ನಿಂದ ಹೊರಹೊಮ್ಮುವ ಸೌಂಡ್ ರೀತಿಯಲ್ಲಿ ಆ ಬೈಕ್ ಕೂಡಾ ಸದ್ದು ಮಾಡುತ್ತಿತ್ತು.

ಹ್ಯಾಂಡಲ್, ಎರಡು ಟೈರ್, ಚೈನ್ ಬಿಟ್ಟರೆ ಬೇರೆ ಯಾವ ಭಾಗವೂ ಕಾಣುತ್ತಿರಲಿಲ್ಲ. ಕುಳಿತುಕೊಳ್ಳುವ ಸೀಟ್ ಕೂಡಾ ಗಟ್ಟಿಯಾಗಿರಲಿಲ್ಲ. ವಿತ್ರವೆಂದರೆ ಅದನ್ನು ಸ್ಟಾರ್ಟ್ ಮಾಡಲು ಈಗಿನಂತೆ ಕಿಕ್ಕರ್ ಅಥವಾ ಆಟೋ ಸ್ವಿಚ್ ಇರಲಿಲ್ಲ. ಸ್ವಲ್ಪ ದೂರ ಅದನ್ನು ದೂಡಿಕೊಂಡೇ ಓಡಬೇಕು. ಹಾಗೆ ದೂಡಿಕೊಂಡು ಓಡುವಾಗ ಇದ್ದಕಿದ್ದಂತೇಯೇ ಸ್ಟಾರ್ಟ್ ಆಗುತ್ತಿತ್ತು. ಅದು ಚಲಿಸುವಾಗಲೇ ಜಾಗರೂಕತೆಯಿಂದ ಜಂಪ್ ಮಾಡಿ ಕುಳಿತುಕೊಳ್ಳಬೇಕು. ನಂತರ ಅದು ಎಕ್ಸಿಲೇಟರ್ ಕೊಟ್ಟಷ್ಟೂ ವೇಗವಾಗಿ ಓಡುತ್ತಿತ್ತು.

ಇನ್ನೂ ವಿಚಿತ್ರವೆಂದರೆ ಅದು ಯಾವಾಗ ?, ಎಲ್ಲಿ ಮುಷ್ಕರ ಹೂಡುತ್ತದೆಂದು ಊಹಿಸಲಾಗುತ್ತಿರಲಿಲ್ಲ. ರನ್ನಿಂಗ್ನಲ್ಲಿದ್ದಾಗಲೇ ಏಕಾಏಕಿ ನಿಂತು ಬಿಡುತ್ತಿತ್ತು. ಮತ್ತೆ ಪ.ಗೋ ಇಳಿದು ಒಂದಷ್ಟು ದೂರ ದೂಡಿಕೊಂಡು ಹೋಗಿ ಸ್ಟಾರ್ಟ್ ಮಾಡಬೇಕಿತ್ತು. ಬಹಳ ವರ್ಷಗಳ ಕಾಲ ಅದು ಪ.ಗೋ ಸಂಗಾತಿಯಾಗಿತ್ತು. ಆ ಬೈಕ್ ಮೇಲೆ ಡಬ್ಬಲ್ ರೈಡ್ ಅಸಾಧ್ಯವಾಗಿತ್ತು. ಆ ಬೈಕ್ ಅದೆಷ್ಟೂ ಫೇಮಸ್ ಎಂದರೆ ರಸ್ತೆಯಲ್ಲಿ ಆ ಬೈಕ್ ಸದ್ದು ಕೇಳಿದರೆ ಪ.ಗೋ ಬರುತ್ತಿದ್ದಾರೆ ಎನ್ನುವಷ್ಟರಮಟ್ಟಿಗೆ.ಹಂಪನಕಟ್ಟೆಯಲ್ಲಿದ್ದುದು ಏಕೈಕ ಸಿಗ್ನಲ್. ಅಲ್ಲಿ ಮಾತ್ರ ಟ್ರಾಫಿಕ್ ಪೊಲೀಸರಿರುತ್ತಿದ್ದರು. ಪ.ಗೋ ಬೈಕ್ ಸಿಗ್ನಲ್ನಲ್ಲೇ ನಿಂತುಬಿಡುತ್ತಿತ್ತು. ಮತ್ತೆ ಅವರು ದೂಡಿಕೊಂಡು ಸ್ಟಾರ್ಟ್ ಮಾಡಿಕೊಳ್ಳುತ್ತಿದ್ದರು. ಆದರೆ ಯಾವ ಪೊಲೀಸ್ ಸಿಬ್ಬಂದಿ ಕೂಡಾ ಸಿಗ್ನಲ್ನಲ್ಲಿ ಪ.ಗೋ ಬೈಕ್ ನಿಂತರೂ ತಗಾದೆ ತೆಗೆಯುತ್ತಿರಲಿಲ್ಲ.

Yezdi_60_Jet

ಈ ಬೈಕ್ ಕೆಟ್ಟು ನಿಂತರೆ ಮಂಗಳೂರಲ್ಲಿ ರಿಪೇರಿ ಮಾಡಲು ಗೊತ್ತಿದ್ದುದು ಒಬ್ಬನೇ ಒಬ್ಬ ಫಿಟ್ಟರ್ ಎಂದು ಪ.ಗೋ ಹೇಳುತ್ತಿದ್ದರು. ಈ ಬೈಕ್ ರಿಪೇರಿ ಮಾಡಿ ಮಾಡಿ ಸುಸ್ತಾದ ಫಿಟ್ಟರ್ ಕೊನೆಗೆ ತನ್ನಿಂದ ಸಾಧ್ಯವಿಲ್ಲ ಎಂದ ಮೇಲೆ ಪ.ಗೋ ಆ ಬೈಕ್ ಮಾರಿದ್ದರು. ಪ.ಗೋ ಅವರು ಮಾರಿದ ಮೇಲೆ ಆ ಬೈಕ್ ಮತ್ತೆ ಮಂಗಳೂರಲ್ಲಿ ಎಲ್ಲೂ ಕಾಣಸಿಗಲಿಲ್ಲ. ಅದನ್ನು ಬಿಡಿ ಭಾಗಗಳನ್ನು ಮಾಡಿರಬೇಕು ಎಂದು ಪ.ಗೋ ಹೇಳುತ್ತಿದ್ದರು. ಅವರು ಬೈಕ್ ಮಾರಿದ ಮೇಲೆ ಸೆಕೆಂಡ್ಹ್ಯಾಂಡ್ ಸ್ಕೂಟರ್ ಖರೀದಿಸಿದ್ದರು. ಅದೂ ಕೂಡಾ ಅವರ ಕೊನೆಗಾಲದ ತನಕವೂ ಇತ್ತು. ಅದರಲ್ಲಿ ಬೇರೆ ಪತ್ರಕರ್ತರಿಗೆ ಡ್ರಾಪ್ ಕೊಡುತ್ತಿದ್ದರು. ನಾನೂ ಕೂಡಾ ಬಹಳ ವರ್ಷಗಳ ಕಾಲ ಆ ಸ್ಕೂಟರ್ ಹಿಂಬದಿ ಸವಾರನಾಗಿ ಕುಳಿತಿದ್ದೆ.

ಪತ್ರಕರ್ತರಾಗಿದ್ದ ಪ.ಗೋ ಅವರು ಲಟಾರಿ ಬೈಕ್ನಲ್ಲಿ ಓಡಾಡುವುದನ್ನು ಕಂಡು ಅನೇಕ ಸಲ ಯಾಕೆ ಬೇರೆ ಬೈಕ್ ಖರೀದಿಸುವುದಿಲ್ಲವೆಂದು ಕೇಳಿದ್ದೆ. ಯಾಕೆಂದರೆ ಆ ಬೈಕ್ ಹೊರಹೊಮ್ಮಿಸುತ್ತಿದ್ದ ಸೌಂಡ್, ಅದನ್ನು ದೂಡಿಕೊಂಡು ಸ್ಟಾರ್ಟ್ ಮಾಡುವುದು, ಓಡುವಾಗಲೇ ಹತ್ತಿ ಕುಳಿತುಕೊಳ್ಳಬೇಕು. ಈ ಬೈಕ್ ಸ್ಟಾರ್ಟ್ ಮಾಡುವುದನ್ನು ಕಂಡು ಸಾರ್ವಜನಿಕರು ತಮ್ಮೊಳಗೇ ನಗುತ್ತಿದ್ದರು. ಅದನ್ನು ನೋಡುವಾಗಲೆಲ್ಲಾ ಮನಸ್ಸಿಗೆ ಬೇಸರವಾಗುತ್ತಿತ್ತು.

ಯಾವುದೇ ಗಣ್ಯಾತಿ ಗಣ್ಯರ ಕಾರ್ಯಕ್ರಮಕ್ಕೆ ಬರುವುದಿದ್ದರೂ ಪ.ಗೋ ಅದೇ ಬೈಕ್ನಲ್ಲಿ . ವೈ.ಎಸ್.ಹೆಗ್ಡೆ ಆಗ ಕಾರ್ಪೊರೇಷನ್ ಬ್ಯಾಂಕ್ ಚೇರ್ಮನ್. ಸಿಂಡಿಕೇಟ್ ಬ್ಯಾಂಕ್ ಜಿಲ್ಲಾ ಲೀಡ್ ಬ್ಯಾಂಕ್. ಜನಾರ್ದನ ಪೂಜಾರಿಯವರ ಸಾಲಮೇಳದ ಕಾಲ. ಹೊಲಿಗೆ ಮೆಷಿನ್ ನಿಂದ ಹಿಡಿದು ಬಸ್ಸು ಖರೀದಿ ವರಗೆ ಸಾಲ ವಿತರಿಸುತ್ತಿದ್ದರು. ಸಾಲಮೇಳ ಇಡೀ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿತ್ತು. ಒಂದು ಮಾತನ್ನು ಬ್ಯಾಂಕ್ ಚೇರ್ಮನ್ಗೆ ಹೇಳಿದರೆ ತಕ್ಷಣಕ್ಕೆ ಸಾಲ ಮಂಜೂರಾಗುವಂಥ ವ್ಯವಸ್ಥೆ, ಜೊತೆಗೆ ಪ.ಗೋ ಪ್ರಭಾವಿ ಕೂಡಾ.

ಬ್ಯಾಂಕ್ ಎಜಿಎಂಗಳು ಪತ್ರಿಕಾಗೋಷ್ಠಿ ಆಯೋಜಿಸಿ ಪತ್ರಕರ್ತರನ್ನು ಕಾಯುತ್ತಿದ್ದರು. ಮ್ಯಾನೇಜರ್ಗಳು ಪ.ಗೋ ಅವರು ಪ್ರಶ್ನೆ ಕೇಳುವುದನ್ನು ಕಂಡು ದಿಗಿಲಾಗುತ್ತಿದ್ದರು. ಸ್ವತ: ಚೇರ್ಮನ್ಗಳು ಪ.ಗೋ ಮಾತಿಗೆ ಮೌನವಾಗಿಬಿಡುತ್ತಿದ್ದರು. ಪ.ಗೋ ಬರಹಕ್ಕೆ ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದವರೂ ತಲೆದೂಗುತ್ತಿದ್ದರು. ಇಷ್ಟೆಲ್ಲಾ ಅನುಕೂಲಕರ ವಾತಾವರಣವಿದ್ದರೂ ಪ.ಗೋ ಮಾತ್ರ ನಗೆಪಾಟಲಿಗೀಡಾಗುವಂಥ ಬೈಕ್ನಲ್ಲಿ ಓಡಾಡುತ್ತಿದ್ದರು. ಅವರು ಅದೆಷ್ಟೋ ಸಲ ಆ ಬೈಕ್ನಲ್ಲಿ ನನಗೆ ಡ್ರಾಪ್ ಕೊಡುವುದಾಗಿ ಹೇಳಿದಾಗ ಅದು ಅರ್ಧದಾರಿಯಲ್ಲಿ ನಿಂತರೆ ಮತ್ತೆ ದೂಡಬೇಕು, ಜನ ನೋಡಿ ನಗಾಡುತ್ತಾರೆನ್ನುವ ನಾಚಿಕೆಯಿಂದ ಡ್ರಾಪ್ ಬೇಡವೆಂದು ನಡೆದುಕೊಂಡೇ ಹೋಗುತ್ತಿದ್ದೆ ಮಾತ್ರವಲ್ಲ ಆ ಬೈಕ್ ನಲ್ಲಿ ಒಂದು ಸಲವೂ ಕುಳಿತಿಲ್ಲ.
ಹಾಗೆಂದು ಅವರಿಗೆ ಅದೇ ಬೈಕ್ನಲ್ಲಿ ಜನ ನೋಡಿ ನಗಾಡುತ್ತಿದ್ದರೂ ಅವಮಾನ ಸಹಿಸಿಕೊಂಡು ಇರಬೇಕೆನ್ನುವ ತುಡಿತವಿರಲಿಲ್ಲ. ಹೊಸದರ ಬಗ್ಗೆ ತಿರಸ್ಕಾರವಾಗಲೀ, ಆ ಬೈಕ್ ಮೇಲೆ ವ್ಯಾಮೋಹ ಇತ್ತೆಂದು ಹೇಳುವಂತಿರಲಿಲ್ಲ. ಆ ಬೈಕ್ನಿಂದಾಗಿ ತಮ್ಮ ಘನತೆಗೆ ಕುಂದು ಬರುತ್ತಿದೆ ಎಂದು ಅಂದುಕೊಂಡಿರಲಿಕ್ಕಿಲ್ಲ ಪ.ಗೋ. ಆದರೆ ಅವರು ಆ ಬೈಕ್ ಸಂಗಾತಿ ಮಾಡಿಕೊಂಡು ಓರ್ವ ಹಿರಿಯ ಪತ್ರಕರ್ತರಾಗಿ ಅವಮಾನಕ್ಕೊಳಗಾಗುತ್ತಿದ್ದಾರೆ ಎನ್ನುವ ವ್ಯಥೆ ನನ್ನನ್ನು ಕಾಡುತ್ತಿತ್ತು.

ಪ.ಗೋ ಅವರಿಗೆ ಸೀರಿಯಸ್ಸಾಗಿ ಹೇಳಿದೆ ಆ ಬೈಕ್ ಸಹವಾಸ ಬಿಡಿ. ಯಾವ ಬ್ಯಾಂಕ್ಗೆ ಬೇಕಾದರೂ ಹೋಗೋಣ, ಸಾಲ ಕೊಡುತ್ತಾರೆ ಎನ್ನುವ ಸಲಹೆ ಕೊಟ್ಟೆ. ಆಗ ಅವರು ನಯವಾಗಿ ನನ್ನ ಸಲಹೆಯನ್ನು ತಳ್ಳಿ ಹಾಕಿ ಮರಿ ನೀನು ಇನ್ನೂ ಚಿಕ್ಕವನು, ಸಾಲದ ಸಹವಾಸ ಬೇಡ. ಸ್ವಲ್ಪ ಅನುಭವ ಆಗಲಿ, ಆಗ ನೀನೇ ಹೇಳ್ತಿ ಎಂದವರೇ ಬಾ ಚಾ ಕುಡಿಯುವ ಎನ್ನುತ್ತಾ ನನ್ನನ್ನು ಮಾತಿನಿಂದ ಕಟ್ಟಿ ಹಾಕಿದರು.

ಸಾಲ ಮಾಡುವುದಕ್ಕೆ ಯಾಕೆ ಮುಜುಗರ ಪಡಬೇಕು ? ಎನ್ನುವುದು ನನಗಂತೂ ಅರ್ಥವಾಗಲಿಲ್ಲ. ಬ್ಯಾಂಕ್ ಚೇರ್ಮನ್ಗಳೇ ನಮಸ್ಕಾರ ಕೊಟ್ಟು ಚೇಂಬರ್ಗೆ ಬರಮಾಡಿಕೊಳ್ಳುವಷ್ಟು ಪ್ರಭಾವಿ ಪ.ಗೋ ಯಾರ ಮುಲಾಜಿಗೂ ಬೀಳುವಂಥ ಮನಸ್ಥಿತಿಯರಲ್ಲ ಎನ್ನುವುದು ಅರಿವಾಗಲು ಅನೇಕ ವರ್ಷಗಳೇ ಬೇಕಾದವು. ತಾನು ಸಾಲ ಮಾಡಿ ಮರುಪಾವತಿ ಮಾಡಿದರೂ ಸಾಲಕೊಟ್ಟವರ ಮುಲಾಜಿಗೆ ಒಳಗಾಗುತ್ತೇನೆ ಎನ್ನುವ ಮನಸ್ಥಿತಿ ಅವರದ್ದಾಗಿತ್ತು. ಅವರು ಪಡೆಯುತ್ತಿದ್ದ ಸಾಲವನ್ನು ಮರುಪಾವತಿ ಮಾಡುವುದೇನೂ ಅವರಿಗೆ ಕಷ್ಟದ ವಿಚಾರವಾಗಿರಲಿಲ್ಲ. ಸಾಲ ಎನ್ನುವುದು ಬ್ಯಾಂಕಿನವರ ಉದಾರ ಕೊಡುಗೆಯೂ ಅಲ್ಲ, ಆದರೂ ತಾನು ನಿರ್ವಹಿಸುವ ವೃತ್ತಿಯ ಮೇಲೆ ಆ ಸಾಲದ ಛಾಯೆ ಬೀಳಬಹುದು ಎನ್ನುವ ಆತಂಕ ಅವರನ್ನು ಆ ಹೊತ್ತಲ್ಲೂ ಕಾಡುತ್ತಿತ್ತು. ನಡುರಸ್ತೆಯಲ್ಲಿ ಬೈಕ್ ಕೆಟ್ಟಾಗ ದೂಡಿಕೊಂಡು ಹೋಗಿ ಸ್ಟಾರ್ಟ್ ಮಾಡಿ ಮನೆ ಮುಟ್ಟುವುದು ಪ.ಗೋ ಅವರಿಗೆ ಅವಮಾನ ಅನ್ನಿಸಿರಲಿಲ್ಲ. ಸಾಲ ಮಾಡಿ ಹೊಸ ಬೈಕ್ ಖರೀದಿಸುವುದು ಅವರ ಮಟ್ಟಿಗೆ ಸಹಿಸಿಕೊಳ್ಳಲಾಗದಂಥ ಅವಮಾನವಾಗಿತ್ತು.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment