ಕುಂದಾಪುರ: ಕರ್ನಾಟಕ ಕರಾವಳಿಯಲ್ಲಿ ಪ್ರಾಕೃತಿಕ ವೈಚಾರಿಕತೆಯಿಂದ ಕೂಡಿದ ಅದೆಷ್ಟೋ ಕೌತುಕದ ಸ್ಥಾನಗಳು ಅಗಾಧವಾಗಿದೆ, ಅದಕ್ಕೆ ಉತ್ತಮ ನಿದರ್ಶನ ಎಂಬಂತೆ ಕುಂದಾಪುರ ತಾಲೂಕಿನ ಬಿಜೂರು ಗ್ರಾಮದ ಹೊಸ್ಕೋಟೆಯಲ್ಲಿನ ಬೃಹದಾಕಾರದ ಬಂಡೆಯ ಮೇಲೆ ಇರುವ ಗೊದ್ದಲು ಮರದಲ್ಲಿರುವ ಈ ಬೊಬ್ಬರ್ಯ ಸ್ಥಾನವು ಕಾರಣಿಕ ಸ್ಥಳವಾಗಿದ್ದು, ಇಲ್ಲಿನ ಜನರ ಪಾಲಿಗೆ ನಂಬಿಕೆಯ ತಾಣವಾಗಿದೆ.
ಇಂದಿನ ಆಧುನಿಕತೆಯ ನಾಗಲೋಟದಲ್ಲಿ, ಸಂಪತ್ತು ಸವಲತ್ತುಗಳಿಂದ ದೇವಾಲಯವನ್ನು ಆರ್‌ಸಿಸಿ ಛಾವಣೆಯ ಕಟ್ಟಡವನ್ನು ಕಟ್ಟುವುದರ ಮೂಲಕ ದೇವರನ್ನು ಬಂಧಿಯಾಗುವಂತೆ ಮಾಡಲಾಗುತ್ತಿದೆ. ಅದೆಷ್ಟೊ ದೇವಾಲಯಗಳು ಪ್ರಾಕೃತಿಕವಾಗಿ ಕಂಗೊಳಿಸುತ್ತಿದ್ದರೂ ತಮ್ಮ ಪ್ರತಿಷ್ಠೆಯ ಉದ್ದೇಶದಿಂದ ಮನುಷ್ಯ ಅದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆರ್‌ಸಿಸಿಯ ಮಹಡಿಯ ಕಟ್ಟಡವನ್ನು ಕಟ್ಟಿ ಪ್ರಕೃತಿಯನ್ನು ವಿನಾಶಕ್ಕೆ ಕಾರಣನಾಗುತ್ತಿದ್ದಾನೆ. ಆದರೆ ನದಿ. ಕಾಡು, ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಪ್ರಕೃತಿಯ ಮಡಿಲಲ್ಲಿರುವ ಪ್ರಾಚೀನ ಶೃದ್ಧಾ ಕೇಂದ್ರಗಳು ಭಕ್ತರ ಪಾಲಿಗೆ ಪವಿತ್ರ ಶಕ್ತಿ ಕೇಂದ್ರವಾಗಿ ಜನರನ್ನು ಇಂದಿಗೂ ಆಕರ್ಷಿಸುತ್ತಿದೆ.
ರಾ. ಹೆ. 66 ನಾಯ್ಕನಕಟ್ಟೆಯಿಂದ ಪೂರ್ವಾಭಿಮುಖವಾಗಿ 3 ಕಿ,ಮೀ. ದೂರದ ಅಂತರದಲ್ಲಿ ಹೊಸ್ಕೋಟೆಯಲ್ಲಿ ಸುಮಾರು 8 ಅಡಿ ಎತ್ತರದ ಬಂಡೆಯ ಮೇಲಿರುವ ಬೃಹದಾಕಾರದ ಗೊದ್ದಲದ ಮರವೇ ಈ ಬೊಬ್ಬರ್ಯನ ಸ್ಥಾನವಾಗಿದೆ. ಇದನ್ನು ಮೋಟುಗಾಲು ಬೊಬ್ಬರ್ಯ ಎಂದು ಕರೆಯಲಾಗುತ್ತದೆ. ಪ್ರಕೃತಿಯ ಮಡಿಲಲ್ಲಿರುವ ಈ ಸ್ಥಾನಕ್ಕೆ ಯಾವುದೇ ಕಟ್ಟಡವಾಗಲಿ, ಪೂಜೆಗೆ ನಿರ್ದಿಷ್ಟ ಅರ್ಚಕರಾಗಲಿ ಇರದೇ ಊರಿನ ಎಲ್ಲರೂ ಯಾವುದೇ ಜಾತಿ ಭೇದದ ತಾರತಮ್ಯವಿಲ್ಲದೇ ಎಲ್ಲರಿಗೂ ತಾವೇ ಸ್ವತಃ ಪೂಜೆ ಪುರಸ್ಕಾರ ಸಲ್ಲಿಸಲು ಅವಕಾಶವಿರುವ ಅಪರೂಪದ ಕಾರಣಿಕ ಸ್ಥಳವಾಗಿದೆ.
ಇತಿಹಾಸ : ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಬೃಹದಾಕಾರದ ಕೋಟೆ ಇದ್ದಿತ್ತು. ಆ ಕೋಟೆಯ ರಕ್ಷಣೆಗಾಗಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಶಕ್ತಿಗಳಿದ್ದು, ಅದರಲ್ಲಿ ಒಂದು ಶಕ್ತಿ ಈ ಮೋಟುಗಾಲು ಬೊಬ್ಬರ್ಯ ಎಂದು ಹೇಳಲಾಗಿದೆ. ಒಂದು ದಿನ ಈ ಕೋಟೆಯ ರಕ್ಷಣೆ ಮಾಡುತ್ತಿದ್ದಾಗ ದಂಡಿನವರು (ಪರಕೀಯರು) ಈ ಕೋಟೆಯ ಮೇಲೆ ಆಕ್ರಮಣ ಮಾಡಿದರು. ಆಗ ಬೊಬ್ಬರ್ಯ ಅವರನ್ನು ತಡೆಹಿಡಿದು ನೆಲಕಚ್ಚಿಸಿದ ಎಂಬ ಕುರುಹು ಇಲ್ಲಿನ ಸಮೀಪ ಕಲ್ಲಿನಲ್ಲಿದೆ ಎಂಬ ಪ್ರತೀತಿಯಿದೆ.
ಇಂದಿಗೂ ಈ ಮೋಟುಗಾಲು ಬೊಬ್ಬರ್ಯನಿಗೆ ಕೋಟೆ ಕಾಯುವ ಕೆಲಸವಿಲ್ಲದಿದ್ದರೂ ಈ ಪ್ರದೇಶದ ಜನರ ಕಷ್ಟ ನಿವಾಹರಣೆಗೆ ಅದರಲ್ಲಿಯೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಇಲ್ಲಿ ಪ್ರಾರ್ಥನೆ ಮಾಡಿಕೊಂಡರೆ ಸಂಪೂರ್ಣ ಇಷ್ಟಾರ್ಥ ಲಭಿಸುತ್ತದೆ ಎಂಬ ನಂಬಿಕೆ ಇಂದಿಗೂ ಇಲ್ಲಿನ ಜನರಲ್ಲಿದೆ. ಮುಂಗಾರು ನಾಟಿ ಕಾರ್ಯದ ಬಳಿಕ ಕೃಷಿಕರು ತಮ್ಮ ಜಾನುವಾರುಗಳನ್ನು ಮೇಯಿಸಲು ಈ ಮಾರ್ಗದಲ್ಲಿ ಹೋಗುವಾಗ ಈ ಬೊಬ್ಬರ್ಯನನ್ನು ನೆನೆಸಿಕೊಂಡೆ ಹೋಗಬೇಕು ಇಲ್ಲದಿದ್ದರೇ ಏನಾದರೂ ಅವಘಡ ಸಂಭವಿಸುವುದು ನಿಶ್ಚಿತ ಎಂಬ ಭಾವನೆ ಇಲ್ಲಿನವರಲ್ಲಿದೆ, ಅಲ್ಲದೇ ಇದಕ್ಕೆ ಬಹಳಷ್ಟು ನಿದರ್ಶನಗಳಿದೆ ಎನ್ನುತ್ತಾರೆ ಸ್ಥಳೀಯರು.
ನೂರಾರು ವರ್ಷಗಳ ಇತಿಹಾಸವಿರುವ ಬಂಡೆಯ ಮೇಲಿನ ಗೊದ್ದಲ ಮರದಲ್ಲಿರುವ ಮೋಟುಕಾಲು ಬೊಬ್ಬರ್ಯನ ಸ್ಥಾನದಲ್ಲಿ ಯಾವುದೇ ವಾರ್ಷಿಕ ನೇಮ, ಹೋಮ ಇರುವುದಿಲ್ಲಾ ಆದರೆ ಇತ್ತೀಚಿನ ದಿನಗಳಲ್ಲಿ ಭಜನೆ ನಡೆಯುತ್ತಿದೆ, ಅಲ್ಲದೇ ಇಲ್ಲಿ ಅದ್ದೂರಿಯ ಹರಕೆಯು ಸಲ್ಲಿಸಬೇಕಾಗಿಲ್ಲ, ಮನಸ್ಸಿನಲ್ಲಿ ಪ್ರಾರ್ಥಿಸಿಕೊಂಡರೆ ಸಾಕು ನಮ್ಮ ಕಷ್ಟಗಳನ್ನು ನಿವಾಹರಣೆ ಮಾಡುತ್ತಾನೆ. ದಂಡು ಬಂದದನ್ನು ಬೆಂಡು ಮಾಡಿದ ಈ ಬೊಬ್ಬರ್ಯ ಎಂತಾ ಕಷ್ಟ ಇದ್ದರೂ ಅದನ್ನು ನಿವಾಹರಿಸುತ್ತಾನೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ಇಲ್ಲಿಗೆ ರುವ ಭಕ್ತರೊಬ್ಬರು.

