ಕುಂದಾಪುರ: ಎಪ್ರಿಲ್ ಏಳರಂದು ಬುಧವಾರ ರಾತ್ರಿ ನಗರ ಪ್ರಸಿದ್ಧ ಲಾಡ್ಜೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ವೃದ್ಧೆಯ ಪ್ರಕರಣ ಕೊಲೆ ಎಂದು ವೃದ್ಧೆಯ ಮಗ ಕುಂದಾಪುರ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ಆರೋಪಿ ಅಝರ್ ಅಫ್ಝಲ್ ಖಾನ್ ಯಾನೇ ಅಜಯ್‌ಬಾಬುವನ್ನು ಹಾಗೂ ವೃದ್ಧೆಯ ಮಗಳು ಶೋಭಾ ಯಾನೇ ವೈಷ್ಣವಿಯನ್ನು ವಾರ ಕಳೆದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
ವೃದ್ಧೆ ಲಲಿತಾ ದೇವಾಡಿಗರ ಸಾವಿಗೆ ಹೊಸ ತಿರುವು ಲಭಿಸಿದ್ದು, ಆಕೆಯ ಸಾವಿನ ದಿನವೇ ಕುಂದಾಪುರದಿಂದ ನಾಪತ್ತೆಯಾದ ಮುಂಬೈ ಮೂಲದ ಯುವಕನ ಜೊತೆಗೆ ಮುಂಬೈಯಲ್ಲಿ ವಾಸವಿದ್ದ ವೃದ್ಧೆಯ ಮಗಳು ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬೆನ್ನಲ್ಲೇ ಕುಂದಾಪುರ ಪೊಲೀಸರು ಮುಂಬೈ ಪೊಲೀಸರ ಸಹಾಯದೊಂದಿಗೆ ಆರೋಪಿಗಳನ್ನು ಪತ್ತೆ ಮಾಡಲು ನಡೆಸಿದ ಪ್ರಯತ್ನ ವಿಫಲವಾಗಿದೆ
ಮಕ್ಕಳು ಮನೆಗೆ: ಪೊಲೀಸರು ಬರುತ್ತಾರೆ ಎನ್ನುವ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಗುಜರಾತ್‌ನತ್ತ ಪ್ರಯಾಣಿಸಿದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೋಮವಾರ ಗುಜರಾತ್‌ಗೆ ತೆರಳಿದ್ದರು. ಆದರೆ ಅದಾಗಲೇ ಅಝರ್ ಮತ್ತು ಶೋಭಾ ತನ್ನ ಇಬ್ಬರು ಮಕ್ಕಳನ್ನು ಮುಂಬೈಯ ತನ್ನ ಮನೆ ಸಮೀಪ ಕರೆತಂದಿದ್ದು, ಅಲ್ಲಿ ಬಿಟ್ಟಿದ್ದಾರೆ. ಮತ್ತು ತಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಮಕ್ಕಳಿಗೆ ತಿಳಿಸಿ ಹೋಗಿರುವುದಾಗಿ ತಿಳಿದು ಬಂದಿದೆ. ಕುಂದಾಪುರ ಪೊಲೀಸರು ಗುಜರಾತ್‌ನಲ್ಲಿಯೇ ಇದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳು ಮಕ್ಕಳನ್ನು ಮುಂಬೈನಲ್ಲಿ ಬಿಟ್ಟು ಮತ್ತೆ ಗುಜರಾತ್‌ಗೆ ಹೋಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕೊಲೆ ಶಂಕೆ: ಸಾವಿಗೀಡಾದ ವೃದ್ಧೆಯ ಕುತ್ತಿಗೆಯಲ್ಲಿ ಟವೆಲ್ ಸುತ್ತಿಕೊಂಡಿತ್ತಾದರೂ ಕುತ್ತಿಗೆಯಲ್ಲಿ ಟವೆಲ್ ಸುತ್ತಿ ಸಾಯಿಸಿದ ಬಗ್ಗೆ ಮರಣೋತ್ತರ ಶವ ಪರೀಕ್ಷೆಯಲ್ಲಿ ತಿಳಿದು ಬಂದಿಲ್ಲವೆನ್ನಲಾಗಿದೆ. ಆದರೆ ಆಕೆಯ ಗಂಟಲಿನಲ್ಲಿ ಬೆರಳಿನಿಂದ ಅದುಮಿದಂತಿರುವ ಗುರುತುಗಳು ಕಂಡು ಬಂದಿದ್ದು, ಆರೋಪಿ ಅಝರ್ ಅಫ್ಝಲ್ ಖಾನ್ ಯಾನೇ ಅಜಯ್ ಬಾಬುವಿನ ಬೆರಳ ಗುರುತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಅನೈತಿಕ ಸಂಬಂಧ: ಸುಮಾರು ಎಂಟು ವರ್ಷಗಳಿಂದ ಕುಟುಂಬ ಸ್ನೇಹಿತನಂತಿದ್ದ ಅಝರ್ ಯಾನೇ ಅಜಯ್ ಸಾವಿಗೀಡಾದ ಲಲಿತಾ ದೇವಾಡಿಗರ ಪುತ್ರಿ ಶೋಭಾ ಯಾನೇ ವೈಷ್ಣವಿ ಜೊತೆ ಸಂಬಂಧ ಇತ್ತೆನ್ನಲಾಗುತ್ತಿದ್ದು, ಲಾಡ್ಜ್‌ನಲ್ಲಿ ಈ ಬಗ್ಗೆ ಶೋಭಾ ತಾಯಿ ಲಲಿತಾ ದೇವಾಡಿಗರ ಹತ್ತಿರ ಶೋಭಾಳನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿರಬಹುದು. ಆಗ ಅದನ್ನು ಲಲಿತಾ ದೇವಾಡಿಗ ಆಕ್ಷೇಪಿಸಿರಬಹುದು ಎಂದು ಅಂದಾಜಿಸಲಾಗುತ್ತಿದ್ದು, ಅದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೇ ಕೊಲೆ ನಡೆದ ದಿನವೇ ಇಬ್ಬರೂ ನಾಪತ್ತೆಯಾಗಿರುವುದು ಈ ಊಹೆಗೆ ಪುಷ್ಟಿ ನೀಡಿದಂತಾಗಿದ್ದು, ಇಬ್ಬರೂ ಜೊತೆಯಲ್ಲಿಯೇ ವಾಸವಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಕುಂದಾಪುರ ಪೊಲೀಸರು ವ್ಯಕ್ತಪಡಿಸಿದ್ದು, ಅದರ ನಂತರವಷ್ಟೇ ಕೊಲೆಯ ಹಿಂದಿನ ಸತ್ಯ ಬಹಿರಂಗಗೊಳ್ಳಬೇಕಿದೆ.