ಕರಾವಳಿ

ಎಂಎಸ್‌ಇಝೆಡ್‌ನ ಸಮಸ್ಯೆಗಳ ನಿವಾರಣೆಗೆ ಸೂಕ್ತ ಪರಿಹಾರ :ಜಿ.ಪಂ ನಲ್ಲಿ ವಿಶೇಷ ಸಭೆ.

Pinterest LinkedIn Tumblr

zp_meeting_photo_1

ಮಂಗಳೂರು, ನ.13: ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್‌ಇಝೆಡ್) ಕಾರ್ಯ ವ್ಯಾಪ್ತಿಯಲ್ಲಿನ ಹಲವಾರು ರೀತಿಯ ಸಮಸ್ಯೆಗಳಿಂದಾಗಿ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ತ್ಯಾಜ್ಯ ಸಮಸ್ಯೆ, ಹದಗೆಟ್ಟ ರಸ್ತೆಗಳ ಬಗ್ಗೆ ಸ್ಥಳೀಯರು ಯಾರಲ್ಲಿ ದೂರಬೇಕೆಂದು ತೋಚುತ್ತಿಲ್ಲ ಎಂಬ ಬೇಸರದ ನುಡಿಗಳು ದ.ಕ. ಜಿಪಂ ವಿಶೇಷ ಸಭೆ ಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು. ಕಂದಾಯ ಸಮಸ್ಯೆಗಳ ಕುರಿತಂತೆ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಕರೆಯಲಾದ ವಿಶೇಷ ಸಭೆಯಲ್ಲಿ ಸದಸ್ಯ ರಿತೇಶ್ ಶೆಟ್ಟಿ ಎಂಎಸ್‌ಇಝೆಡ್‌ನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.

ಎಸ್‌ಇಝೆಡ್ ಒಳಗೆ ಸುಮಾರು 2 ಸಾವಿರದಷ್ಟು ಕಾರ್ಮಿಕರಿದ್ದಾರೆ. ರಾತ್ರಿ ಹೊತ್ತು ಅವರ ಶೌಚಾಲಯದ ತ್ಯಾಜ್ಯವನ್ನು ತೋಡಿಗೆ ಮತ್ತು ಸೆಝ್‌ಗಾಗಿ ಸ್ವಾಧೀನಗೊಂಡಿರುವ ಖಾಲಿ ಜಾಗಕ್ಕೆ ಬಿಡುತ್ತಾರೆ. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ದಿನಕ್ಕೆ ನೂರಾರು ವಾಹನಗಳು ಓಡಾಡುವ ರಸ್ತೆ ಹದಗೆಟ್ಟಿದ್ದು, ಇದರ ದುರಸ್ತಿ ಮಾಡುವ ಬಗ್ಗೆ ಎಸ್‌ಇಝೆಡ್‌ನಲ್ಲಿ ಕೇಳಿದರೆ ಅವರು ಎಂಆರ್‌ಪಿ‌ಎಲ್‌ಗೆ ಸೇರಿದ್ದು ಎನ್ನುತ್ತಾರೆ. ಎಂಆರ್‌ಪಿ‌ಎಲ್‌ನವರು ನಮಗೆ ಸೇರಿದ್ದಲ್ಲ ಎನ್ನುತ್ತಾರೆ. ನಾವು ಯಾರಲ್ಲಿ ಕೇಳಬೇಕು? ಅಲ್ಲಿ ಎಲ್ಲಾ ಜಾಗವನ್ನು ಸ್ವಾಧೀನ ಮಾಡಿ ಕೊಂಡು ಶಾಲೆಯೊಂದನ್ನು ಬಿಟ್ಟಿದ್ದಾರೆ.

ಆ ಶಾಲೆಯಲ್ಲಿ 140ರಷ್ಟು ಮಕ್ಕಳಿದ್ದಾರೆ. ಶಾಲೆಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ರಿತೇಶ್ ಶೆಟ್ಟಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿ‌ಇ‌ಒ ತುಳಸಿ ಮದ್ದಿನೇನಿ, ಎಸ್‌ಇಝೆಡ್‌ನವರು ಶಾಲೆಗೆ ಪರ್ಯಾಯ ಸ್ಥಳ ಗೊತ್ತುಪಡಿಸಬೇಕು ಮತ್ತು ಕಟ್ಟಡ ಕಟ್ಟಿ ಶಾಲೆಯ ಸ್ಥಳಾಂತರಕ್ಕೆ ಮುಂದಾಗಬೇಕು ಎಂದು ಹೇಳಿದರು. ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಅಶೋಕ್ ಪ್ರತಿ ಕ್ರಿಯಿಸಿ, ಈ ಬಗ್ಗೆ ಎಸ್ ಇಝೆಡ್ ಜತೆ ಮಾತುಕತೆ ನಡೆಸಲಾಗಿದೆ. ತೋಡನ್ನು 3 ತಿಂಗಳೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಶಾಲೆ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಯ ಆದೇಶ ಕೋರಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಮಾತ ನಾಡಿದ ಜಿಲ್ಲಾ ಧಿಕಾರಿ ಎ.ಬಿ. ಇಬ್ರಾಹೀಂ, ಮುಂದಿನ ಎಸ್‌ಇಝೆಡ್ ಪುನರ್ವಸತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.

ಸರಕಾರಿ ಭೂಮಿಯಲ್ಲಿ ಅಕ್ರಮ ಕಲ್ಲುಕೋರೆ ಎಕ್ಕಾರು ಬಳಿ ಸರಕಾರಿ ಭೂಮಿಯಲ್ಲಿ ಅಕ್ರಮ ಕಲ್ಲುಕೋರೆ ನಡೆಸಲಾಗುತ್ತಿದೆ. ತಹಶೀಲ್ದಾರ್‌ರವರೇ ಕೋರೆ ನಡೆಸಲು ಅವಕಾಶ ನೀಡಿದ್ದಾರೆ. ಕೆಲ ಸಮಯದ ಹಿಂದೆ 20 ಕೋರೆಗಳಿಗೆ ದಾಳಿ ಮಾಡಿ 20 ಲಾರಿ ವಶಪಡಿಸಿಕೊಳ್ಳಲಾಗಿತ್ತು. ಒಂದು ತಿಂಗಳು ಸ್ಥಗಿತಗೊಂಡಿದ್ದ ಗಣಿ ಗಾರಿಕೆ ಮತ್ತೆ ನಡೆಯುತ್ತಿದೆ ಎಂದು ಸದಸ್ಯ ಈಶ್ವರ್ ಕಟೀಲ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀ ಲ್ದಾರ್, ಅಕ್ರಮ ಗಣಿಗಾರಿಕೆಯ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ 9.81 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು. ಆದರೆ ಅಲ್ಲಿ ಈಗಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್ ಕಟೀಲ್ ಆಗ್ರಹಿಸಿದಾಗ, ಎಕ್ಕಾರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸರಕಾರಿ ಜಮೀನನ್ನು ಗುರುತಿಸುವಂತೆ ಜಿಲ್ಲಾಧಿ ಕಾರಿ ಸೂಚಿಸಿದರು. ಸಜಿಪನಡುವಿನಲ್ಲಿ ಪುರಸಭೆ ತ್ಯಾಜ್ಯ ಘಟಕದ ಜಾಗದಲ್ಲಿ ಶಾಲೆ, ಅಂಗನವಾಡಿ ಇದೆ. ತ್ಯಾಜ್ಯ ನಿರ್ವ ಹಣೆಗೆ ಸಂಬಂಧಿಸಿ ನೀಡಲಾಗಿರುವ ಯಾವುದೇ ನಿಯಮಗಳನ್ನು ಪಾಲಿಸ ಲಾಗಿಲ್ಲ. ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಸದಸ್ಯೆ ಮಮತಾ ಗಟ್ಟಿ ದೂರಿದರು. 2008ರಲ್ಲಿ ಆ ಘಟಕ ಆರಂಭಿ ಸಲಾಗಿದ್ದು, ಆಗ ಯಾರೂ ಪ್ರಶ್ನಿಸಿ ರಲಿಲ್ಲ ಎಂದು ಅಧಿಕಾರಿ ತಾಕತ್ ರಾವ್ ಹೇಳಿದಾಗ, ಆ ಜಾಗದಲ್ಲಿ ಹಕ್ಕು ಪತ್ರದಲ್ಲಿ ವಾಸಿಸುತ್ತಿರುವರಿಗೆ ಬೇರೆ ಸ್ಥಳ ಗುರುತಿಸಿ ನೀಡಿ ಎಂದು ಸಿ‌ಇ‌ಒ ತಾಕೀತು ಮಾಡಿದರು.

ಅಲ್ಲಿನ ಸರಕಾರಿ ಜಾಗದಲ್ಲಿ ಹಕ್ಕು ಪತ್ರ ಇಲ್ಲದೆ ವಾಸಿಸುವವರೂ ಇದ್ದಾರೆ. ಹಕ್ಕುಪತ್ರ ಇದ್ದವರಿಗೆ ಮಾತ್ರ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಉಳಿದ ಬಡ ಮನೆಗಳವರು ಏನು ಮಾಡಬೇಕು ಎಂದು ಮಮತಾ ಗಟ್ಟಿ ಪ್ರಶ್ನಿಸಿದರು. ಸರಕಾರಿ ಜಾಗದಲ್ಲಿ ಹಕ್ಕುಪತ್ರ ಇಲ್ಲದೆ ವಾಸಿಸುತ್ತಿರುವವರು 94ಸಿ ಯಲ್ಲಿ ಅರ್ಜಿ ನೀಡಿದ್ದರೆ ಅವರಿಗೂ ಹಕ್ಕುಪತ್ರ ಇದ್ದವರ ಜತೆಯಲ್ಲಿ ಪರ್ಯಾಯ ಜಾಗ ಗುರುತಿಸಿ ನಿವೇ ಶನಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಧಿಕಾರಿ ನಿರ್ದೇಶಿಸಿದರು.

ಕೈಗಾರಿಕೆಗಳಿಂದ ಭೂಮಿ ಅತಿಕ್ರಮಣ : ದ.ಕ. ಜಿಲ್ಲೆಯಲ್ಲಿ ಹಲವಾರು ಎಕರೆ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲಾಗಿದೆ. ಆದರೆ ಕೈಗಾರಿಕೆಯವರು ನಿಗದಿತ ವ್ಯಾಪ್ತಿಗಿಂತ ಅಧಿಕ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳಿವೆ. ಖಾಸಗಿ ಆಸ್ಪತ್ರೆ, ಶಾಲೆ ಗಳಿಂದಲೂ ಇಂತಹ ಒತ್ತುವರಿ ನಡೆ ಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

ಮನೆ ನಿವೇಶನ: ಒಂದು ತಿಂಗಳೊಳಗೆ ಪ್ರಸ್ತಾವನೆ ಇತ್ಯರ್ಥ
ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿ ಸಿದ ಒಟ್ಟು ಪ್ರಸ್ತಾವನೆಗಳ ಪೈಕಿ ಶೇ.50ರಷ್ಟನ್ನು ಒಂದು ತಿಂಗಳ ಒಳಗೆ ಇತ್ಯರ್ಥಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮನೆ ನಿವೇಶನಕ್ಕಾಗಿ ಕಾದಿರಿಸಿದ ಜಾಗವನ್ನು ನಿವೇಶನರಹಿತರಿಗೆ ನೀಡುವ ಸಂಬಂಧ ಎದುರಾಗಿರುವ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಇತ್ಯರ್ಥ ಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡ ಲಾಗುವುದು ಎಂದವರು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಂದ್ರಕಲಾ, ಮೀನಾಕ್ಷಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Write A Comment