ಕುಂದಾಪುರ: ನಮ್ಮ ಮಾತೃ ಭಾಷೆಯನ್ನು ಉಳಿಸುವ ಹಾಗೂ ಬೆಳೆಸುವ ಬಗ್ಗೆ ಹಿಂಜರಿಕೆ ಇರಕೂಡದು. ನಮ್ಮ ಭಾಷೆ ಹಾಗೂ ನೆಲದ ಬಗ್ಗೆ ಅಭಿಮಾನ ಬೆಳೆದರೆ, ನಮ್ಮ ಸಂಸ್ಕೃತಿ ಅರಳುತ್ತದೆ ಹಾಗೂ ಬೆಳೆಯುತ್ತಿದೆ. ಸಂಸ್ಕೃತಿ ಉಳಿಯುವುದರಿಂದ ಸಮಾಜದಲ್ಲಿನ ಬಾಂಧವ್ಯ ವೃದ್ದಿಸುತ್ತದೆ ಎಂದು ಮೂಡಬಿದಿರಿ ಆಳ್ವಾಸ್ ಫೌಂಡೇಶನ್‌ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಇಲ್ಲಿನ ಬೋರ್ಡ್ ಹೈಸ್ಕೂಲಿನ ಆವರಣದಲ್ಲಿ ನಡೆದ ಆಳ್ವಾಸ್ ವಿರಾಸತ್ ವೈಭವ-2015 ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜವನ್ನು ಪ್ರತಿಬಿಂಬಿಸುವ ಭಾಷೆಯಲ್ಲಿ, ಸಂಸ್ಕೃತಿಯ ಸೊಗಡಿದೆ, ಜನಪದೀಯ ಪದ್ದತಿಗಳಿವೆ, ಪರಂಪರೆಯ ವೈಭವಗಳಿವೆ. ವಿಶ್ವದ ಹೆಚ್ಚಿನ ದೇಶಗಳು, ಭಾಷೆಯ ಜತೆಗಿನ ಸಂಬಂಧಗಳೊಂದಿಗೆ ಬದುಕುತ್ತದೆ. ಬಹು ಭಾಷೆ ಹಾಗೂ ಬಹು ಸಂಸ್ಕೃತಿಗಳ ತವರಾಗಿರುವ ಭಾರತದಲ್ಲಿನ ಪ್ರತಿಯೊಂದು ಭಾಷೆ ಹಾಗೂ ಸಂಸ್ಕೃತಿಗಳಿಗೂ, ತನ್ನದೆ ಆದ ವೈಶಿಷ್ಠ್ಯಗಳಿವೆ. ನಮ್ಮ ನೆಲದ ಸಂಸ್ಕೃತಿಯ ಸೊಗಡ ಹಾಗೂ ಪರಂಪರೆಯನ್ನು, ಉಳಿಸುವ ಹಾಗೂ ಬೆಳೆಸುವ ಸದುದ್ದೇಶದಿಂದ ಆಳ್ವಾಸ್ ಫೌಂಡೇಶನ್, ಕಳೆದ ಹಲವು ವರ್ಷಗಳಿಂದ, ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಆಳ್ವಾ ನುಡಿದರು.
ಸಮಾಜದ ಎಲ್ಲ ಜಾತಿ ಹಾಗೂ ಧರ್ಮದ ಮಕ್ಕಳಿಗೂ ಶಿಕ್ಷಣದ ಅವಕಾಶಗಳು ದೊರಕಬೇಕು ಎನ್ನುವ ಚಿಂತನೆಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬದ್ದವಾಗಿದೆ. ಮಕ್ಕಳಲ್ಲಿರುವ ಆಸಕ್ತಿಗಳಿಗೆ ಪೂರಕವಾಗಿ ಸ್ಪಂದಿಸಬೇಕು ಎನ್ನುವ ಕಾಳಜಿ ನಮಗಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭಾನ್ವೀತರಿಗೆ ಶಿಕ್ಷಣ ಬದುಕಿನ ಕೊಂಡಿಯಾಗಬೇಕು ಎನ್ನುವ ಆಶಯ ನಮ್ಮದು. ದೇಶ-ವಿದೇಶದ, ಬೇರೆ ಬೇರೆ ಭಾಷೆಗಳನ್ನು ಆಡುವ, ವಿಭಿನ್ನ ಸಂಸ್ಕೃತಿಗಳನ್ನು ನೆಚ್ಚಿಕೊಂಡಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ, ಆಳ್ವಾಸ ಶಿಕ್ಷಣ ಸಂಸ್ಥೆ ಸಾಧನೆಯ ವೇದಿಕೆಯಾಗಬೇಕು ಎನ್ನುವ ಕಲ್ಪನೆಯೊಂದಿಗೆ ಕಟ್ಟಿದ ಈ ವಿದ್ಯಾ ದೇಗುಲಗಳಲ್ಲಿ, ಕಲಿಯುತ್ತಿರುವ ಮಕ್ಕಳು, ವಿದ್ಯೆಯ ಜತೆಯಲ್ಲಿ, ಸಮಾಜದ ಎಲ್ಲ ಆಯಾಮಗಳಲ್ಲಿಯೂ ಪ್ರತಿಭೆಗಳಾಗಿ ಹೊರ ಹೊಮ್ಮುತ್ತಿರುವುದು, ನನಗೆ ಹೆಮ್ಮೆ ಹಾಗೂ ಸಂತೃಪ್ತಿಯನ್ನು ತರುತ್ತಿದೆ ಎಂದು ಅವರು ನುಡಿದರು.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.
ಕುಂದಾಪುರದ ಹೋಲಿ ರೋಜರಿ ಇಗರ್ಜಿಯ ಧರ್ಮಗುರುಗಳಾದ ಅನಿಲ್ ಡಿಸೋಜಾ ಆಶೀರ್ವಚನ ನೀಡಿದರು. ಆಳ್ವಾಸ್ ನುಡಿಸಿರಿಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್, ಪುರಸಭೆಯ ಮಾಜಿ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ಕಲಾ ಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ.ಕಿಶೋರಕುಮಾರ, ಭಾರತ್ ಸೇವಾದಳದ ತಾಲ್ಲೂಕು ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಮೊಳಹಳ್ಳಿ, ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ರಾಮಕ್ಷತ್ರೀಯ ಸಮಾಜದ ಅಧ್ಯಕ್ಷ ಸುರೇಶ್ ಬೆಟ್ಟಿನ್, ವಕೀಲರ ಸಂಘದ ಅಧ್ಯಕ್ಷ ಎ.ಬಿ ಶೆಟ್ಟಿ, ಉದ್ಯಮಿಗಳಾದ ಬಿ.ಅರುಣ್‌ಕುಮಾರ ಶೆಟ್ಟಿ, ಜಿ.ದತ್ತಾನಂದ, ಕೋಟ ಇಬ್ರಾಹಿಂ ಸಾಹೇಬ್, ಡಾ.ಮೋಹನ್ ಕಾಮತ್, ಡಾ.ಸತೀಶ್ ಪೂಜಾರಿ, ವಿ.ಗಣೇಶ್ ಕೊರಗ, ಎಂ.ಎಂ ಸುವರ್ಣ ಅತಿಥಿಗಳಾಗಿದ್ದರು.
ಆಳ್ವಾಸ್ ನುಡಿಸಿರಿಯ ತಾಲ್ಲೂಕು ಘಟಕದ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿದರು, ಮೇಧಿನಿ ಶೆಟ್ಟಿ ಪ್ರಾರ್ಥಿಸಿದರು, ಕೋಶಾಧಿಕಾರಿ ವಿಶ್ವನಾಥ ಕರಬ ನಿರೂಪಿಸಿದರು, ಮಂಜು ಕಾಳಾವರ ವಂದನೆ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಜೀವನ್‌ರಾಂ ಸುಳ್ಯ ಅವರ ನಿರ್ದೇಶನದ ನಾಟಕ ’ಬರ್ಬರಿ’ ಹಾಗೂ ಇತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸುಮಾರು 3.30 ಗಂಟೆಗಳ ಕಾಲ ನಡೆದ ಈ ಸಾಂಸ್ಕೃತಿಕ ವೈಭಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.



















































































































