ಕರಾವಳಿ

ಎಚ್‌ಪಿಸಿಎಲ್ ಕಾಲನಿ ಬಳಿ ತೈಲ ಸೋರಿಕೆ : ಎಂಆರ್‌ಪಿಎಲ್ ವಿರುದ್ಧ ನಾಗರಿಕ ಹೋರಾಟ ಸಮಿತಿಯಿಂದ ವಿನೂತನ ಪ್ರತಿಭಟನೆ

Pinterest LinkedIn Tumblr

Mrpl_Dyfi_Protest_1

ಮಂಗಳೂರು, ನ. 14: ಜೋಕಟ್ಟೆ ಬಳಿಯ ಎಚ್‌ಪಿಸಿಎಲ್ ಕಾಲನಿ ಬಳಿಯ ಎಂಆರ್‌ಪಿಎಲ್‌ನ ತೃತೀಯ ಹಂತದ ಕೋಕ್ ಮತ್ತು ಸಲ್ಫರ್ ಘಟಕದಿಂದ ಸಮೀಪದ ನೀರಿನ ಹಳ್ಳದಲ್ಲಿ ತೈಲ ಸೋರಿಕೆಯಾದ ಘಟನೆಯನ್ನು ವಿರೋಧಿಸಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯು ಗುರುವಾರ ವಿನೂತನ ಪ್ರತಿಭಟನೆ ನಡೆಸಿತು. ಎಂಆರ್‌ಪಿಎಲ್‌ನ ಗೇಟ್‌ನ ಬಳಿಯಲ್ಲಿ ಹರಿಯುವ ಹಳ್ಳದ ಬಳಿ ಸಂಸ್ಥೆಯಿಂದ ನಿರ್ಮಿಸಲಾದ ಸರಳಿನ ಕಿಂಡಿಗಳ ಸಮೀಪ ಮಣ್ಣು ತುಂಬಿದ ಚೀಲಗಳನ್ನು ಇರಿಸಿ ತೊರೆಯ ನೀರಿನಲ್ಲಿ ಇಳಿದು ನಾಗರಿಕರು ಪ್ರತಿಭಟಿಸಿದರು.

ಎಂಆರ್‌ಪಿಎಲ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ‘ನಮ್ಮ ಮಣ್ಣು, ನೀರನ್ನು ಕಲುಷಿತಗೊಳಿಸದಿರಿ’ ಎಂದು ಎಚ್ಚರಿಸಿದರು.

Mrpl_Dyfi_Protest_2 Mrpl_Dyfi_Protest_3 Mrpl_Dyfi_Protest_4

ಜೋಕಟ್ಟೆ ನಾಗರಿಕರ ಹೋರಾಟ ಸಮಿತಿ ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಲ್ಫರ್ ಹಾಗೂ ಕೋಕ್ ಘಟಕದಿಂದ ಸ್ಥಳೀಯರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ಕೆಲ ಸಮಯದ ಹಿಂದೆ ಪ್ರತಿಭಟನೆ ನಡೆಸಿದಾಗ, ನಾವು ದುರುದ್ದೇಶದಿಂದ ಪ್ರತಿಭಟನೆ ನಡೆಸುವುದಾಗಿ ಆರೋಪಿಸಿದ್ದರು. ಅಲ್ಲದೆ ಸಂಸ್ಥೆಯು ಸಕಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂಬ ಹೇಳಿಕೆಯನ್ನೂ ನೀಡಿದ್ದರು.

Mrpl_Dyfi_Protest_8 Mrpl_Dyfi_Protest_11a Mrpl_Dyfi_Protest_5a Mrpl_Dyfi_Protest_6 Mrpl_Dyfi_Protest_7a Mrpl_Dyfi_Protest_9a

ಆದರೆ ಮೊನ್ನೆ ರಾತ್ರಿಯಿಂದ ನಿನ್ನೆ ಬೆಳಗ್ಗಿನವರೆಗೂ ನೀರಿನ ತೊರೆಯಲ್ಲಿ ಎಂಆರ್‌ಪಿಎಲ್‌ನ ಘಟಕದಿಂದ ತೈಲ ಸೋರಿಕೆಯಾಗುತ್ತಿದ್ದರೂ ಕಂಪೆನಿಯ ಗಮನಕ್ಕೆ ಬಂದಿರಲಿಲ್ಲ.ಬೆಳಗ್ಗಿನ ಹೊತ್ತು ನೀರಿನಲ್ಲಿ ತೈಲಾಂಶವನ್ನು ಕಂಡ ಸ್ಥಳೀಯರ ಸಂಸ್ಥೆಯ ಗಮನಕ್ಕೆ ತಂದರೂ ಮಧ್ಯಾಹ್ನದವರೆಗೆ ಕಂಪೆನಿಯಿಂದ ಯಾರೊಬ್ಬರೂ ಇತ್ತ ಸುಳಿದಿರಲಿಲ್ಲ. ನಾವು ಅದಾಗಲೇ ತೈಲಾಂಶದಿಂದ ಕೂಡಿದ್ದ ನೀರನ್ನು ಸಂಗ್ರಹಿಸಿದ್ದೆವು ಎಂಆರ್‌ಪಿಎಲ್‌ನ ಯು.ಟಿ.ಸಾಲ್ಯಾನ್ ಎಂಬವರು ಬಂದು ಸೋರಿಕೆಯಾಗಿರುವುದನ್ನು ಒಪ್ಪಿಕೊಂಡು ಸರಿಪಡಿಸುವುದಾಗಿ ಹೇಳಿ ತೆರಳಿದ್ದರು. ಬಳಿಕ ಸಂಜೆ ಬಂದು ನೀರನ್ನು ಶುದ್ಧಗೊಳಿಸಿ ಬಳಿಕ ನೀರನ್ನು ಸಂಗ್ರಹಿಸಿ ತಪಾಸಣೆಗೆ ಒಯ್ಯುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚಲು ಮುಂದಾಗಿದ್ದಾರೆ ಎಂದು ದೂರಿದರು.

ರಾತ್ರಿಯಿಂದ ಮರುದಿನ ಮಧ್ಯಾಹ್ನದವರೆಗೆ ತೈಲ ಸೋರಿಕೆ ಉಂಟಾಗಿದ್ದರೂ ಕಂಪೆನಿಯ ಗಮನಕ್ಕೆ ಬಂದಿಲ್ಲವೆಂದಾದರೆ ಇವರು ಕೈಗೊಂಡಿರುವ ಸುರಕ್ಷತಾ ಕ್ರಮವನ್ನು ಜನಸಾಮಾನ್ಯರು ಊಹಿಸಬಹುದು. ಹೀಗೇ ಮುಂದುವರಿದರೆ ಕಂಪೆನಿ ಮತ್ತೊಂದು ಭೋಪಾಲ್ ದುರಂತಕ್ಕೆ ಎಡೆ ಮಾಡಿಕೊಡುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರವೇ ಸ್ಪಷ್ಟನೆ ನೀಡಬೇಕು ಎಂದು ಮುನೀರ್ ಆಗ್ರಹಿಸಿದರು.

ಇಲ್ಲವಾದಲ್ಲಿ ಎಂಆರ್‌ಪಿಎಲ್‌ನ ಎಲ್ಲಾ ಗೇಟುಗಳನ್ನು ಮುಚ್ಚಿ ಉತ್ಪಾದನೆ ಹೊರಗೆ ಹೋಗದಂತೆ ೇರಾವ್ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಇಬ್ಬರು ಎಂಆರ್‌ಪಿಎಲ್ ಸಿಬ್ಬಂದಿಯನ್ನು ಪ್ರತಿಭಟನಕಾರರು ತರಾಟೆಗೈದರು. ಮಾತ್ರವಲ್ಲದೆ ಎಂಆರ್‌ಪಿಎಲ್ ಜೊತೆ ತಮಗೆ ಯಾವುದೇ ರೀತಿಯ ಮಾತುಕತೆ ಇಲ್ಲ. ಏನಿದ್ದರೂ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ಮಾತ್ರವಲ್ಲದೆ, ಹಳ್ಳದ ನೀರನ್ನು ಸಂಗ್ರಹಿಸಿದ್ದು, ಅದನ್ನು ಎಂಆರ್‌ಪಿಎಲ್ ಅಧಿಕಾರಿಗಳಿಗೆ ಕುಡಿಯಲು ನೀಡುವುದಾಗಿ ಹೇಳುತ್ತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಬಿ.ಎಸ್.ಹುಸೈನ್ ಜೋಕಟ್ಟೆ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಹಾಗೂ ಮನಪಾ ಸದಸ್ಯ ದಯಾನಂದ ಶೆಟ್ಟಿ, ಕಾಯದರ್ರ್ಶಿ ಸಂತೋಷ್ ಬಜಾಲ್, ನಾಗರಿಕ ಹೋರಾಟ ಸಮಿತಿಯ ಸಹ ಸಂಚಾಲಕ ಬಿ.ಎಚ್.ಮೊಯ್ದಿನ್ ಶರೀಫ್, ನಝೀರ್ ಜೋಕಟ್ಟೆ, ಬಾವಾ ಪಂಚಾಯತ್‌ಗುಡ್ಡೆ, ಮಾಧವ, ಗ್ರಾ.ಪಂ. ಅಧ್ಯಕ್ಷ ಶೇಕುಂಞಿ, ಸದಸ್ಯ ಸಂಶುದ್ದೀನ್, ಮಯ್ಯದ್ದಿ, ಹಕೀಂ, ತಾ.ಪಂ. ಮಾಜಿ ಸದಸ್ಯ ಟಿ.ಎ.ಖಾದರ್, ಶರೀಫ್ ನಿರ್ಮುಂಜೆ ಮೊದಲಾದವರು ಉಪಸ್ಥಿತರಿದ್ದರು.

Write A Comment