ಕುಂದಾಪುರ: ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ಸೋಮವಾರ ಮಧ್ಯಾಹ್ನ ಶವವಾಗಿ ಪತ್ತೆಯಾದ ಕಡಿದ ಹೆದ್ದಾರಿ ನಿವಾಸಿ ವಿಜಯ್ ಕಾರಂತ (31)ಅವರನ್ನು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಕೋಟ ಪೊಲೀಸರು ಬಂಧಿಸುವ ಮೂಲಕ ಘಟನೆಯನ್ನು ಬೇಧಿಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನು ಕಾರ್ಕಡ ನಿವಾಸಿಯಾಗಿರುವ ಹತ್ಯೆಗೀಡಾದ ವಿಜಯ ಕಾರಂತ್ ಸ್ನೇಹಿತ ಶರತ್ ಪೂಜಾರಿ(33) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ವಿಜಯ್ ಕಾರಂತ ಸೋಮವಾರ ಮಧ್ಯಾಹ್ನ ಮನೆಯಲ್ಲಿ ಅಸ್ವಸ್ಥನಾಗಿ ಬಿದಿದ್ದ, ಅನಂತರ ಸ್ಥಳೀಯರು ಇತನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಮೃತನ ಎದೆಯ ಎಡ ಭಾಗದ ಪಕ್ಕೆಲುಬಿನ ಪಕ್ಕದಲ್ಲಿ ಚಾಕುವಿನಿಂದ ತಿವಿದ ರೀತಿಯ ಗಾಯವಾಗಿದ್ದು, ಘಟನೆಯ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ಸಣ್ಣ ವಿಷಯವೊಂದಕ್ಕೆ ಸಂಬಂಧಿಸಿ ವಿಜಯ್ ಹಾಗೂ ಇತನ ನೆರಮನೆಯ ಸ್ನೇಹಿತನ ನಡುವೆ ಜಗಳವಾಗಿದ್ದು, ಈ ಸಂದರ್ಭದಲ್ಲಿ ನೆರಮನೆಯ ವ್ಯಕ್ತಿ ವಿಜಯ್ಗೆ ಚಾಕುವಿನಿಂದ ಇರಿದಿದ್ದು, ಹಲ್ಲೆಯ ತೀವ್ರತೆಗೆ ವಿಜಯ್ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ನೆರಮನೆಯ ಶರತ್ ಪೂಜಾರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದು ಈತನದ್ದೆ ಕೃತ್ಯ ಎನ್ನಲಾಗಿದೆ.
ಹಲ್ಲೆಯ ಅನಂತರ ಪ್ರಕರಣವನ್ನು ಮುಚ್ಚಿಹಾಕುವ ತಂತ್ರ ನಡೆದಿದ್ದು, ಹಲ್ಲೆ ನಡೆಸಿದ ವ್ಯಕ್ತಿಗಳೇ ವಿಜಯ್ ಅಸ್ವಸ್ಥನಾಗಿದ್ದಾನೆ ಎಂದು ಸ್ಥಳೀಯರಿಗೆ ತಿಳಿಸಿದ್ದರು. ಆರಂಭದಲ್ಲಿ ಸ್ಥಳೀಯರು ವಿಜಯ ಕಾರಂತ ಮದ್ಯಪಾನದಿಂದ ಅಸ್ವಸ್ಥನಾಗಿದ್ದ ಎಂದು ಅನುಮಾನಿಸಿದ್ದರು. ಅನಂತರ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸುವಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದ ವ್ಯಕ್ತಿಗಳು ವಿಚಲಿತರಾಗದೆ ಸ್ಥಳೀಯರು ಹಾಗೂ ಪೊಲೀಸರಿಗೆ ಘಟನೆಯ ಕುರಿತು ತಪ್ಪು ಮಾಹಿತಿಗಳನ್ನು ನೀಡುತ್ತ ಪ್ರಕರಣವನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ್ದರೆನ್ನಲಾಗಿದೆ.
ವಿಜಯ್ ಕಾರಂತ ರಾಜ್ಯಮಟ್ಟದ ಕ್ರಿಕೇಟ್ ಪಟುವಾಗಿದ್ದು, ಎಸೆತಗಾರಿಕೆಯಲ್ಲಿ ಬಹಳಷ್ಟು ಹೆಸರು ಮಾಡಿದ್ದ. ಘಟನಾ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್.ನಾಯಕ್ ಹಾಗೂ ಸಿಬಂದಿಗಳು ತನಿಖೆ ನಡೆಸುತ್ತಿದ್ದಾರೆ.

