ಮಂಗಳೂರು: ಕಂಬಳ ಸಹಿತ ಪ್ರಾಣಿ ಹಿಂಸೆಯಾಗುವ ಗ್ರಾಮೀಣ ಕ್ರೀಡೆಗಳನ್ನು ನಡೆಸಕೂಡದು ಎಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ಬಂದಿದ್ದು, ಜಿಲ್ಲಾಡಳಿತ ಆದೇಶ ಪಾಲನೆಗೆ ಮುಂದಾಗಿದೆ.
ಪ್ರಾಣಿಹಿಂಸೆಯ ಕ್ರೀಡೆಗಳನ್ನು ನಿಷೇಧಿಸಬೇಕು ಎಂದು ಭಾರತೀಯ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿಯು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಇದರನ್ವಯ ಕಂಬಳ ಸಹಿತ ಪ್ರಾಣಿ ಹಿಂಸೆಯ ಕ್ರೀಡೆಗಳನ್ನು ನಿರ್ಬಂಧಿಸುವ ತೀರ್ಪುನ್ನು 2014ರ ಮೇ7ರಂದು ಸುಪ್ರೀಂ ಕೋರ್ಟ್ ಹೊರಡಿಸಿತ್ತು. ಇದರ ಪರಿಣಾಮ ಕರ್ನಾಟಕ ಕರಾವಳಿಯ ಕಂಬಳದ ಮೇಲೂ ಬೀರುವ ಸಾಧ್ಯತೆಯ ಬಗ್ಗೆ ಆಗಲೇ ಆತಂಕವಿತ್ತು. ಈಗ ಈ ಬಗ್ಗೆ ಅಧೀಕೃತ ಸೂಚನೆ ಹೊರಬಿದ್ದಿದೆ. ದ.ಕ. ಜಿಲ್ಲೆಗೂ ಇಂತಹ ಆದೇಶದ ಪ್ರತಿ ತಲುಪಿರುವ ಸಾಧ್ಯತೆ ಇದೆ. ಆದರೆ ದ.ಕ. ಜಿಲ್ಲೆಯಿಂದ ಅಧಿಕೃತ ಸೂಚನೆ ಹೊರಬಿದ್ದಿಲ್ಲ.
ತೀರ್ಪಿನ ಪ್ರತಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಿಂದ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರು, ಆಯೋಜಕರು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಶಿರ್ವದಲ್ಲಿ ಆಯೋಜಿಸಲಾಗಿದ್ದ ಕಂಬಳ ನಿಷೇಧಿಸಬೇಕು ಎಂದು ಕೋರಿ ಎನಿಮಲ್ ವೆಲ್‍ಫೇರ್ ಬೋರ್ಡ್‍ನವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅದರಂತೆ ಶಿರ್ವದ ಕಂಬಳ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆದೇಶ ಹೊರಡಿಸಿದ್ದಾರೆ. ಈ ಆದೇಶ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಕುತ್ತು ತಂದಿದೆ. ನ.15ರಿಂದ ಮಾ.28ರ ವರೆಗೆ ವಿವಿಧೆಡೆ ಕಂಬಳ ನಡೆಸಲು ಜಿಲ್ಲಾಡಳಿತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿದ ಕೆಲವೇ ಸಮಯದಲ್ಲಿ ರಾಜ್ಯ ಕಾರ್ಯದರ್ಶಿಯವರಿಂದ ಕಂಬಳ ನಿರ್ಬಂಧದ ಸೂಚನೆ ಬಂದಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸಹಿತ ದೇಶದ ವಿವಿಧೆಡೆ ರೈತರು ಬಹಳ ಹಿಂದಿನಿಂದಲೂ ಎತ್ತಿನ ಓಟವನ್ನು ನಡೆಸುತ್ತಿದ್ದಾರೆ. ಆದರೆ ಇದರಲ್ಲಿ ಪ್ರಾಣಿಹಿಂಸೆ ನಡೆಯುತ್ತಿದೆ ಎಂಬುದಾಗಿ ಸುಪ್ರೀಂ ಕೋರ್ಟ್‍ಗೆ ದೂರು ನೀಡಲಾಗಿತ್ತು. ಅದರಂತೆ ಈ ಕುರಿತು ಪರಾಮರ್ಶೆ ನಡೆಸಿ ಅಂತಿಮವಾಗಿ ಎಲ್ಲ ರೀತಿಯ ಜಾನುವಾರು ಹಿಂಸೆಯ ಕ್ರೀಡೆಗಳನ್ನು ನಿಷೇಧಿಸಿ 2014ರ ಮೇ 7ರಂದು ತೀರ್ಪು ನೀಡಿತ್ತು.
ಮುಖ್ಯವಾಗಿ ಜಲ್ಲಿಕಟ್ಟು (ಹೋರಿ ಬೆದರಿಸುವ ಸ್ಪರ್ಧೆ) ಕ್ರೀಡೆಯಲ್ಲಿ ಎತ್ತುಗಳಿಗೆ ಹೆಚ್ಚಿನ ಹಿಂಸೆ ನೀಡಲಾಗುತ್ತಿತ್ತು.